ADVERTISEMENT

ಗೆಲ್ಲಲೇಬೇಕು ಒಳ್ಳೆತನ...

ಗಣೇಶ ವೈದ್ಯ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಬ್ಯೂಟಿಫುಲ್‌ ಮನಸುಗಳು- ಶ್ರುತಿ ಹರಿಹರನ್‌, ನೀನಾಸಂ  ಸತೀಶ್‌
ಬ್ಯೂಟಿಫುಲ್‌ ಮನಸುಗಳು- ಶ್ರುತಿ ಹರಿಹರನ್‌, ನೀನಾಸಂ ಸತೀಶ್‌   
* ‘ಬ್ಯೂಟಿಫುಲ್ ಮನಸುಗಳು’ ತಂಡದಲ್ಲಿ ನೀವೂ ಒಬ್ಬರಾದದ್ದು ಹೇಗೆ?
ಭಿನ್ನ ರೀತಿಯ ಸಿನಿಮಾ ಮಾಡುವ ನನ್ನೊಳಗಿನ ಆಸೆಗೆ ಸ್ಪಂದಿಸಿದ ಕಥೆ ಇದು. ಒಂಚೂರೂ ಗೊಂದಲವಿಲ್ಲದೆ ಇದನ್ನು ಒಪ್ಪಿಕೊಂಡೆ. ಒಂದೊಳ್ಳೆ ಸಿನಿಮಾ ಆಗಬೇಕಾದಾಗ ಒಳ್ಳೆಯ ಮನಸುಗಳು ಒಂದಾಗಬೇಕು. ನಾನು ಅದನ್ನೇ ಮ್ಯಾಜಿಕ್ ಎಂದುಕೋಳ್ಳುತ್ತೇನೆ. ಅದು ಈ ಸಿನಿಮಾದಲ್ಲಿ ಸಂಭವಿಸಿದೆ.
 
* ಏನದು ಒಂದೇ ಬಾರಿಗೆ ಒಪ್ಪಿಕೊಳ್ಳುವಂಥ ಬ್ಯೂಟಿಫುಲ್ ಅಂಶ?
ಯಾರ ಬಗೆಗಾದರೂ ಸಮಾಜ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು. ಒಬ್ಬ ವ್ಯಕ್ತಿ ಸರಿಯಿಲ್ಲ ಎನ್ನುವಾಗ ತುಂಬಾ ಯೋಚನೆ ಮಾಡಬೇಕು. ಒಮ್ಮೆ ಕಳಂಕ ಅಂಟಿಕೊಂಡರೆ ಜೀವಮಾನವಿಡೀ ಅದರಿಂದ ಹೊರಬರುವುದು ಕಷ್ಟ. ಹಾಗೆ ಒಂದು ಹೆಣ್ಣು ಸಮಾಜದ ದೂಷಣೆಗಳನ್ನು ಮೀರುವ ಕಥೆಯಿದು. 2013ರಲ್ಲಿ ನಡೆದ ನೈಜ ಘಟನೆಯನ್ನು ಸಿನಿಮಾ ಮಾಡಿದ್ದೇವೆ. ಮಂಗಳೂರಲ್ಲಿ ಕುಟುಂಬವೊಂದಕ್ಕೆ ಆದ ಅನ್ಯಾಯವನ್ನು ಕೇಳಿ ಆಘಾತವಾಯಿತು. ಮೈ ಝುಂ ಎಂದಿತು.
 
ಒಂದು ಕುಟುಂಬದ ಬಗೆಗೆ ಸಮಾಜ ಇಷ್ಟೊಂದು ಕಠೋರವಾಗಿ ನಡೆದುಕೊಳ್ಳುತ್ತದಾ ಎನ್ನಿಸಿತು. ಪ್ರೀತಿಯಿಂದಲೇ ಎಲ್ಲವನ್ನೂ ಗೆಲ್ಲಲು ಸಾಧ್ಯ. ಪ್ರೀತಿ ಅಲ್ಲದೆ ಬೇರೇನೂ ಇಲ್ಲ ಎಂದು ಸಿನಿಮಾ ಹೇಳುತ್ತದೆ. ಒಲವೇ ಜೀವನ ಸಾಕ್ಷಾತ್ಕಾರ ಎಂದು ಈ ಕಥೆಯನ್ನು ಅರ್ಥೈಸಬಹುದು. ‘ಲೂಸಿಯಾ’ಕ್ಕೆ ‘ನೀ ಮಾಯೆಯೊಳಗೊ’ ಹಾಡು ಎಷ್ಟು ಸೂಕ್ತವಾಗಿತ್ತೋ ಹಾಗೆ ಈ ಚಿತ್ರಕ್ಕೆ ‘ಸೋರುತಿಹುದು ಮನೆಯ ಮಾಳಿಗಿ’ ಹಾಡು ಬಳಸಿದ್ದು ತುಂಬಾ ಸೂಕ್ತವಾಗಿದೆ.
 
* ನಿಮ್ಮ ಪಾತ್ರದ ಬಗ್ಗೆ ಹೇಳಿ.
ಅಪ್ಪನ ದುಡ್ಡು ಖರ್ಚು ಮಾಡಿಕೊಂಡು, ಕೆಲಸವಿಲ್ಲದೆ ಓತ್ಲಾ ಹೊಡೆಯುತ್ತ ಉಡಾಫೆ ಜೀವನ ನಡೆಸುವವರೆಲ್ಲ ಜವಾಬ್ದಾರಿಯಿಂದ ನಡೆದುಕೊಂಡರೆ ಮಾತ್ರ ದೇಶ, ಮನೆ ಮತ್ತು ತಾನು ಚೆನ್ನಾಗಿರುತ್ತೇವೆ ಎಂಬುದು ಅರಿವಾಗಬೇಕು. ಅಂಥ ಪಾತ್ರ ನನ್ನದು. ಖಾಲಿಪೀಲಿಯಾಗಿ ಓಡಾಡಿಕೊಂಡಿರುವ ಹುಡುಗ ಸಮಾಜಮುಖಿಯಾಗಿ ಯೋಚಿಸಲು ಶುರು ಮಾಡುತ್ತಾನೆ. ಯಾರದೋ ಪರವಾಗಿ ನಿಲ್ಲುತ್ತಾನೆ, ಒಬ್ಬ ಪ್ರಬುದ್ಧ ಹುಡುಗ ಏನು ಮಾಡಬಲ್ಲನೋ ಅಂಥ ಕೆಲಸ ಮಾಡಲು ತೊಡಗುತ್ತಾನೆ. 
 
ಅದು ಹೇಗೆ ಎಂಬುದೇ ಮುಖ್ಯ ಸಂಗತಿ. ಸಮಾಜ ಒಬ್ಬನನ್ನು ಹೀರೊ ಎಂದು ನೋಡಬೇಕಾದರೆ ಆತ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ತೆರೆಯ ಮೇಲೆ ಉಡಾಫೆಯಾಗಿ ವರ್ತಿಸುವವನನ್ನು ಜನರು ಮಾದರಿಯಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂಬುದು ನನ್ನ ಅನಿಸಿಕೆ. ಅದು ಈ ಪಾತ್ರದಲ್ಲಿ ನನಗೆ ಈಡೇರಿದೆ.
 
ನನ್ನ ಪಾತ್ರಕ್ಕೆ ದ್ವಿತೀಯಾರ್ಧದಲ್ಲಿ ಒಂದಷ್ಟು ನಿಶ್ಯಬ್ದವಿದೆ. ಅದು ಇಷ್ಟವಾಯಿತು. ನಾಯಕ ಯಾವಾಗಲೂ ಮಾತನಾಡುತ್ತ ಇರಬಾರದು. ಎಷ್ಟು ಸಾಧ್ಯವೋ ಅಷ್ಟು ಕಮ್ಮಿ ಮಾತನಾಡಬೇಕು. ದೃಶ್ಯಗಳ ಮೂಲಕವೇ ಕಥೆ ಹೇಳಲಾಗಿದೆ. ಅದೂ ಈ ಸಿನಿಮಾದ ಬ್ಯೂಟಿಗಳಲ್ಲಿ ಒಂದು.
 
* ಜಯತೀರ್ಥ ಅವರೊಂದಿಗಿನ ಕೆಲಸದ ಅನುಭವ ಹೇಗಿತ್ತು?
ನಾವಿಬ್ಬರೂ ರಂಗಭೂಮಿ ಹಿನ್ನೆಲೆಯಿಂದ ಬಂದಿರುವುದರಿಂದ ನಮ್ಮ ಯೋಚನಾಲಹರಿ ಚೆನ್ನಾಗಿ ಹೊಂದಿಕೆ ಆಯಿತು. ನಾನು ಸ್ವಲ್ಪ ಕಮರ್ಷಿಯಲ್ ಆಗಿ ಯೋಚಿಸುತ್ತೇನೆ. ಅವರು ಕಲಾತ್ಮಕವಾಗಿ, ತಾತ್ವಿಕವಾಗಿ ಯೋಚಿಸುತ್ತಾರೆ. ಇವೆರಡೂ ಸರಿಯಾಗಿ ಬ್ಲೆಂಡ್ ಆಗಿದೆ. ಇಲ್ಲಿ ಅಪ್ಪಟ ನಿರ್ದೇಶಕರ ನಟನಾಗಿದ್ದೇನೆ. ಪಕ್ಕಾ ಕಮರ್ಷಿಯಲ್, ಜೊತೆಗೆ ಸೆನ್ಸಿಬಲ್ ಸಿನಿಮಾ. ಅವರಿಗೋಸ್ಕರವೇ ಈ ಸಿನಿಮಾ ಗೆಲ್ಲಬೇಕು ಎಂಬುದು ನನ್ನ ಆಶಯ.
 
* ‘ಲೂಸಿಯಾ’ ನಂತರ ಮತ್ತೆ ಶ್ರುತಿ ಹರಿಹರನ್ ಜೊತೆ ಕೆಲಸ ಮಾಡಿದ್ದೀರಿ. ಈ ಬಗ್ಗೆ?
ಮೂರು ವರ್ಷಗಳ ಅವಧಿಯಲ್ಲಿ ಇಬ್ಬರೂ ಸಾಕಷ್ಟು ಸಿನಿಮಾ ಮಾಡಿದ್ದೇವೆ. ನಟನೆ, ಸಂಬಂಧ, ಸ್ನೇಹಗಳ ಬಗೆಗಿನ ನಮ್ಮ ಪ್ರಬುದ್ಧತೆಯ ಮಟ್ಟ ಹೆಚ್ಚಿದೆ. ನನ್ನ ಹಾಗೂ ಶ್ರುತಿ ಇಬ್ಬರ ಅಭಿಮಾನಿ ವರ್ಗವನ್ನೂ ತೃಪ್ತಿಪಡಿಸುವ ಕೆಲಸವನ್ನು ನಿರ್ದೇಶಕರು ಸರಿಯಾಗಿಯೇ ನಿಭಾಯಿಸಿದ್ದಾರೆ. ನನ್ನ ಪ್ರಕಾರ ಶ್ರುತಿ ಪಾಲಿಗೆ ಈ ಸಿನಿಮಾದ ಪಾತ್ರ ಅತ್ಯುತ್ತಮವಾದದ್ದು. ಹೆಣ್ಣುಮಕ್ಕಳಿಗೆ ಪ್ರೇರಣೆ ಆಗುವಂಥ ಪಾತ್ರದಲ್ಲಿ ಅವರದು ಅದ್ಭುತ ನಟನೆ.
 
* ಈ ಚಿತ್ರದ ಮೇಲೆ ನಿಮ್ಮ ನಿರೀಕ್ಷೆ ಯಾವ ಬಗೆಯದು? 
ನನ್ನ ನಿರೀಕ್ಷೆ ಶೂನ್ಯ. ನಿರೀಕ್ಷೆ ಇಟ್ಟುಕೊಂಡಾಗ ನೋವಾಗುತ್ತದೆ. ನಿರೀಕ್ಷೆ ಇಲ್ಲದೇ ಜನ ಮೆಚ್ಚಿಕೊಂಡಾಗ ಖುಷಿಯಾಗುತ್ತದೆ. ನಾಯಕನಾಗಿ ನಟಿಸಿದ ಎಂಟರಲ್ಲಿ ಐದು ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಈ ಚಿತ್ರ ಜನರ ನಿರೀಕ್ಷೆಯನ್ನು ಪೂರೈಸುತ್ತದೆಯೇ ಎಂಬುದಷ್ಟೇ ನನ್ನ ನಿರೀಕ್ಷೆ. ಚಿತ್ರಮಂದಿರದಲ್ಲಿ ಪ್ರೇಕ್ಷಕ ಎಂಜಾಯ್ ಮಾಡುವುದನ್ನು ನೋಡಲು ಕಾತರನಾಗಿದ್ದೇನೆ.
 
* ‘ರಾಕೆಟ್’ ನಿಮ್ಮ ನಿರೀಕ್ಷೆಯಷ್ಟು ಯಶಸ್ವಿಯಾಗಲಿಲ್ಲ. ಆ ನಿರಾಸೆಯನ್ನು ಹೇಗೆ ಮೀರಿದಿರಿ?
ಅದು ನನ್ನ ಜೀವನದ ಕಹಿ ಗಳಿಗೆ. ಹಾಗೆಂದು ಆ ಸಿನಿಮಾ ಮಾಡಿದ್ದು ತಪ್ಪು ಎನ್ನಿಸುತ್ತಿಲ್ಲ. ‘ರಾಕೆಟ್’ ನನ್ನ ಜೀವನದ ವಿಶೇಷ ಅನುಭವ. ಯಾವ ರೀತಿಯ ಕಥೆಗಳನ್ನು ಒಪ್ಪಿಕೊಳ್ಳಬೇಕು, ಯಾವ ಸಿನಿಮಾ ಮಾಡಬೇಕು ಎಂಬುದಕ್ಕೆ ಅದೊಂದು ಪಾಠವಾಯಿತು. ಆ ಚಿತ್ರದ ನಂತರ ಎರಡು ತಿಂಗಳು ಜಗತ್ತಿನ ಅನೇಕ ಸಿನಿಮಾಗಳನ್ನು ನೊಡಿದೆ. ಆಗ ಜಗತ್ತಿನ ಸಿನಿಮಾ ಟ್ರೆಂಡ್ ಯಾವ ರೀತಿ ಹೋಗುತ್ತಿದೆ ಎಂದು ಅರಿವಾಯಿತು. 
 
* ಮತ್ತೆ ಸಿನಿಮಾ ನಿರ್ಮಿಸುವಿರಾ?
ಹೌದು. ಈ ವರ್ಷ ಒಂದು ಸಿನಿಮಾ ಮಾಡಲಿದ್ದೇನೆ. ಯಾವ ರೀತಿ ಸಿನಿಮಾ ಎಂದು ಇನ್ನೂ ನಿಕ್ಕಿಯಾಗಿಲ್ಲ. ಪ್ರತಿ ವರ್ಷವೂ ಒಂದೊಂದು ಸಿನಿಮಾ ನಿರ್ಮಾಣ ಮಾಡುವುದು ಖಚಿತ.
 
* ಬೇರೆ ಸಿನಿಮಾಗಳು?
ರವಿ ಶ್ರೀವತ್ಸ ನಿರ್ದೇಶನದ ‘ಟೈಗರ್ ಗಲ್ಲಿ’ ಬಹುತೇಕ ಪೂರ್ಣಗೊಂಡಿದೆ. ಜೇಕಬ್ ವರ್ಗೀಸ್ ನಿರ್ದೇಶನದಲ್ಲಿ ‘ಚಂಬಲ್’ ಕೆಲಸ ನಡೆಯುತ್ತಿದೆ. ಈ ಸಿನಿಮಾಗಳಲ್ಲಿ ಈವರೆಗೆ ನೋಡಿರದ ಸತೀಶನನ್ನು ನೊಡುತ್ತೀರಿ. 
 
* ನಟನೆ ಹೊರತಾಗಿ ಇನ್ನೇನು ನಡೆಯುತ್ತಿದೆ?
ನಿರ್ದೇಶನದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇದೆ. ನಾನೇ ಸಿದ್ಧಪಡಿಸಿಟ್ಟುಕೊಂಡ, ಎಲ್ಲ ಕಾಲಕ್ಕೂ ಸಲ್ಲುವ ಮೂರು ಸ್ಕ್ರಿಪ್ಟ್‌ಗಳಿವೆ. ಆದರೆ ಇನ್ನೂ ಮೂರು ವರ್ಷಗಳ ಕಾಲ ನಟನೆಯಲ್ಲೇ ಬಿಜಿ. ಉತ್ತಮ ನಿರ್ದೇಶಕರು ಒಳ್ಳೆಯ ಸಿನಿಮಾಗಳನ್ನು ತರುತ್ತಿದ್ದಾರೆ. ಒಂದು ಸಿನಿಮಾ ನಿರ್ದೇಶನ ಮಾಡಲು ಹೋದರೆ ಮೂರು ಸಿನಿಮಾಗಳು ಕೈತಪ್ಪುತ್ತವೆ.
 
* ಸಿನಿಮಾ ಬಿಟ್ಟು?
ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ‘ರಾಕೆಟ್’ ಸಂದರ್ಭದಲ್ಲಿ ರೈತರಿಗೆ ಸಹಾಯ ಮಾಡುವ ಯೋಜನೆಗೆ ಚಾಲನೆ ನೀಡಿದ್ದೆ. ಅದು ಮುಂದುರೆದಿದೆ. ರೈತರ ಜೊತೆ ಕೆಲಸ ಮಾಡುವ, ಅವರ ಸಮಸ್ಯೆಗಳಿಗೆ ಸ್ಪಂದಿಸುವ, ಗಿಡಗಳನ್ನು ನೆಡಿಸುವ ಆಸೆಗಳೆಲ್ಲ ಇವೆ. ನಟನಾ ತರಬೇತಿ ಶಾಲೆ ಶುರು ಮಾಡಬೇಕು.  ಇದಕ್ಕೆಲ್ಲ ಒಂದಷ್ಟು ಹಣ, ಸಮಯ ಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.