ADVERTISEMENT

ಚಿಟ್ಟೆ ಚಾಂಚಲ್ಯದ ಹರ್ಷಿಕಾ

ಕೆ.ಎಚ್.ಓಬಳೇಶ್
Published 2 ನವೆಂಬರ್ 2017, 19:30 IST
Last Updated 2 ನವೆಂಬರ್ 2017, 19:30 IST
ಚಿಟ್ಟೆ ಚಾಂಚಲ್ಯದ ಹರ್ಷಿಕಾ
ಚಿಟ್ಟೆ ಚಾಂಚಲ್ಯದ ಹರ್ಷಿಕಾ   

ಬೆನ್ನ ಮೇಲೆ ಕೆಂಬಣ್ಣದ ಚಿಟ್ಟೆ, ಪಾತರಗಿತ್ತಿಯ ಅಗಲರೆಕ್ಕೆಗಳು ಬೆನ್ನ ಮೇಲೆಲ್ಲ ಹರಡಿದ ಚಿತ್ರ ಹಿಡಿದುಕೊಂಡು ಹರ್ಷಿಕಾ ಮಾತನಾಡುತ್ತಿದ್ದರು. ‘ಈ ಚಿಟ್ಟೆಯ ಚಿತ್ರ ಬಿಡಿಸಿಕೊಳ್ಳುವುದು ಒಂದು ಪಾಠವೇ ಆಗಿತ್ತು. ಚಾಂಚಲ್ಯಕ್ಕೆ ಹೆಸರಾದ ಚಿಟ್ಟೆಯನ್ನು ಬಿಡಿಸಿಕೊಳ್ಳಲು ಮಾತ್ರ ಅದಮ್ಯ ಸಹನೆ ಮತ್ತು ಸಂಯಮ ಬೇಕಿತ್ತು.’

ಎರಡು ವ್ಯತಿರಿಕ್ತ ಗುಣಗಳ ಅಭಿವ್ಯಕ್ತಿ ಪ್ರಕಾರ ಇದಾಗಿತ್ತು. ಚಂದನಾ ಆರಾಧ್ಯ ವಸ್ತ್ರವಿನ್ಯಾಸಕಿಯೂ ಹೌದು. ಚಿತ್ರ ಕಲಾವಿದೆಯೂ ಹೌದು. ತೆರೆದ ಬೆನ್ನಿನ ಮೇಲೆ ಚಿಟ್ಟೆಯ ಚಿತ್ರ ಬಿಡಿಸಿದ್ದು ಅವರೇ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೇ ಇಬ್ಬರೂ ಸಿದ್ಧರಾಗುತ್ತಿದ್ದೆವು. ಬೆನ್ನ ಕ್ಯಾನ್ವಾಸ್‌ ಅವರಿಗೊಪ್ಪಿಸಿದರೆ ಮುಂದಿನ ನಾಲ್ಕು ಗಂಟೆಗಳು ಅವರ ಕಲೆ ಮತ್ತು ಕುಂಚದಲ್ಲಿಯೇ ಕಳೆದುಹೋಗುತ್ತಿದ್ದವು. ನಂತರ 12 ಗಂಟೆ ಚಿತ್ರೀಕರಣವಾಗುತ್ತಿತ್ತು. ಒಂದಿನಿತೂ ಅತ್ತಿತ್ತ ಜರುಗದಂತೆ, ಚಿತ್ರ ಕಲುಕದಂತೆ ಎಚ್ಚರವಹಿಸುವುದು ಇನ್ನೊಂದು ಸವಾಲಾಗಿತ್ತು’ ಎಂದು ನಕ್ಕರು ಹರ್ಷಿಕಾ.

ಇಷ್ಟೆಲ್ಲ ಪಾತರಗಿತ್ತಿಯ ಹಾರಾಟದಂತೆಯೇ ಮಾತನಾಡುತ್ತಿದ್ದ ಅವರು ತಮ್ಮ ಚಿತ್ರ ‘ಚಿಟ್ಟೆ’ಯ ಬಗ್ಗೆ ವಿವರಿಸುತ್ತಿದ್ದರು. ‘ಇದೊಂದು ನವಿರಾದ ಪ್ರೇಮಕಥೆಯುಳ್ಳ ಚಿತ್ರ. ನಾಯಕ ಚಿತ್ರ ಕಲಾವಿದ. ಗೋಡೆಯ ಮೇಲೆ ಚಿಟ್ಟೆ ಬಿಡಿಸುವಾತನ ಮೇಲೆ ನನಗೂ ಒಲವು. ಪ್ರೀತಿ ಅಂಕುರವಾಗಿ, ಹೆಮ್ಮರವಾದಾಗ ನನ್ನ ಮೇಲೊಂದು ಪಾತರಗಿತ್ತಿಯ ಚಿತ್ರ ಬಿಡಿಸಿ ಬಣ್ಣ ತುಂಬುವಾಸೆಯನ್ನು ನನ್ನ ಮುಂದಿಡುತ್ತಾನೆ. ಮೊದಮೊದಲೆಲ್ಲ ನಿರಾಕರಿಸುವ ನಾಯಕಿ, ಅವನಿಗೆ ಕ್ಯಾನ್ವಸ್‌ ಆಗುವುದೇ ಚಿತ್ರದ ಮುಖ್ಯಾಂಶ’ ಎಂದರು.

ADVERTISEMENT

ಬಹಳ ದಿನಗಳ ನಂತರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಕುರಿತು ಕೇಳಿದಾಗ ಹರ್ಷಿಕಾ, ‘ಪ್ರತಿದಿನವೂ ಅವಕಾಶಗಳ ಬಾಗಿಲು ತೆರೆಯುತ್ತದೆ. ಎಲ್ಲ ಚಿತ್ರಗಳನ್ನು ಒಪ್ಪಿಕೊಂಡರೆ ಕೇವಲ ಸಂಖ್ಯೆಯಷ್ಟೇ ದ್ವಿಗುಣವಾಗುತ್ತದೆ. ಗುಣಮಟ್ಟ ಇರುವುದಿಲ್ಲ. ನಾನು ವಿಭಿನ್ನ ಪಾತ್ರಗಳಿಗೆ ಹುಡುಕಾಟ ನಡೆಸಿದ್ದೆ. ಇದಕ್ಕಾಗಿ ಸಾಕಷ್ಟು ಅವಕಾಶಗಳನ್ನು ನಿರಾಕರಿಸಿದ್ದು ಉಂಟು. ಕೊನೆಗೆ, ಮೈಮೇಲೆ ಪಾತರಗಿತ್ತಿ ಬಿಡಿಸಿಕೊಳ್ಳಲು ಮುಂದಾದೆ’ ಎಂದು ಮತ್ತೆ ಚಿಟ್ಟೆಗೆ ಮರಳುತ್ತಾರೆ.

ಮೈಮೇಲೆ ಚಿಟ್ಟೆಯ ಚಿತ್ರ ಅರಳಿಕೊಳ್ಳಲು ನಿರ್ದೇಶಕ ಎಂ.ಎಲ್. ಪ್ರಸನ್ನ ಹೇಳಿದಾಗ ಹರ್ಷಿಕಾ ಕೊಂಚ ಗಲಿಬಿಲಿ ಆಗಿದ್ದರಂತೆ. ಆದರೆ, ಚಿತ್ರದ ಕಥೆಗೆ ಇದು ಅತ್ಯಗತ್ಯವಿತ್ತು. ಅದು ಮನವರಿಕೆ ಮಾಡಿಕೊಟ್ಟ ಮೇಲೆ ಚಿತ್ರ ಬಿಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. 

‘ನನ್ನ ಚರ್ಮ ಸೂಕ್ಷ್ಮವಾಗಿದೆ. ಮೊದಲು ಮೂರ್ನಾಲ್ಕು ದಿನ ತೈಲಬಣ್ಣವನ್ನು ಲೇಪಿಸಿಕೊಂಡು ಪರಿಶೀಲಿಸಿದೆ. ಒಗ್ಗದಿರುವಿಕೆಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ. ಚಂದನಾ ಸ್ನೇಹಿತೆಯಂತಾದರು. ಪುರುಷ ಕಲಾವಿದರಾಗಿದ್ದರೆ ಚಿತ್ರಕ್ಕೆ ಒಪ್ಪಿಕೊಳ್ಳುವುದು ಕಷ್ಟವಾಗುತ್ತಿತ್ತೇನೊ... ’ ಎಂದು ಮೊದಲ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು.

ಬಣ್ಣದಲ್ಲಿ ಅದ್ದಿದ ಕುಂಚ, ಮೈಮೇಲೆ ಚಿತ್ತಾರವಾಗುವ ಕ್ಷಣವೇ ಬೆರಗು ಮೂಡಿಸುವಂಥದ್ದು. ಮೊದಲೆಲ್ಲ  ಕಚಗುಳಿಯಿಟ್ಟಂತೆ ಆಗುತ್ತಿತ್ತು. ಚಿತ್ರ ಮುಗಿಯುವವರೆಗೂ ಒಂದೇ ಭಂಗಿಯಲ್ಲಿದ್ದು ಮೈನೋವು ಬರುತ್ತಿತ್ತು. ಆದರೆ ಇದೀಗ ಈ ಚಿತ್ರದ ಫಸ್ಟ್‌ ಲುಕ್‌ ವೈರಲ್‌ ಆಗಿರುವುದು ನೋಡಿದರೆ ಎಲ್ಲ ನೋವೂ ಮಾಯವಾಗಿದೆ... ಎಂದಾಗ ಅವರ ಕಂಗಳಲ್ಲಿ ಅವೇ ಬಣ್ಣಬಣ್ಣದ ಚಿಟ್ಟೆಗಳು ಹಾರಾಡುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.