ADVERTISEMENT

ದೆವ್ವದ ಮನೆಯಲ್ಲಿ ಅಕ್ಕರೆಯ ‘ಮಮ್ಮಿ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2016, 19:30 IST
Last Updated 1 ಡಿಸೆಂಬರ್ 2016, 19:30 IST
ದೆವ್ವದ ಮನೆಯಲ್ಲಿ ಅಕ್ಕರೆಯ ‘ಮಮ್ಮಿ’
ದೆವ್ವದ ಮನೆಯಲ್ಲಿ ಅಕ್ಕರೆಯ ‘ಮಮ್ಮಿ’   
ತನ್ನ ದುಂಡು ಕೆನ್ನೆಯಷ್ಟೇ ನಯವಾದ ಕೂದಲನ್ನು ಅಮ್ಮ ಬಾಚುತ್ತಿದ್ದರೆ, ಆ ಪುಟಾಣಿ ಹುಡುಗಿ ಐ ಪ್ಯಾಡ್‌ನ ಫ್ರಂಟ್‌ ಕ್ಯಾಮೆರಾದಲ್ಲಿ ಮುಖ ನೋಡಿಕೊಳ್ಳುತ್ತಿದ್ದಳು. ಕೂದಲು ಬಾಚಿ ಮುಗಿದಿದ್ದೇ ಬ್ಯಾಗಿನೊಳಗಿನ ಲಿಪ್‌ಸ್ಟಿಕ್‌ ತೆಗೆದುಕೊಂಡು ಕನ್ನಡಿಯೆದುರು ನಿಂತುಕೊಂಡು ತುಟಿಗಳ ಮೇಲೆ ನಿಧಾನ ತೀಡಿಕೊಳ್ಳಲು ಶುರು ಮಾಡಿದಳು. ಕನ್ನಡಿ ಮುಂದೆ ನಿಂತು ಒಮ್ಮೆ ನಕ್ಕು, ಕೊಂಚ ಓರೆಯಾಗಿ ನಿಂತು ಹೇಗೆ ಕಾಣುತ್ತಿದ್ದೇನೆ ಎಂದು ನೋಡಿಕೊಳ್ಳುತ್ತಿದ್ದರೆ ಉಳಿದವರ ಗಮನವೆಲ್ಲ ಅವಳ ಮೇಲೆಯೇ. 
 
ಅಮ್ಮನ ಜೊತೆ ತಮಿಳಿನಲ್ಲಿಯೂ, ಉಳಿದವರ ಜತೆ ಇಂಗ್ಲಿಷಿನಲ್ಲಿಯೂ ಮಾತನಾಡುತ್ತಿದ್ದವಳು ಮೈಕಿನೆದುರು ನಿಂತಾಗ ಕನ್ನಡದಲ್ಲಿಯೇ ಮಾತಿಗಾರಂಭಿಸಿದಳು. ತಿಳಿಹಳದಿ ಬಣ್ಣದ ಫ್ರಾಕಿನಲ್ಲಿ ತಲೆಕೆಳಗಾಗಿ ಇಟ್ಟ ತಟ್ಟೆ ಮಂದಾರದಂತೆ ಕಾಣುತ್ತಿದ್ದ ಆ ಪುಟಾಣಿ ಬಾಯಿಪಾಠ ಮಾಡಿದ್ದನ್ನು ಮೇಷ್ಟ್ರ ಎದುರಿಗೆ ಒಪ್ಪಿಸುವ ಹಾಗೆಯೇ ನೆನಪಿಸಿ ನೆನಪಿಸಿಕೊಂಡು ಮಾತನಾಡುವುದನ್ನು ನೋಡುತ್ತಿದ್ದರೆ ಮುದ್ದು ಉಕ್ಕಿ ಬರುತ್ತಿತ್ತು. 
 
ಇಂದು (ನ.04) ಬಿಡುಗಡೆಯಾಗಲಿರುವ ‘ಮಮ್ಮಿ’ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಮಗಳ ಪಾತ್ರದಲ್ಲಿ ನಟಿಸಿರುವ ಯುವಿನಾ ಚೆನ್ನೈನ ಹುಡುಗಿ. ಚಿತ್ರದ ಬಿಡುಗಡೆ ಸುದ್ದಿಯನ್ನು ಹಂಚಿಕೊಳ್ಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮುದ್ದು ಮುಖದ ಈ ಹುಡುಗಿಯೇ ಕಾರ್ಯಕ್ರಮದ ಕೇಂದ್ರಬಿಂದು.
 
‘ನಮಸ್ಕಾರ. ನಾನು ಈ ಚಿತ್ರದಲ್ಲಿ ಒಂದು ಇಂಪಾರ್ಟೆಂಟ್‌ ಕ್ಯಾರೆಕ್ಟರ್‌ ಮಾಡಿದೀನಿ... ಪ್ರಿಯಾಂಕಾ ಆಂಟಿ, ಲೋಹಿತ್‌ ಅಂಕಲ್‌ ಎಲ್ರೂ ನಂಗೆ ತುಂಬಾ ಹೆಲ್ಪ್‌ ಮಾಡಿದ್ರು.ಎರಡು ದಿನಗಳಲ್ಲಿ ಕನ್ನಡ ಕಲಿತೆ. ಯಾಕೆಂದರೆ ಎಲ್ರೂ ಸೆಟ್‌ನಲ್ಲಿ ಕನ್ನಡಾನೇ ಮಾತಾಡ್ತಿದ್ರು’ ಎಂದು ಮುದ್ದು ಮುದ್ದಾಗಿ ಮಾತನಾಡಿದಳು.
 
ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಲೋಹಿತ್‌ ‘ಮಮ್ಮಿ’ ಸಿನಿಮಾದ ಮೂಲಕ ನಿರ್ದೇಶಕನ ಗದ್ದುಗೆ ಏರಿದ್ದಾರೆ. ಈ ಹೊಸ ಅನುಭವದ ರೋಮಾಂಚನ ಮತ್ತು ಪರಿಣಾಮದ ಆತಂಕ ಎರಡೂ ಅವರ ಮುಖ–ಮಾತುಗಳಲ್ಲಿ ಸ್ಪಷ್ಟವಾಗಿಯೇ ವ್ಯಕ್ತವಾಗುತ್ತಿತ್ತು. 
 
‘ಮಮ್ಮಿ ನನ್ನ ಬದುಕಿನ 2 ವರ್ಷದ ಪಯಣ. ಭಯ–ಖುಷಿ ಎರಡೂ ಆಗುತ್ತಿದೆ’ ಎಂದೇ ಮಾತಿಗೆ ತೊಡಗಿಕೊಂಡ ಅವರು ತಡೆಯೇ ಇಲ್ಲದ ನದಿಯಂತೆ ಚಿತ್ರದ ಕಥೆ, ನಟರ ಆಯ್ಕೆಯ ತಾಪತ್ರಯಗಳು, ಚಿತ್ರಕರಣದ ಪರದಾಟಗಳು, ಸಂಗೀತ, ಸಂಕಲನ ಎಲ್ಲದರ ಬಗ್ಗೆಯೂ ನಿರಂತರವಾಗಿ ಮಾತನಾಡುತ್ತಲೇ ಹೋದರು. 
 
ಪ್ರಿಯಾಂಕಾ ಉಪೇಂದ್ರ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಅವರ ಕನಸು ನನಸಾಗಿಸುವ ದಾರಿಯಲ್ಲಿ ಸಂದ ಮೊದಲ ಜಯ. ನಂತರ ಮಗಳ ಪಾತ್ರಕ್ಕೆ 40 ಮಕ್ಕಳನ್ನು ಆಡಿಷನ್‌ ಮಾಡಿದರೂ ಯಾರೂ ಸೂಕ್ತ ಎನಿಸಲಿಲ್ಲ. ಆಗ ಅವರ ಸಹಾಯಕ್ಕೆ ಬಂದಿದ್ದು ಸಿನಿಮಾದ ಛಾಯಾಗ್ರಾಹಕ ವೇಣು. ಅವರ ಮೂಲಕವೇ ಯುವಿನಾಳನ್ನು ಭೇಟಿಯಾಗಿದ್ದು. 
 
‘ನಿರ್ದೇಶಕರು ನನಗೆ ಕಥೆ ಹೇಳಿದಾಗಲೇ ಇವರಲ್ಲಿ ಪ್ರತಿಭೆ ಇದೆ ಎಂದು ಗೊತ್ತಾಗಿತ್ತು. ಅಲ್ಲದೇ ನನಗೆ ಹಾರರ್‌ ಸಿನಿಮಾಗಳೆಂದರೆ ತುಂಬ ಇಷ್ಟ. ಆದರೆ ಅಂಥ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಈ ಸಿನಿಮಾದ ಮೂಲಕ ನನ್ನ ಆ ಆಸೆ ಈಡೇರುತ್ತಿದೆ’ ಎಂದರು ಪ್ರಿಯಾಂಕಾ. 
 
ಮಧುಸೂದನ ಈ ಸಿನಿಮಾದಲ್ಲಿ ಚರ್ಚ್‌ ಫಾದರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವತ್ಸಲಾ ಅವರು ಪ್ರಿಯಾಂಕಾ ಉಪೇಂದ್ರ ತಾಯಿಯಾಗಿ ನಟಿಸಿದ್ದಾರೆ. ಐಶ್ಚರ್ಯಾ ಸಿಂಧೋಗಿ ಪ್ರಿಯಾಂಕಾ ಅವರ ತಂಗಿಯಾಗಿ ನಟಿಸಿದ್ದಾರೆ. 40 ಲಕ್ಷ ವೆಚ್ಚದಲ್ಲಿ ಮನೆಯ ಸೆಟ್‌ ಹಾಕಿರುವುದು ‘ಮಮ್ಮಿ’ ಸಿನಿಮಾದ ವಿಶೇಷ. ರವಿಕುಮಾರ್‌ ಹೊಸ ಹುಡುಗರನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಈ ಸಿನಿಮಾದ ನಿರ್ಮಾಣಕ್ಕೆ ಇಳಿದಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.