ADVERTISEMENT

ಚಿನ್ನದ ಹುಡುಗಿಯ ‘ಬೆಳ್ಳಿ’ ಮಾತು

ಮಂಜುಶ್ರೀ ಎಂ.ಕಡಕೋಳ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ನಟಿ ಸುಷ್ಮಾ
ನಟಿ ಸುಷ್ಮಾ   

ಸುಷ್ಮಾ ಶೇಖರ್... ಹಾಗಂದರೆ ಬಹುತೇಕರಿಗೆ ಗೊತ್ತಾಗೋದಿಲ್ಲ. ಅದೇ ‘ಲಕುಮಿ’, ‘ಬೆಳ್ಳಿ’ ಅಂದರೆ ಸಾಕು ಕೇಳಿದವರಿಗೆ ಥಟ್ಟನೆ ಮುದ್ದುಮೊಗದ, ಸಕ್ಕರೆ ನಗುವಿನ ಈ ಹುಡುಗಿ ನೆನಪಾಗುತ್ತಾಳೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯಾರೇ ನೀ ಮೋಹಿನಿ’ಯ ಜೀವಾಳ ಈ ‘ಬೆಳ್ಳಿ’.

ಲಕುಮಿ, ಕನಕ ಧಾರಾವಾಹಿಗಳ ನಂತರ ಐದು ವರ್ಷಗಳ ಕಾಲ ಓದಿಗಾಗಿ ಬಿಡುವು ಪಡೆದಿದ್ದ ಸುಷ್ಮಾ, ‘ಬೆಳ್ಳಿ’ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಓದಿನ ಬಗ್ಗೆ ಅಪಾರ ಆಸಕ್ತಿ ಇರಿಸಿಕೊಂಡಿರುವ, ಜೀವನದ ಬಗ್ಗೆ ಪಕ್ಕಾ ಪ್ರಾಕ್ಟಿಕಲ್ ಆಗಿರುವ ಅವರು, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಬಿಬಿಎಂ ಪದವಿ ಪೂರೈಸಿದ್ದಾರೆ.

ಸುಷ್ಮಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬಾಲ್ಯದಲ್ಲಿ ‘ಶ್ರೀವೆಂಕಟೇಶ ಕಲ್ಯಾಣಂ’ ಧಾರಾವಾಹಿಯಲ್ಲಿ ಸುಷ್ಮಾ ಅವರ ಅಕ್ಕ ನಟಿಸುತ್ತಿದ್ದರಂತೆ. ಆ ಸಂದರ್ಭದಲ್ಲಿ ಆಕೆಗೆ ತಮ್ಮನಾಗಿ ಮಂಗಳೂರಿನ ಬಾಲಕನೊಬ್ಬ ಅಭಿನಯಿಸಬೇಕಾಗಿತ್ತು. ಆತ ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ನೋಡಲು ಹುಡುಗನಂತಿದ್ದ ಸುಷ್ಮಾ ಅವರನ್ನೇ ಆ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದರಂತೆ. ‘ಆಗ ನನಗೆ ಬಾಯ್ ಕಟ್ ಇತ್ತು. ಹುಡುಗನ ಬಟ್ಟೆ ತೊಡಿಸಿ ಚಿತ್ರೀಕರಣ ನಡೆಸಿದ್ದರು. ಅಲ್ಲಿಂದ ನನ್ನ ಬಣ್ಣದ ಬದುಕಿನ ಒಡನಾಟ ಶುರುವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಸುಷ್ಮಾ.

ADVERTISEMENT

ಯಾವುದೇ ನಟನಾ ಶಾಲೆಯಲ್ಲಿ, ರಂಗತಂಡದಲ್ಲಿ ತರಬೇತಿ ಪಡೆಯದ ಸುಷ್ಮಾಗೆ ಮೊದಲ ಧಾರಾವಾಹಿ ‘ಲಕುಮಿ’ ಅಭಿನಯದ ಓಂಕಾರ ಹೇಳಿಕೊಟ್ಟಿದೆಯಂತೆ. ಇಂದು ‘ಬೆಳ್ಳಿ’ಯಾಗಿ ನಾನು ಇಷ್ಟೊಂದು ಚೆನ್ನಾಗಿ ಅಭಿನಯಿಸಲು ಕಾರಣ ‘ಲಕುಮಿ’ ಎನ್ನುತ್ತಾರೆ ಅವರು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮುತ್ತು ಮಾವನನ್ನು ಮದುವೆಯಾಗಿ, ಅವನನ್ನು ಚೆನ್ನಾಗಿ ನೋಡಿಕೊಳ್ಳುವುದೇ ಜೀವನದ ಗುರಿ ಎಂಬಂತಿರುವ ಮುಗ್ಧ ಹಳ್ಳಿ ಹುಡುಗಿ ‘ಬೆಳ್ಳಿ’ ಪಾತ್ರದಲ್ಲಿ ಸುಷ್ಮಾ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ.

ಮುತ್ತು ಮಾವ ಅಂದರೆ ನಿಮಗೆ ಯಾಕಷ್ಟು ಇಷ್ಟ ಅಂತ ಪ್ರಶ್ನಿಸಿದರೆ, ‘ಮುತ್ತು ಮಾವನ ಮೊದಲ ಹೆಂಡತಿ ಚಿತ್ರಾ ತೀರಿಹೋದಾಗ ಮಾವ ತುಂಬಾ ಅಳ್ತಾ ಇರ್ತಾರೆ. ಅವರ ಅಳುವನ್ನ ನೋಡಲಾಗದೇ ಮಾವ ನಾನೇ ನಿಮ್ಮನ್ನು ಮದ್ವೆಯಾಗಿ ಹೆಂಡತಿಯಾಗಿ ಚೆನ್ನಾಗಿ ನೋಡಿಕೊಳ್ತೀನಿ ಅಂತಾ ಭಾಷೆ ಕೊಟ್ಟಿರ್ತೀನಿ. ಚಿಕ್ಕವಳಿದ್ದಾಗ ನನಗೆ ‘ಬೆಳ್ಳಿ’ ಅಂತ ಹೆಸರಿಟ್ಟಿದ್ದು ನನ್ನ ಮುತ್ತು ಮಾವ ಅಲ್ವಾ? ಅದಕ್ಕೆ ಅವರನ್ನು ಕಂಡರೆ ನನಗೆ ಅಷ್ಟೊಂದು ಪ್ರೀತಿ’ ಎಂದು ಉತ್ತರಿಸುತ್ತಾರೆ ಸುಷ್ಮಾ.

ಹಳ್ಳಿ ಹುಡುಗಿಗೆ ಇರಬೇಕಾದ ಮುಗ್ಧತೆ, ಧೈರ್ಯ, ಲವಲವಿಕೆ ಎಲ್ಲವನ್ನೂ ಅಚ್ಚೊತ್ತಿದ್ದಂತೆ ಮೈಗೂಡಿಸಿಕೊಂಡಿರುವ ಸುಷ್ಮಾ ನಿಜ ಜೀವನದಲ್ಲಿಯೂ ಸೀದಾಸಾದಾ ಹುಡುಗಿ. ‘ಧಾರಾವಾಹಿಯಲ್ಲಿ ಅಭಿನಯಿಸಿದಾಕ್ಷಣ ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ. ಅಭಿನಯ ನನ್ನ ಹವ್ಯಾಸವಷ್ಟೇ. ಉಳಿದಂತೆ ನಿಜ ಬದುಕಿನಲ್ಲಿ ಸಾಮಾನ್ಯ ಹುಡುಗಿಯರು ಹೇಗಿರುತ್ತಾರೋ ನಾನೂ ಹಾಗೇ ಇರುತ್ತೀನಿ. ಜೀವನದ ಪ್ರತಿಕ್ಷಣವನ್ನೂ ಖುಷಿಯಿಂದ ಆಸ್ವಾದಿಸುತ್ತೇನೆ. ಸ್ನೇಹಿತರ ಜತೆಗೆ ಹೊರಗೆ ಸುತ್ತಾಡುತ್ತೀನಿ. ಸಿನಿಮಾ ನೋಡ್ತೀನಿ. ಭೇಲ್‌ ಪುರಿ ತಿನ್ತೀನಿ’ ಎಂದು ಪಟಪಟನೆ ಮಾತನಾಡುವ ಸುಷ್ಮಾಗೆ ಹ್ಯಾರಿಪಾಟರ್ ಸರಣಿಯ ಪುಸ್ತಕಗಳು ಇಷ್ಟವಂತೆ.

ದೆವ್ವ, ಆತ್ಮ, ಮಾಟ–ಮಂತ್ರ ಹೀಗೆ ‘ಯಾರೇ ನೀ ಮೋಹಿನಿ’ ಧಾರಾವಾಹಿಯುದ್ದಕ್ಕೂ ಮೂಢನಂಬಿಕೆ ಇದೆ ಅಂತ ಅನಿಸೋಲ್ವಾ ಅಂತ  ಕೇಳಿದರೆ, ನನ್ನ ವೈಯಕ್ತಿಕ ಜೀವನದಲ್ಲಿ ಇಂಥ ಮೂಢನಂಬಿಕೆ ನನಗಿಲ್ಲ. ಆದರೆ, ಒಂದು ಒಳ್ಳೆಯ ಶಕ್ತಿ ಇದೆ ಎಂಬ ನಂಬಿಕೆ ಇದೆ. ತಮ್ಮ ಪ್ರೀತಿಪಾತ್ರರಿಗೆ ಕೆಟ್ಟದ್ದು ಸಂಭವಿಸುತ್ತೆ ಅನ್ನುವಾಗ ಆತ್ಮವೋ ಅಥವಾ ಮತ್ಯಾವುದೋ ರೂಪದಲ್ಲಿ ಒಂದು ಶಕ್ತಿ ಕಾಪಾಡುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ವಿವರಿಸುತ್ತಾರೆ ಅವರು.

*
ಇಂದಿನ ಸಾಧನೆಗೆ ಅಪ್ಪ ಶೇಖರ್, ಅಮ್ಮ ಭಾಗೀರಥಿ ಅವರ ಪರಿಶ್ರಮ, ಸಹಕಾರವೇ ಕಾರಣ. ಲಂಡನ್‌ನಲ್ಲಿರುವ ಅಕ್ಕ ಸಹ ನಟನೆಯ ಕುರಿತು ಟಿಪ್ಸ್ ನೀಡುತ್ತಾರೆ. ಸಿನಿಮಾಗಿಂತ ಧಾರಾವಾಹಿ ಅಭಿನಯವೇ ಹೆಚ್ಚು ಇಷ್ಟ. ಸ್ನಾತಕೋತ್ತರ ಪದವಿ ಗಳಿಸಿ, ಮಾನವ ಸಂಪನ್ಮೂಲ (ಎಚ್ಆರ್) ವಿಭಾಗದಲ್ಲಿ ಉನ್ನತ ಹುದ್ದೆಗೆ ಏರಬೇಕು.
–ಸುಷ್ಮಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.