ADVERTISEMENT

ಜನಪ್ರಿಯ ತಾರೆಯರ ಮದುವೆ ಸಮಾಚಾರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2015, 19:30 IST
Last Updated 29 ಏಪ್ರಿಲ್ 2015, 19:30 IST
ಸುಶಾಂತ್‌ ಸಿಂಗ್‌ ರಜ್‌ಪೂರ್‌, ಅಂಕಿತಾ
ಸುಶಾಂತ್‌ ಸಿಂಗ್‌ ರಜ್‌ಪೂರ್‌, ಅಂಕಿತಾ   

2015 ಬಾಲಿವುಡ್‌ ಹಾಗೂ ಹಾಲಿವುಡ್‌ನ ಅನೇಕ ಜನಪ್ರಿಯ ತಾರೆಗಳ ಮದುವೆಗೆ ಸಾಕ್ಷಿಯಾಗಲಿದೆ. ಬಿ–ಟೌನ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಶಾಹಿದ್‌ ಕಪೂರ್‌ ಈ ವರ್ಷಾಂತ್ಯದಲ್ಲಿ ಗೃಹಸ್ಥರಾಗಲಿದ್ದಾರೆ. ಹಾಗೆಯೇ, ನಟ ರಣ್‌ಬೀರ್‌ ಕಪೂರ್‌ ಹಾಗೂ ಕತ್ರಿನಾ ಕೈಫ್‌ ನವೆಂಬರ್‌ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ ಕೂಡ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ದೆಹಲಿ ಹುಡುಗಿ ಮೀರಾ ರಜ್‌ಪೂತ್‌ ಅವರನ್ನು ವಿವಾಹವಾಗುವುದಾಗಿ ನಟ ಶಾಹಿದ್‌ ಕಪೂರ್‌ ಈಗಾಗಲೇ ಘೋಷಿಸಿದ್ದಾರೆ. ಈ ವರ್ಷಾಂತ್ಯದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬುದು ತಿಳಿದಿತ್ತು. ಆದರೆ, ಶಾಹಿದ್‌ ಹಾಗೂ ಮೀರಾ ಮದುವೆ ಜೂನ್‌ನಲ್ಲಿ ಆಗಲಿದೆ ಎಂಬುದು ಹೊಸ ಸಮಾಚಾರವಾಗಿದೆ.

ಹುಡುಗ ಮತ್ತು ಹುಡುಗಿ ಇಬ್ಬರ ಕುಟುಂಬದವರೂ ಜೂನ್‌ 10ಕ್ಕೆ ಇವರಿಬ್ಬರ ವಿವಾಹ ಮಾಡುವುದೆಂದು ನಿರ್ಧರಿಸಿದ್ದಾರೆ. ಹಾಗಾಗಿ, ಈಗಾಗಲೇ ಮದುವೆ ಸಿದ್ಧತೆಗಳು ಆರಂಭವಾಗಿವೆ. ಶಾಹಿದ್‌ ಕುಟುಂಬದ ಆಪ್ತರು ಹೇಳುವಂತೆ ಇವರಿಬ್ಬರ ಮದುವೆ ಇಸ್ತಾಂಬುಲ್‌ ಅಥವಾ ಗ್ರೀಸ್‌ನಲ್ಲಿ ನಡೆಯಲಿದೆ.

ಇದೇವೇಳೆ, ‘ಕಾಯ್‌ ಪೊ ಚೆ’ ಖ್ಯಾತಿಯ ನಟ ಸುಶಾಂತ್‌ ಸಿಂಗ್‌ ರಜ್‌ಪೂತ್‌ ತಾವು ಈ ವರ್ಷ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬಹುಕಾಲದ ಗೆಳತಿ ಅಂಕಿತಾ ಅವರನ್ನೇ ಸುಶಾಂತ್‌ ವರಿಸಲಿದ್ದಾರೆ. ಸುಶಾಂತ್‌ ಹಾಗೂ ಅಂಕಿತಾ ಏಳು ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದರು. ಹಾಗೆಯೇ, ಬಹಳಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್‌ ಕಪೂರ್‌ ಹಾಗೂ ಪ್ರಜ್ಞಾ ಜೋಡಿ ಸಹ ಮೇ ತಿಂಗಳಿನಲ್ಲಿ ಸಪ್ತಪದಿ ತುಳಿಯಲು ಅಣಿಯಾಗಿದೆ.

ಹಾಲಿವುಡ್‌ನಲ್ಲಿ...

* ಅಮೆರಿಕದ ನಟಿ ಈವಾ ಮೆಂಡೆಸ್‌ ಹಾಗೂ ಕೆನಡಿಯನ್‌ ನಟ ರಯಾನ್ ಗೊಸ್ಲಿಂಗ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ.
* ಇಂಗ್ಲಿಷ್‌ ಮಾಡೆಲ್‌ ರೋಸಿ ಹಂಟಿಂಗ್ಟನ್ ಅವರು ಹಾಲಿವುಡ್‌ ನಟ ಹಾಗೂ ಆಕೆಯ ಆಪ್ತ ಗೆಳೆಯ ಜಾಸನ್ ಸ್ಟಾತಮ್ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.
* ಅಮೆರಿಕನ್‌ ನಟಿ ಜೆನ್ನಿಫರ್‌ ಅನಿಸ್ಟನ್‌  ಅಮೆರಿಕನ್‌ ನಟ, ನಿರ್ದೇಶಕ ಜಸ್ಟಿನ್ ಅವರನ್ನು ಸದ್ಯದಲ್ಲೇ ಮದುವೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT