ADVERTISEMENT

ಜಯಮಾಲಾ ಕಥಾಸಮಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಸುವರ್ಣ ವಾಹಿನಿಯ ಯಶಸ್ವಿ ರಿಯಾಲಿಟಿ ಷೋಗಳಲ್ಲಿ ‘ಕಥೆಯಲ್ಲ ಜೀವನ’ವೂ ಒಂದು. ದಕ್ಷಿಣ ಭಾರತದ ಖ್ಯಾತ ತಾರೆ ಲಕ್ಷ್ಮಿ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ, 2009ರಲ್ಲಿ ಪ್ರಸಾರಗೊಂಡಿತ್ತು. ಇದೀಗ ಈ ಕಾರ್ಯಕ್ರಮದ ಎರಡನೇ ಆವೃತ್ತಿ ನವೆಂಬರ್ 1ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ‘ಕಥೆಯಲ್ಲ ಜೀವನ’ ಪ್ರಸಾರವಾಗಲಿದೆ.

‘ಕಥೆಯಲ್ಲ ಜೀವನ’ ಸಂಬಂಧಗಳನ್ನು ಬೆಸೆಯುವ ವಿಶಿಷ್ಟ ಕಾರ್ಯಕ್ರಮ. ಇಲ್ಲಿ ಗಂಡ ಹೆಂಡತಿಯರ ಮುನಿಸು, ದಾಯಾದಿಗಳ ಜಗಳ, ತಂದೆ ಮಕ್ಕಳ ಜಗಳ– ಹೀಗೆ, ಹಲವು ಅಪಸ್ವರಗಳನ್ನು ಶಮನಗೊಳಿಸಲು ಪ್ರಯತ್ನಿಸುವ ಮೂಲಕ, ಹಳಸಿದ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಲಾಗುತ್ತದೆ. ಈ ಸ್ವರೂಪ ಎರಡನೇ ಆವೃತ್ತಿಯಲ್ಲೂ ಇರಲಿದೆ. ಆದರೆ, ಈ ಆವೃತ್ತಿಯಲ್ಲಿ ವಿವಿಧ ಸಾಧಕರು ಭಾಗವಹಿಸುವ ಮೂಲಕ ಇಡೀ ಶೋ ಹೊಸ ಸ್ವರೂಪದಲ್ಲಿ ಕಂಗೊಳಿಸಲಿದೆ ಎಂದು ವಾಹಿನಿಯ ಪ್ರಕಟಣೆ ತಿಳಿಸಿದೆ.
ವೀಕ್ಷಕರನ್ನು ರಂಜಿಸುವುದಷ್ಟೇ ಈ ಕಾರ್ಯಕ್ರಮದ ಉದ್ದೇಶವಲ್ಲ. ರಂಜೆನಯ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಈ ರಿಯಾಲಿಟಿ ಷೋ ಒಳಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಂದಹಾಗೆ, ಖ್ಯಾತ ಅಭಿನೇತ್ರಿ ಜಯಮಾಲಾ ಅವರ ನಿರೂಪಣೆ, ’ಕಥೆಯಲ್ಲ ಜೀವನ’ ಎರಡನೇ ಆವೃತ್ತಿಯ ವಿಶೇಷಗಳಲ್ಲೊಂದು. ನಟನೆ, ನಿರ್ಮಾಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷತೆ ಸೇರಿದಂತೆ ಚಿತ್ರೋದ್ಯಮದಲ್ಲಿ ಅಪಾರ ಅನುಭವ ಪಡೆದಿರುವ ಜಯಮಾಲಾ, ಇದೀಗ ಈ ರಿಯಾಲಿಟಿ ಷೋ ಮೂಲಕ ಕಿರುತೆರೆಗೆ ತಮ್ಮನ್ನು ಒಡ್ಡಿಕೊಳ್ಳಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.