ADVERTISEMENT

ತ್ರಿಮೂರ್ತಿಗಳಿಂದ ರಸದೌತಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಚಿರಂಜೀವಿ ಸರ್ಜಾ, ಪಾರುಲ್ ಯಾದವ್
ಚಿರಂಜೀವಿ ಸರ್ಜಾ, ಪಾರುಲ್ ಯಾದವ್   

ಪ್ರಕಾಶ್ ರೈ, ರವಿಚಂದ್ರನ್, ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ನಿರ್ದೇಶಕ ವಿನಯ್ ಕೃಷ್ಣ ಸಜ್ಜಾಗಿದ್ದಾರೆ. ‘ಹಾಗಂದರೆ ಏನು’ ಎಂಬ ಪ್ರಶ್ನೆ ಬೇಡ. ಈ ಮೂವರೂ ಅಭಿನಯಿಸಿರುವ, ವಿನಯ್ ನಿರ್ದೇಶನದ ‘ಸೀಜರ್’ ಚಿತ್ರ ಶುಕ್ರವಾರ ತೆರೆಗೆ ಬರಲಿದೆ.

ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ವಿನಯ್ ಅವರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ‘ಸಿನಿಮಾ ತೆರೆಗೆ ಬರುವ ಕ್ಷಣವನ್ನು ಕಾತರದಿಂದ ಕಾಯುತ್ತಿದ್ದೇವೆ. ಮೊದಲು ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಿ ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದರು ವಿನಯ್.

‘ಇದು ಮಾಸ್‌ ಸಿನಿಮಾ, ಕುಟುಂಬದ ಎಲ್ಲರಿಗೂ ಮನೋರಂಜನೆ ನೀಡುವ ಸಿನಿಮಾ ಕೂಡ ಹೌದು’ ಎಂದು ಮಾತಿಗೆ ಇಳಿದವರು ನಿರ್ಮಾಪಕ ತ್ರಿವಿಕ್ರಮ್ ಸಾಪಲ್ಯ. ‘ಒಳ್ಳೆಯ ಮತ್ತು ತಾಜಾತನ ಇರುವ ಕಥೆಗಾಗಿ ನಾನು ಹುಡುಕುತ್ತಿದ್ದಾಗ ಸಿಕ್ಕಿದವರು ವಿನಯ್ ಕೃಷ್ಣ. ಅವರು ಕಾರ್‌ ಮಾಫಿಯಾ ಬಗ್ಗೆ ಕಥೆಯೊಂದನ್ನು ಹೇಳಿದರು. ಈ ಕಥೆಯನ್ನು ಸಿನಿಮಾ ಮಾಡಿದರೆ ಕನ್ನಡದ ವೀಕ್ಷಕರಿಗೆ ಒಂದು ತಾಜಾ ಕಥೆ ನೀಡಿದಂತೆ ಆಗುತ್ತದೆ ಎಂದು ತೀರ್ಮಾನಿಸಿದೆ. ಪ್ರತಿ ಹಂತದಲ್ಲೂ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ’ ಎಂದರು ತ್ರಿವಿಕ್ರಮ್.

ADVERTISEMENT

ಸಿನಿಮಾದ ಫೈಟ್‌ ದೃಶ್ಯಗಳನ್ನು ಫ್ಯಾಂಟಮ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾಕ್ಕೆ ಸಂಗೀತ ನೀಡಿದವರು ಚಂದನ್ ಶೆಟ್ಟಿ. ‘ಇದು ಯುವಕರನ್ನು ರಂಜಿಸುವ ಹಾಗೂ ಹೊಸ ಟ್ರೆಂಡ್ ಹುಟ್ಟುಹಾಕುವ ಸಿನಿಮಾ’ ಎಂದರು ಚಂದನ್.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದವರು ಚಿರಂಜೀವಿ ಸರ್ಜಾ. ‘ಸಿನಿಮಾ ವೀಕ್ಷಿಸಿದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಸಿನಿಮಾ ನನ್ನ ಪಾಲಿಗೆ ಒಂದು ದೊಡ್ಡ ಹೆಜ್ಜೆ ಇದ್ದಂತೆ. ಸಿನಿಮಾದಲ್ಲಿ ನನ್ನ ಹೆಸರೇ ಸೀಜರ್‌’ ಎಂದರು ಚಿರು.

‘ವಾಹನ ಸಾಲ ಮಾಡಿ ಕಾರು ಕೊಂಡವರು ಸಾಲದ ಕಂತುಗಳನ್ನು ಪಾವತಿಸದೇ ಇದ್ದಾಗ ಅವರ ಕಾರು ಸೀಜ್‌ ಮಾಡಲಾಗುತ್ತದೆ. ಈ ಸಿನಿಮಾ ಕಥೆಗೆ ರೌಡಿಸಂ ಹಿನ್ನೆಲೆ ಕೂಡ ಇದೆ. ಹಾಗೆಯೇ, ಸೇಡು ತೀರಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಒಂದು ಕಥೆ ಕೂಡ ಇದರಲ್ಲಿ ಇದೆ’ ಎಂದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.