ADVERTISEMENT

ಗೋವಾದಲ್ಲಿ ಜಾಲಿ ರೈಡ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST

ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಚಿತ್ರ ‘ಗೋವಾ’ ಇಂದು (ಮಾ. 6) ಬಿಡುಗಡೆ ಭಾಗ್ಯ ಕಾಣುತ್ತಿದೆ. ತಮಿಳಿನ ‘ಗೋವಾ’ ಚಿತ್ರವನ್ನು ಕನ್ನಡಕ್ಕೆ ತಂದಿದ್ದಾರೆ ನಿರ್ಮಾಪಕ ಶಂಕರೇ ಗೌಡ ಅವರು. ಕೋಮಲ್, ತರುಣ್, ಶ್ರೀಕಿ, ಶರ್ಮಿಳಾ ಮಾಂಡ್ರೆ, ಸೋನು ಗೌಡ ಹಾಗೂ ಇಂಗ್ಲೆಂಡ್‌ನಿಂದ ಬಂದಿರುವ ರಚೇಲ್ ಅಭಿನಯದ ಬಹು ತಾರಾಗಣದ ‘ಗೋವಾ’ ಚಿತ್ರಕ್ಕೆ ಸೂರ್ಯ ಅವರು ಆ್ಯಕ್ಷನ್–ಕಟ್ ಹೇಳಿದ್ದಾರೆ.

ಬಹುತೇಕರಿಗೆ ಇಂದಿಗೂ ಗೋವಾ ತುಂಬಾ ಆಕರ್ಷಕವಾದ ಸ್ಥಳ. ಆದರೆ ಎಲ್ಲಿಗೇ ಹೋದರೂ ನಮ್ಮೂರೇ ನಮಗೆ ಹಿತ ಎಂಬ ಸಂದೇಶವನ್ನು ಚಿತ್ರದ ಮೂಲಕ ನೀಡಲು ಹೊರಟಿದ್ದಾರೆ ನಿರ್ದೇಶಕ ಸೂರ್ಯ. ಒಂದರ್ಥದಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುದು ಚಿತ್ರದ ಸಂದೇಶ.

ಕೋಮಲ್‌ಗೆ ಗೋವಾ ನೆಚ್ಚಿನ ತಾಣವಾಗಿದ್ದರೂ ಇದುವರೆಗೂ ಗೋವಾದಲ್ಲಿ ಅವರು ಸುತ್ತಾಡಿರಲಿಲ್ಲವಂತೆ. ಈ ಚಿತ್ರತಂಡದೊಂದಿಗೆ ಸೇರಿ ಮೊದಲ ಬಾರಿ ಗೋವಾವನ್ನು ಕಣ್ತುಂಬಿಕೊಂಡಿರುವ ಅವರು, ಶೂಟಿಂಗ್ ಮುಗಿಸಿ ಕ್ಯಾಸಿನೋ ಆಡುತ್ತಿದ್ದುದನ್ನು ನೆನಪಿಸಿಕೊಂಡರು. ಪರೀಕ್ಷೆ, ವಿಶ್ವಕಪ್ ಕ್ರಿಕೆಟ್ ನಡುವೆ ಚಿತ್ರ ಬಿಡುಗಡೆ ಆಗುತ್ತಿರುವುದು ಕೊಂಚ ಭಯ ತಂದಿದ್ದರೂ ಈ ಬೇಸಿಗೆಗೆ ಒಳ್ಳೆಯ ಚಿತ್ರ ಎನ್ನುತ್ತಾರೆ ಅವರು. ರಚೇಲ್‌ಗೆ ಕೋಮಲ್ ಮುತ್ತು ಕೊಡುವ ದೃಶ್ಯವೂ ಚಿತ್ರದಲ್ಲಿದೆ. ‘ಈ ದೃಶ್ಯವನ್ನು ನೀನು ನೋಡಬೇಡ ಎಂದು ನನ್ನ ಹೆಂಡತಿಗೆ ಹೇಳಿದ್ದೇನೆ’ ಎಂದು ಚಟಾಕಿ ಹಾರಿಸಿದರು ಕೋಮಲ್.

ಸಿನಿಮಾ ಆರಂಭವಾಗಿ ಎರಡು ವರ್ಷಗಳಾದವು ಎಂಬುದು ತರುಣ್‌ಗೆ ಕೊಂಚ ಬೇಸರವಾದರೂ, ಯಾವ ದೃಶ್ಯವೂ ಹಳಸಲು ಅನ್ನಿಸುವುದಿಲ್ಲ. ಇಂದಿಗೂ ಎಲ್ಲವೂ ತಾಜಾ ಎನ್ನುವಂತಿದೆ ಎನ್ನುತ್ತಾರೆ. ಸೋನು ಗೌಡ ತರುಣ್‌ಗೆ ಜೋಡಿಯಾಗಿದ್ದಾರೆ. ಶ್ರೀಕಿ ತಮ್ಮ ತಂಡಕ್ಕೆ ಶುಭ ಕೋರಿದರು.

ಒಂದು ರಾತ್ರಿ ನಿದ್ದೆ ಬಾರದೇ ಇದ್ದಾಗ ತಮಿಳಿನ ‘ಗೋವಾ’ ಚಿತ್ರವನ್ನು ನೋಡಿದ ನಿರ್ಮಾಪಕರು, ಚಿತ್ರ ಇಷ್ಟು ಚೆನ್ನಾಗಿದೆಯಲ್ಲ. ಆದರೂ ಯಾಕಿನ್ನೂ ಕನ್ನಡಕ್ಕೆ ತಂದಿಲ್ಲ ಎಂದುಕೊಂಡು ಅದರ ರಿಮೇಕ್ ಹಕ್ಕನ್ನು ಪಡೆದಿದ್ದಂತೆ. ತಾನು ಆರಂಭಿಸಿದ ಚಿತ್ರಗಳು ಬಿಡುಗಡೆಯಾಗಲು ತಡವಾಗಿದ್ದರೂ ಅವೆಲ್ಲ ಹಿಟ್ ಆಗಿವೆ. ಇದೂ ಹಾಗೇ ಆಗುತ್ತದೆ ಎಂಬ ಭರವಸೆ ಅವರದು. ರಜತ್ ಮಂಜುನಾಥ್ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.