ADVERTISEMENT

ದ್ವಂದ್ವಾರ್ಥ ಇಲ್ಲದಿದ್ರೆ ತುಂಬ ಪ್ರಾಬ್ಲೆಮ್ಮು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಲಕ್ಕಿ
ಲಕ್ಕಿ   
‘ತಿಥಿ’ ಸಿನಿಮಾದ ಕಲಾವಿದರನ್ನು ಇಟ್ಟುಕೊಂಡು ಗಾಲಿ ಲಕ್ಕಿ ನಿರ್ದೇಶಿಸಿದ್ದ ‘ಏನ್‌ ನಿನ್‌ ಪ್ರಾಬ್ಲಮ್ಮು’ ಟ್ರೈಲರ್‌ ಮೂಲಕವೇ ಸಾಕಷ್ಟು ಸುದ್ದಿ ಮಾಡಿತ್ತು. ಗಡ್ಡಪ್ಪ, ಸೆಂಚ್ಯೂರಿ ಗೌಡ ಅವರಂಥ ಹಿರಿಯರ ಮೂಲಕ ಆಶ್ಲೀಲ ದ್ವಂದ್ವಾರ್ಥ ಸಂಭಾಷಣೆಗಳನ್ನು ಹೇಳಿಸಿರುವ ಕುರಿತು ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು. 
 
ಆಗ, ‘ಡಬಲ್‌ ಮೀನಿಂಗ್‌ ಡೈಲಾಗ್‌ ಇಲ್ಲದಿದ್ದರೆ ನನ್ನ ಸಿನಿಮಾಕ್ಕೆ ಹಣ ಹಾಕಲು ಯಾರೂ ಮುಂದೆ ಬರುವುದಿಲ್ಲ’ ಎಂದು ಗೋಳಾಡಿದ್ದ ಗಾಲಿ ಲಕ್ಕಿ ‘ಏನ್‌ ನಿನ್‌ ಪ್ಲಾಬ್ಲಮ್ಮು’ ಸಿನಿಮಾವನ್ನು ಇಂದು (ಜ.20) ತೆರೆಗೆ ತರುತ್ತಿದ್ದಾರೆ. ಈಗಲೂ ಅವರ ಗೋಳಿನ ಸ್ವರ ಬದಲಾಗಿಲ್ಲ. ಡಬಲ್‌ಮೀನಿಂಗ್‌ ಸಂಭಾಷಣೆ ಯಾಕೆ ಎಂದು ಪ್ರಶ್ನಿಸುವವರಿಗೆಲ್ಲ ಅವರು ‘ಇದು ನನಗೆ ಅನಿವಾರ್ಯ’ ಎಂಬ ಒಂದೇ ಉತ್ತರವನ್ನು ಬೇರೆ ಬೇರೆ ಉದಾಹರಣೆಗಳ ಸಮೇತ ನೀಡುತ್ತಾರೆ. ಅದಕ್ಕೆ ಅವರು ನೋಟ್‌ ಬ್ಯಾನ್‌, ಪ್ರೇಕ್ಷಕರ ಕೊರತೆ, ವಿತರಕರ ಅಸಹಕಾರ ಹೀಗೆ ಹಲವು ಚರ್ವಿತ ಚರ್ವಣ ಕಾರಣಗಳನ್ನೂ ನೀಡುತ್ತಾರೆ.
 
ಇತ್ತೀಚೆಗೆ ಚಿತ್ರದ ಬಿಡುಗಡೆ ಸುದ್ದಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೂ ಅದನ್ನೇ.
 
‘ಟ್ರೈಲರ್‌ನಲ್ಲಿನ ಡಬಲ್‌ ಮೀನಿಂಗ್‌ ಸಂಭಾಷಣೆಗಳ ಬಗ್ಗೆ ಸಾಕಷ್ಟು ಟೀಕೆ ಬಂದಿದೆ. ಆದರೆ ಇಂದಿನ ನೋಟ್‌ ಬ್ಯಾನ್‌ ಪರಿಸ್ಥಿತಿಯಲ್ಲಿ ಕೌಟುಂಬಿಕ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ’ ಎನ್ನುವ ಲಕ್ಕಿ, ಸಿನಿಮಾರಂಗಕ್ಕೆ ಬರುವುದಕ್ಕೂ ಮುನ್ನ ಜೀವನದಲ್ಲಿಯೇ ಒಂದೂ ದ್ವಂದ್ವಾರ್ಥ ಸಂಭಾಷಣೆ ಹೇಳಿರದ ಒಳ್ಳೆಯ ಹುಡುಗ ಆಗಿದ್ದರಂತೆ!
 
‘ಅಸ್ತಿತ್ವದ ಹೋರಾಟದಲ್ಲಿ ನಾನು ದ್ವಂದ್ವಾರ್ಥ ಸಂಭಾಷಣೆಯನ್ನೇ ಆಶ್ರಯಿಸಬೇಕಾಗಿದೆ. ಡಬಲ್‌ ಮೀನಿಂಗ್‌ ಡೈಲಾಗ್‌ಗಳಿದ್ದರೆ, ಟ್ರೈಲರ್‌ ಹಿಟ್‌ ಆದರೆ ಚಿತ್ರ ಬಿಡುಗಡೆಗೆ ಸಹಾಯವಾಗುತ್ತದೆ. ಅದೊಂದೇ ಕಾರಣಕ್ಕೆ ನಾನು ಇಂಥ ಸಂಭಾಷಣೆ ಬರೆಯುತ್ತಿದ್ದೇನೆ. ದ್ವಂದ್ವಾರ್ಥ ರಹಿತ ಸಿನಿಮಾವನ್ನೂ ಮಾಡಬೇಕು ಎಂಬ ಆಸೆ ಇದ್ದೇ ಇದೆ. ಆದರೆ ಆ ಆಸೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ’ ಎಂದರು ಲಕ್ಕಿ.
 
‘ನನ್ನ ಹಿಂದಿನ ಸಿನಿಮಾಗಳಲ್ಲಿ ಅವಕಾಶ ಪಡೆದ ನಟರು, ತಂತ್ರಜ್ಞರು ಈಗ ಆ ಸಿನಿಮಾದಲ್ಲಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ನನ್ನಿಂದಲೇ ಚಿತ್ರರಂಗಕ್ಕೆ ಪರಿಚಯವಾದ ಕಲಾವಿದರು ಈಗ ನನ್ನ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುತ್ತೀರಾ ಎಂದು ಕೇಳಿದರೆ ‘ಬರೀ ಡಬಲ್‌ ಮೀನಿಂಗ್ ಡೈಲಾಗ್‌ ಇರ್ತಾವಲ್ಲಾ’ ಎಂದು ಹಿಂಜರಿಯುತ್ತಾರೆ. ಇದು ನನಗೆ ಅತ್ಯಂತ ನೋವಿನ ಸಂಗತಿ. ಆದರೂ ನಾನು ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕಾದರೆ ದ್ವಂದ್ವಾರ್ಥದ ಸಿನಿಮಾಗಳನ್ನೇ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದೇನೆ’ ಎಂದು ಅವರು ನೋವಿನಿಂದಲೇ ಹೇಳಿಕೊಂಡರು.
 
ದ್ವಂದ್ವಾರ್ಥದ ಪ್ರಭಾವದಿಂದಲೇ ‘ಏನ್‌ ನಿನ್‌ ಪ್ಲಾಬ್ಲಮ್ಮು’ ಸಿನಿಮಾ ನೂರಾ ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆಯಂತೆ.
 
ಮೂರು ತಲೆಮಾರುಗಳ ನಡುವಿನ ಮೌಲ್ಯ ಬದಲಾವಣೆಗಳನ್ನು ಇಟ್ಟುಕೊಂಡು ಈ ಸಿನಿಮಾ ಹೆಣೆಯಲಾಗಿದೆಯಂತೆ. ಸೆಂಚ್ಯೂರಿ ಗೌಡ, ಗಡ್ಡಪ್ಪ ಮತ್ತು ಅಭಿ ಈ ಮೂರು ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರ ಜತೆಗಿದ್ದಿದ್ದು ಚಿತ್ರದ ನಾಯಕಿ ನಂದಿನಿ ಮಾತ್ರ. ‘ಈ ಚಿತ್ರದಲ್ಲಿ ನಟಿಸಿದ ಅನುಭವ ತುಂಬ ಚೆನ್ನಾಗಿತ್ತು. ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ’ ಎಂದು ಕೃತಜ್ಞತೆ ಹೇಳಿದ ಅವರು ‘ನನಗೆ ಚಿತ್ರದಲ್ಲಿರುವ ದ್ವಂದ್ವಾರ್ಥದ ಸಂಭಾಷಣೆಗಳು ಅರ್ಥವೇ ಆಗಿಲ್ಲ’ ಎಂದು ಮುಗ್ಧತೆಯನ್ನು ನಟಿಸುತ್ತಲೇ ನುಣುಚಿಕೊಂಡರು.
 
ಟ್ರಾಫಿಕ್‌ ಮಧ್ಯ ಸಿಲುಕಿಕೊಂಡಿದ್ದ ಸೆಂಚುರಿ ಗೌಡ ಮತ್ತು ಗಡ್ಡಪ್ಪ ಪತ್ರಿಕಾಗೋಷ್ಠಿ ಮುಗಿದರೂ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.