ADVERTISEMENT

ಜಂಬದ ಮನೇಲಿ ಭಗವಾನರ ಹಿತನುಡಿ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

‘ಹಿರಿಯರಾದ ನಾವು ಸಿನಿಮಾಕ್ಕೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿದ್ದೇವೆ. ಅದನ್ನು ಸರಿಯಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪೀಳಿಗೆಗೆ ಇದೆ’ ಹೀಗೆ ಯುವ ಸಿನಿಮಾ ಮೋಹಿಗಳಿಗೆ ಕಿವಿಮಾತು ಹೇಳಿದ್ದು ಹಿರಿಯ ನಿರ್ದೇಶಕ ಭಗವಾನ್. ಅವರ ಈ ಮಾತುಗಳಿಗೆ ವೇದಿಕೆ ‘ಮನೆ ತುಂಬಾ ಬರೀ ಜಂಭ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.

ಭಗವಾನ್ ಅವರ ಮಾತುಗಳು ಹಾಡುಗಳಲ್ಲಿ ದುಶ್ಚಟವನ್ನು ವೈಭವೀಕರಿಸುತ್ತಿರುವುದಕ್ಕೆ ಆಕ್ಷೇಪದಂತಿತ್ತು. ‘ಧೂಮಪಾನ, ಮದ್ಯಪಾನ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಕಾರಣಕ್ಕೆ ನಮ್ಮ ಚಿತ್ರಗಳಲ್ಲಿ ಅವುಗಳಿಗೆ ಸ್ಥಾನವಿರಲಿಲ್ಲ. ‘ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎನ್ನುವ ಅಡಿಬರಹ ಬಳಕೆಯೇ ಆಗಲಿಲ್ಲ’ ಎಂದರು ಭಗವಾನ್‌. ಆಗಷ್ಟೇ ಪರದೆಯ ಮೇಲೆ ಚಿತ್ರದ ಗುಂಡಿನ ಗಮ್ಮತ್ತಿನ ಹಾಡು ಬಂದು ಹೋಗಿದ್ದಕ್ಕೆ ಅವರಿಂದ ಆ ಮಾತು ಬಂದಿತ್ತು. ಆ ನಂತರ ಹೊಸ ಹುಡುಗರ ’...ಜಂಭ’ದ ಉತ್ಸಾಹವನ್ನು ಮೆಚ್ಚಿದರು.

‘ಒಂದು ಕುಟುಂಬದ ಸದಸ್ಯರಲ್ಲಿ ಜಂಭ ಮನೆ ಮಾಡಿದರೆ ಆಗುವ ಅನಾಹುತಗಳೇನು’ ಎನ್ನುವ ಆಧಾರದಲ್ಲಿ ನಿರ್ದೇಶಕ ಅರುಣೇಶ್ ಕಥೆಯನ್ನು ನಿರೂಪಿಸಿದ್ದಾರೆ. ನಾಲ್ಕು ಜೋಡಿಗಳ ಸುತ್ತ ಕಥೆ ಸಾಗಲಿದೆ. ‘ಕಾಮಿಡಿ, ಫ್ಯಾಮಿಲಿ ಮತ್ತು ಸಸ್ಪೆನ್ಸ್‌ ನಮ್ಮ ಸಿನಿಮಾದಲ್ಲಿದೆ. ಮನೆಯೊಳಗಿನ ಜಂಭ ಮತ್ತೊಬರ ಅನುಕೂಲಕ್ಕೆ ಯಾವ ರೀತಿ ದಾರಿಯಾಗುತ್ತದೆ’ ಎನ್ನುವುದನ್ನು ಹೇಳಿದ್ದೇನೆ ಎಂದರು ಅರುಣೇಶ್.

ಜನರು ತಮ್ಮ ಸಿನಿಮಾವನ್ನು ಇಷ್ಟಪಡುತ್ತಾರೆ ಎಂದ ನಿರ್ಮಾಪಕ ಕುಮಾರ್, ಡಿಸೆಂಬರ್ ಕೊನೆ ವಾರ ಇಲ್ಲವೆ ಜನವರಿಯಲ್ಲಿ ತೆರೆಗೆ ತರುವ ಆಲೋಚನೆ ಮಾಡಿದ್ದಾರೆ. ತೆರೆಗೆ ತರುವ  ಮುನ್ನವೇ ಚಿತ್ರ ತಂಡ ಬೀಗುವಂತೆ ಮಂಜುನಾಥ್ ಮತ್ತು ಶ್ರೀನಿವಾಸ್ ಈ ಚಿತ್ರದ ಹಕ್ಕುಗಳನ್ನು 15 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದು ತಮಿಳಿಗೆ ರೀಮೇಕ್ ಮಾಡುವ ಯೋಜನೆಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿಯೇ ಐದು ಲಕ್ಷ ರೂಪಾಯಿಗಳ ಚೆಕ್‌ ಅನ್ನು ನಿರ್ಮಾಪಕ ಕುಮಾರ್ ಅವರಿಗೆ ನೀಡಿದರು. ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಹೇಂದ್ರ ಮುನ್ನೋತ್‌, ಶಶಿಕಲಾ, ಜ್ಯೋತಿಗೌಡ, ಲಕ್ಷ್ಮೀಶ್ ಭಟ್‌, ಜಗದೀಶ್ ರಾಜ್, ಮಹೇಶ್ ತಮ್ಮ ಪಾತ್ರ ಪರಿಚಯಿಸಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.