ADVERTISEMENT

ದುರ್ಗದಿಂದ ಬಂದ ‘ನಾಡರಕ್ಷಕ’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2016, 19:30 IST
Last Updated 25 ಆಗಸ್ಟ್ 2016, 19:30 IST
ಮೈತ್ರಿಯಾ ಗೌಡ
ಮೈತ್ರಿಯಾ ಗೌಡ   

ಇವ ಕನ್ನಡದ ನೆಲ– ನುಡಿ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತವನು. ಕನ್ನಡಿಗರ ರಕ್ಷಣೆಗಾಗಿ ಇರುವ ಈತ ‘ನಾಡರಕ್ಷಕ’. ಯಾರಿವನು ಎಂದು ಆಶ್ಚರ್ಯಗೊಳ್ಳಬೇಡಿ. ಅವರೇ ಅಮಾನುಲ್ಲಾ. ಚಿತ್ರದುರ್ಗದವರಾದ ಅವರ ಮಾತೃಭಾಷೆ ಉರ್ದು. ಆದರೂ ಅವರು ಅಪ್ಪಟ ಕನ್ನಡಾಭಿಮಾನಿ.

ಈ ಅಭಿಮಾನದ ದ್ಯೋತಕವಾಗಿ ‘ನಾಡರಕ್ಷಕ’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದಾರೆ.

ಶೀರ್ಷಿಕೆಯ ಅಡಿಬರಹ ‘ನಾಡೋ ರಕ್ಷತಿ ರಕ್ಷಿತಃ’ ಎನ್ನುವುದನ್ನು ಗಮನಿಸಿದರೆ, ಚಿತ್ರದ ತುಂಬಾ ಕನ್ನಡತನವೇ ಮೈವೆತ್ತಿಕೊಂಡಿರಬಹುದೇನೊ ಅನಿಸುತ್ತದೆ. ಚಿತ್ರದ ಕಥೆ, ಚಿತ್ರಕಥೆ ಕೂಡ ಅಮಾನುಲ್ಲಾ ಅವರದ್ದೇ. ಆ್ಯಕ್ಷನ್‌–ಕಟ್‌ ಜತೆಗೆ, ಸಂಕಲನದ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ. ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

‘ಹಳ್ಳಿಯಲ್ಲಿ ಹುಟ್ಟುವ ಯುವ ಕವಿಯೊಬ್ಬ ಕವಿತೆಗಳನ್ನು ಪ್ರಕಟಿಸುವುದಕ್ಕಾಗಿ ನಗರಕ್ಕೆ ಬರುತ್ತಾರೆ. ಆದರೆ ಅಲ್ಲಿ ನಡೆಯುವ ಘಟನೆಗಳು, ಮತ ರಾಜಕೀಯ, ಅಕ್ರಮಗಳು, ಕನ್ನಡದ ಕಡೆಗಣನೆ, ನಗರವಾಸಿಗಳ ಅಸಡ್ಡೆ ಆತನನ್ನು ಕೆರಳಿಸುತ್ತದೆ. ಜತೆಗೆ, ನಾಡಿನ ರಕ್ಷಣೆಗೆ ಪಣ ತೊಡುವಂತೆ ಮಾಡುತ್ತದೆ’ ಎಂದು ಚಿತ್ರದ ಕಥೆಯನ್ನು ಅಮಾನುಲ್ಲಾ ಬಿಚ್ಚಿಟ್ಟರು.

‘ಕನ್ನಡಿಗರು ತಮ್ಮ ಹಿರಿಮೆಯನ್ನು ಗ್ರಹಿಸುವ ಜತೆಗೆ, ಕನ್ನಡತನ ಉಳಿಸಿಕೊಂಡು ಹೇಗೆ ಬದುಕಬೇಕು ಎಂಬುದನ್ನು ಈ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇವೆ’ ಎಂಬ ನಿರ್ದೇಶಕರ ಮಾತಿನಲ್ಲಿ ಅಭಿಮಾನ ಎದ್ದು ಕಾಣುತ್ತಿತ್ತು.

ನಾಡರಕ್ಷಕನಿಗೆ ನಾಯಕಿಯಾಗಿ ಮೈತ್ರಿಯಾ ಗೌಡ ನಟಿಸಿದ್ದಾರೆ. ‘ಕಾಲೇಜು ಹುಡುಗಿಯಾಗಿ ನಾಯಕನಿಗೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಮೈತ್ರಿಯಾ. ಚಿತ್ರದಲ್ಲಿ ಕನ್ನಡ ವಿರೋಧಿಯಾಗಿ ದುಬೈ ರಫಿಕ್ ಅಭಿನಯಿಸಿದ್ದಾರೆ. ಕನ್ನಡವನ್ನು ನಿಂದಿಸುವ ಪಾತ್ರವಾದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರ ಅನುಮತಿ ಪಡೆದುಕೊಂಡೇ ನಟಿಸಿದ್ದಾರಂತೆ.

ಚಿತ್ರದಲ್ಲಿರುವ ಐದು ಹಾಡುಗಳಿಗೆ ರಾಜೇಶ್ ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾ ಕನ್ನಡಿಗರಿಗೆ ಮಾತ್ರ ಎನ್ನುವ ಚಿತ್ರತಂಡ, ಕನ್ನಡಿಗರು ಚಿತ್ರ ನೋಡಿ ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.