ADVERTISEMENT

ಟೀ ಅಂಗಡಿಯಲ್ಲಿ ಹೊಸ ಘಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST
ಎ. ಪರಮೇಶ್
ಎ. ಪರಮೇಶ್   

ಬರೀ ಪ್ರೀತಿ, ಪ್ರೇಮದ ಕಥೆಯ ಸಿನಿಮಾಗಳೇ ಬರುತ್ತಿವೆ. ಶುದ್ಧ ಸ್ನೇಹ ವಿಷಯದ ಮೇಲೆ ಯಾಕೆ ಚಿತ್ರ ಮಾಡುತ್ತಿಲ್ಲ?
ಈ ಪ್ರಶ್ನೆಯು ಎ. ಪರಮೇಶ್ ಅವರಲ್ಲಿ ಮೂಡಿದ ದಿನದಂದೇ ‘ಮಾಮು ಟೀ ಅಂಗಡಿ’ ಚಿತ್ರದ ಕಲ್ಪನೆಯೂ ಮೂಡಿತಂತೆ. ‘ನಮ್ಮ ಇಡೀ ಸಿನಿಮಾ ಸ್ನೇಹದ ಮೇಲೆ ನಿಂತಿದೆ. ಅದರ ಹಿಂದೆ ಇದ್ದುದು ನಮ್ಮ ಜೀವನದ ಅನುಭವಗಳು’ ಎಂದು ಪರಮೇಶ್ ಹೇಳಿಕೊಂಡರು.

‘...ಅಂಗಡಿ’ ಸಿನಿಮಾದ ಎರಡು ಹಾಡುಗಳು ಹಾಗೂ ಟ್ರೈಲರ್ ಪ್ರದರ್ಶನಕ್ಕೆಂದು ಸುದ್ದಿಮಿತ್ರರನ್ನು ಚಿತ್ರತಂಡ ಆಹ್ವಾನಿಸಿತ್ತು. ಸ್ನೇಹದ ಸುತ್ತ ‘ಅಂಗಡಿ’ ಸುತ್ತಿದರೂ ನಾಲ್ವರು ನಾಯಕರು ಹಾಗೂ ಇಬ್ಬರು ನಾಯಕಿಯರು ಇರುವ ಪ್ರೇಮಕಥೆಯೂ ಇದರಲ್ಲಿದೆ. ‘ಏನೇ ಮರೆತರೂ ಜೀವದ ಗೆಳೆಯರನ್ನು ಮಾತ್ರ ಮರೆಯಲು ಅಸಾಧ್ಯ. ಗೆಳೆತನದ ಸಂಬಂಧ ಅಂಥದ್ದು. ಈ ಚಿತ್ರದ ಮೂಲಕ ಸ್ನೇಹದ ಸಾಮರ್ಥ್ಯವನ್ನು ತೋರಿಸಲಿದ್ದೇವೆ’ ಎಂದು ಪರಮೇಶ್ ಹೇಳಿದರು.

ಮಿತ್ರ ಪರಮೇಶ್ ನಿರ್ದೇಶನದ ಮೊದಲ ಚಿತ್ರದ ಟ್ರೈಲರ್ ಬಿಡುಗಡೆಗೆ ನಟ ಪ್ರೇಮ್ ಬಂದಿದ್ದರು. ಬಣ್ಣದ ಲೋಕದಲ್ಲಿ ಅವಕಾಶ ಹುಡುಕಿಕೊಂಡು ಅಲೆಯುತ್ತಿರುವಾಗ ಪರಮೇಶ್ ತಮಗೆ ಆಶ್ರಯ ನೀಡಿದ ದಿನಗಳನ್ನು ನೆನೆಸಿಕೊಂಡು ಪ್ರೇಮ್ ಭಾವಪರವಶರಾದರು. ಅದಕ್ಕೆ ಪ್ರತಿಯಾಗಿ ಪರಮೇಶ್, ‘ಕಷ್ಟದಲ್ಲಿರುವ ಮಿತ್ರರಿಗೆ ಪ್ರೇಮ್ ಈಗಲೂ ಸಹಾಯ ಮಾಡುತ್ತಲೇ ಇರುತ್ತಾರೆ. ಆದರೆ ಅದನ್ನು ಎಲ್ಲೂ ಹೇಳಿಕೊಳ್ಳುವುದಿಲ್ಲ’ ಎಂದು ಬಹಿರಂಗಪಡಿಸಿದರು.

ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿ ನೃತ್ಯದಿಂದ ಗಮನ ಸೆಳೆದಿರುವ ವರುಣ್‌ಗೆ ಬೇರೆ ಭಾಷೆ ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ ಕನ್ನಡ ಚಿತ್ರರಂಗದಲ್ಲೇ ಹೆಸರು ಮಾಡಬೇಕು ಎಂಬ ಆಸೆಯಿಂದ ಇಲ್ಲಿಯೇ ಉಳಿದರಂತೆ.

‘...ಅಂಗಡಿ’ ಚಿತ್ರದಲ್ಲಿ ನಾಯಕನಾಗುವುದರೊಂದಿಗೆ ಆ ಆಸೆ ಈಡೇರಿದೆ ಎಂದು ವರುಣ್ ಖುಷಿಪಟ್ಟರು. ಇನ್ನು ಮೂವರು ನಾಯಕರಾದ ಅಭಿಷೇಕ್, ರಿತೇಶ್, ಮಹೇಶ್ ರಾಜ್ ಹಾಗೂ ನಾಯಕಿಯರಾದ ಅರ್ಚನಾ ಸಿಂಗ್ ಹಾಗೂ ಸಂಗೀತಾ ಭಟ್ ಮಾತನಾಡಿದರು. ಹೊಸಬರ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಿ, ಇನ್ನಷ್ಟು ಹೊಸ ಉತ್ಸಾಹಿಗಳು ಕನ್ನಡ ಚಿತ್ರರಂಗಕ್ಕೆ ಬರಲಿ ಎಂದು ನಿರ್ಮಾಪಕ ಎನ್.ಎಂ. ಸುರೇಶ್ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.