ADVERTISEMENT

‘ಚಾಣಾಕ್ಷ’ನ ಮೈನವಿರೇಳಿಸುವ ಸಾಹಸ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ಸುಶ್ಮಿತಾ ಗೌಡ
ಸುಶ್ಮಿತಾ ಗೌಡ   

ಕೈಯಲ್ಲಿ ಮೈಕ್‌ ಹಿಡಿದಿದ್ದ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರ ಚಿತ್ತ ತೊಂಬತ್ತರ ದಶಕದಲ್ಲಿ ತೆರೆಕಂಡ ‘ಲಾಕಪ್ ಡೆತ್‌’ ಚಿತ್ರದತ್ತ ಹೊರಳಿತು. ‘ಚಾಣಾಕ್ಷ’ ಚಿತ್ರಕ್ಕೂ ಅತ್ಯುತ್ತಮವಾಗಿ ಸಾಹಸ ದೃಶ್ಯದ ಸನ್ನಿವೇಶ ಕಟ್ಟಿಕೊಟ್ಟಿರುವ ಧನ್ಯತಾ ಭಾವ ಅವರ ಮೊಗದಲ್ಲಿತ್ತು. ‘ಲಾ‍ಕಪ್ ಡೆತ್‌’, ‘ಜಾಕಿಚಾನ್’ ಚಿತ್ರದ ಬಳಿಕ ಉತ್ತಮವಾಗಿ ಸಾಹಸ ನಿರ್ದೇಶಿಸಿದ ಖುಷಿ ‘ಚಾಣಾಕ್ಷ‘ ಚಿತ್ರದ ಮೂಲಕ ಸಿಕ್ಕಿದೆ ಎಂದರು ಥ್ರಿಲ್ಲರ್ ಮಂಜು.

ಅದು ‘ಚಾಣಾಕ್ಷ’ ಚಿತ್ರದ ಸುದ್ದಿಗೋಷ್ಠಿ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಧರ್ಮ ಕೀರ್ತಿರಾಜ್‌ ಅವರನ್ನು ಲವರ್‌ಬಾಯ್‌ ಶೇಡ್‌ನಿಂದ ಮಾಸ್‌ ಲುಕ್‌ನಲ್ಲಿ ತೋರಿಸಲು ನಿರ್ದೇಶಕ ಮಹೇಶ್‌ ಚಿನ್ಮಯ್‌ ಹೊರಟಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗಲಿವೆ ಎಂಬುದು ಅವರ ಅಂಬೋಣ.

(ಥ್ರಿಲ್ಲರ್‌ ಮಂಜು)

ADVERTISEMENT

‘ಹನ್ನೆರಡು ನಿಮಿಷದ ಸಾಹಸ ದೃಶ್ಯ ಚಿತ್ರೀಕರಿಸಲಾಗಿದೆ. ಇನ್ನೂ ಮೂರು ನಿಮಿಷದ ಚಿತ್ರೀಕರಣ ಬಾಕಿಯಿದೆ. ಈ ಸಾಹಸದ ಸನ್ನಿವೇಶವನ್ನು ಕ್ಲೈಮ್ಯಾಕ್ಸ್‌ಗೆ ಅಳವಡಿಸುವುದಿಲ್ಲ. ಚಿತ್ರದ ಆರಂಭದಲ್ಲಿಯೇ ನಾಯಕನ ಪ್ರವೇಶಕ್ಕೆ ಇದನ್ನು ಬಳಸಲಾಗುತ್ತಿದೆ’ ಎಂದ ಮಂಜು ಅವರ ಮಾತಿನಲ್ಲಿ ಪ್ರೇಕ್ಷಕರಿಗೆ ಈ ಸಾಹಸ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿತ್ತು.

‘ನಿಷ್ಠಾವಂತ ತಹಶೀಲ್ದಾರ್‌ನ ಸುತ್ತ ಈ ಕಥೆ ಹೆಣೆಯಲಾಗಿದೆ. ಕಾಣದ ಕೈಗಳ ಕುತಂತ್ರಕ್ಕೆ ಸಿಲುಕಿ ಈ ಅಧಿಕಾರಿ ಸಂಕಷ್ಟಕ್ಕೆ ಸಿಲುಕುತ್ತಾನೆ. ಕೊನೆಗೆ, ಬುದ್ಧಿವಂತ ಮಗ ಆ ವ್ಯೂಹದಿಂದ ಹೇಗೆ ಹೊರಬರುತ್ತಾನೆ ಎಂಬುದೇ ಕಥಾಹಂದರ’ ಎಂದರು ನಿರ್ದೇಶಕ ಮಹೇಶ್‌ ಚಿನ್ಮಯ್.

‘ಇದು ನನ್ನ ಮೂರನೇ ಸಿನಿಮಾ. ಇದೊಂದು ಕೌಟುಂಬಿಕ ಹಾಗೂ ಆ್ಯಕ್ಷನ್ ಸಿನಿಮಾವಾಗಿದೆ’ ಎಂದರು.

ಪ್ರತಿದಿನ ಶೂಟಿಂಗ್‌ಗೆ ಹೋಗುವಾಗಲೂ ಅಪ್ಪ ಕೀರ್ತಿರಾಜ್‌ ಮಗನಿಗೆ ಅಭಿನಯದ ಸೂಕ್ಷ್ಮತೆ ಬಗ್ಗೆ ಹೇಳುತ್ತಿದ್ದರಂತೆ. ಅಪ್ಪನಿಗೆ ಆಯಾ ದಿನದ ಚಿತ್ರದ ಶೂಟಿಂಗ್‌ನ ವಿವರ ಒಪ್ಪಿಸುವುದು ಧರ್ಮ ಅವರ ಕಾಯಕವಾಗಿತ್ತಂತೆ. ಇದನ್ನು ಧರ್ಮ ಕೀರ್ತಿರಾಜ್‌ ಅವರೇ ಹೇಳಿಕೊಂಡರು.

‘ನನ್ನದು ನಗರದಿಂದ ಹಳ್ಳಿಗೆ ಬರುವ ಯುವಕನ ಪಾತ್ರ. ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ. ರೈತರ ಸಮಸ್ಯೆ ಬಗ್ಗೆಯೂ ಚಿತ್ರದಲ್ಲಿ ಹೇಳಿದ್ದೇವೆ’ ಎಂದರು.

(ಧರ್ಮ ಕೀರ್ತಿರಾಜ್)

‘ಈ ಚಿತ್ರದ ಮೂಲಕ ನಾನು ಲವರ್‌ಬಾಯ್‌ ಶೇಡ್‌ನಿಂದ ಹೊರಬಂದಿದ್ದೇನೆ. ನಿರ್ದೇಶಕರು ನನ್ನನ್ನು ಮಾಸ್‌ ಆಗಿ ತೋರಿದ್ದಾರೆ’ ಎಂದರು ಧರ್ಮ ಕೀರ್ತಿರಾಜ್.

ಮಾಡೆಲಿಂಗ್‌ ಕ್ಷೇತ್ರದಿಂದ ಬಂದಿರುವ ಸುಶ್ಮಿತಾ ಗೌಡ ಅವರಿಗೆ ಇದು ಮೊದಲ ಸಿನಿಮಾ. ‘ನನ್ನದು ವಿದೇಶದಿಂದ ಹಳ್ಳಿಗೆ ಬರುವ ಹುಡುಗಿಯ ಪಾತ್ರ. ಹಳ್ಳಿಯನ್ನು ಬದಲಾವಣೆ ಮಾಡಿದ ಯುವಕನ ಮೇಲೆ ನನಗೆ ಪ್ರೀತಿ ಮೂಡುತ್ತದೆ. ಆದರೆ, ಮತ್ತೊಬ್ಬ ನಾಯಕಿಯ ಪ್ರವೇಶದಿಂದ ನನಗೆ ಪ್ರೀತಿ ದಕ್ಕುವುದಿಲ್ಲ’ ಎಂದು ನಕ್ಕರು.

ಹಿರಿಯ ನಟ ಕೀರ್ತಿರಾಜ್, ‘ಈ ಚಿತ್ರದ ಮೂಲಕ ನನ್ನ ಮಗನ ನೈಜ ಪ್ರತಿಭೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.

ವೆಂಕಟೇಶ್‌ಮೂರ್ತಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅಭಿಮಾನ್‌ರಾಯ್ ಸಂಗೀತ ಸಂಯೋಜಿಸಿದ್ದಾರೆ. ಸಿ.ಎಚ್. ರಮೇಶ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

(ಮಹೇಶ್‌ ಚಿನ್ಮಯ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.