ADVERTISEMENT

ಜೀವದ ಗೆಳೆಯನಿಗೆ ಸಲಾಂ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಸಲ್ಮಾನ್ ಖಾನ್‌ ಹಾಗೂ ಸುನಿಲ್‌ ಶೆಟ್ಟಿ ನಡುವಿನ ಸ್ನೇಹ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಸ್ನೇಹಕ್ಕೆ ಸಲ್ಮಾನ್‌ನ ದೊಡ್ಡ ಗುಣವೇ ಕಾರಣ ಎಂದು ನಟ ಸುನಿಲ್‌ ಶೆಟ್ಟಿ ಹಾಡಿ ಹೊಗಳಿದ್ದಾರೆ.

‘ನನ್ನ ಜೀವನದ ಅತ್ಯಂತ ಕೆಟ್ಟ ಗಳಿಗೆಯಲ್ಲಿಯೂ ಜೊತೆ ನಿಂತವ ಗೆಳೆಯ ಸಲ್ಮಾನ್‌. ಗೆದ್ದಾಗ ನೂರಾರು ಜನ ಜೊತೆ ನಿಲ್ಲುತ್ತಾರೆ. ಸೋತಾಗ ಒಬ್ಬೊಬ್ಬರೇ ದೂರ ಸರಿಯುತ್ತಾರೆ. ಅಂತಹ ಸಮಯದಲ್ಲಿ ಯಾರು ಗಟ್ಟಿಯಾಗಿ ನಿಲ್ಲುತ್ತಾರೋ ಅವರೇ ನಿಜವಾದ ಗೆಳೆಯರಾಗುತ್ತಾರೆ. ಸಲ್ಮಾನ್‌ಗೆ ಆ ಶ್ರೇಯಸ್ಸು ಸಲ್ಲಬೇಕು’ ಎಂದಿದ್ದಾರೆ ಸುನಿಲ್‌.

ಸುನಿಲ್‌ ಶೆಟ್ಟಿ ಹಾಗೂ ಸಲ್ಮಾನ್‌ ಖಾನ್‌ ಹೆಚ್ಚೂ ಕಡಿಮೆ ಒಂದೇ ಸಮಯಕ್ಕೆ ಬಿ–ಟೌನ್‌ಗೆ ಎಂಟ್ರಿ ಕೊಟ್ಟವರು, ಒಟ್ಟೊಟ್ಟಿಗೇ ಬೆಳೆದವರು. 50ರ ಪ್ರಾಯದಲ್ಲಿ ಸುನಿಲ್‌ ಬೆಳೆದ ಮಗಳ ತಂದೆಯಾದರೂ, ಸಲ್ಮಾನ್‌ ಬ್ಯಾಚುಲರ್‌ ಆಗೇ ಉಳಿದರು. ಜೀವನದ ಏರಿಳಿತಗಳ ನಡುವೆಯೂ ಅವರ ಸ್ನೇಹ ಮಾತ್ರ ಗಟ್ಟಿಯಾಗಿಯೇ ಉಳಿದುಕೊಂಡು ಬಂದಿದೆ. ಮತ್ತೀಗ ಅವರ ಸ್ನೇಹ ಬಹುತೇಕ ಮೂರು ದಶಕಗಳನ್ನು ಪೂರೈಸಿದೆ.

ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿಗೆ ಸಲ್ಮಾನ್‌ ಖಾನ್‌ ‘ಹೀರೊ’ ಚಿತ್ರದಲ್ಲಿ ಅವಕಾಶ ನೀಡಿದಾಗಲೂ ಸುನಿಲ್‌ ಶೆಟ್ಟಿ ಅವರು ಸಲ್ಮಾನ್‌ ಬಗ್ಗೆ ಇಂಥದ್ದೇ ಮಾತುಗಳನ್ನಾಡಿದ್ದರು. ‘ನಾವಿಬ್ಬರೂ ಒಂದೇ ಸಮಯಕ್ಕೆ ಬಿ–ಟೌನ್‌ ಅಂಗಳಕ್ಕೆ ಬಂದೆವು.

ಅವಕಾಶಗಳನ್ನು ಪಡೆಯಲು ಒಟ್ಟೊಟ್ಟಿಗೆ ಹೋರಾಡಿದೆವು. ಆದರೆ ಸಲ್ಮಾನ್‌ಗೆ ಬೇಗ ಯಶಸ್ಸು ಸಿಕ್ಕಿತು. ನನ್ನನ್ನೂ ಯಶಸ್ಸಿನ ಮೆಟ್ಟಿಲು ಹತ್ತಿಸಲು ಸಲ್ಮಾನ್ ಸಾಕಷ್ಟು ಬೆಂಬಲ ನೀಡಿದರು. ನಾನು ಇಂದು ಏನೇ ಸಾಧಿಸಿದ್ದರೂ ಅದರಲ್ಲಿ ಸಲ್ಮಾನ್‌ ಪಾಲೂ ಇದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT