ADVERTISEMENT

ಧೂಮಪಾನಿಗಳಿಗೆ ಸಿನಿಮಾ ಮದ್ದು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2015, 19:38 IST
Last Updated 19 ನವೆಂಬರ್ 2015, 19:38 IST

ಸಿಗರೇಟ್ ಸೇದಿದರೆ ಆರೋಗ್ಯ ಹಾಳು ಎಂಬುದನ್ನು ಹೇಳಲು ‘ಸಿಗರೇಟ್’ ಎಂಬ ಶೀರ್ಷಿಕೆಯನ್ನೇ ಆಯ್ದುಕೊಂಡು ಶಂಕರ್ ಚಿತ್ರ ನಿರ್ದೇಶಿಸಿದ್ದಾರೆ. ‘ಸಂದೇಶ ಕೊಡುವ ಕಮರ್ಷಿಯಲ್ ಸಿನಿಮಾ ಇದು’ ಎಂಬ ಒಂದು ಸಾಲಿನ ಬಣ್ಣನೆ ಅವರದು.

ಈ ಮೊದಲು ಒಂದೆರಡು ಸಿನಿಮಾ ಮಾಡಿದ್ದ ಶಂಕರ್‌ಗೆ, ಎಲ್ಲ ವರ್ಗದ ಜನರ ಗಮನ ಸೆಳೆಯುವ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದಕ್ಕೆ ಶಿವು ಕಬ್ಬಿಣ ಸಹಕಾರ ನೀಡಿದರು. ‘ಸಿಗರೇಟ್’ ಸೆಟ್ಟೇರಿತು. ಹಾಗೂ ಹೀಗೂ ನಡೆಯುತ್ತ, ಓಡುತ್ತ ಈಗ ಸಿನಿಮಾ ತೆರೆ ಕಾಣುವ ಹಂತಕ್ಕೆ ಬಂದು ನಿಂತಿದೆ.

‘ಇದೊಂದು ಹಾಸ್ಯಭರಿತ ಸಿನಿಮಾ. ಆದರೆ ನಗುನಗುತ್ತ ಸಂದೇಶ ರವಾನಿಸುತ್ತೇವೆ. ಚಿತ್ರ ನೋಡಿ ಹೊರಗೆ ಬಂದವರು ಖಂಡಿತ ಸಿಗರೇಟ್‌ ಬಗ್ಗೆ ತಾತ್ಸಾರ ಬೆಳೆಸಿಕೊಳ್ಳುತ್ತಾರೆ. ಅಷ್ಟು ವಿಶ್ವಾಸ ನಮಗಿದೆ’ ಎಂಬ ಖಚಿತ ಮಾತು ಶಂಕರ್ ಅವರದು.

ಸ್ನೇಹವನ್ನು ಸಿಗರೇಟ್ ಗಟ್ಟಿಗೊಳಿಸುತ್ತದೆ ಎನ್ನುವ ಮಾತು ಸುಳ್ಳು ಎಂದ ಸಂಗೀತ ನಿರ್ದೇಶಕ ಇಂದ್ರಸೇನ್, ‘ಇದೊಂದು ಸಾಮಾಜಿಕ ಪಿಡುಗು. ಈ ವಿಷಯವನ್ನು ಇಟ್ಟುಕೊಂಡೇ ಅರಿವು ಮೂಡಿಸುವ ಸಿನಿಮಾ ಮಾಡಿದ ಶಂಕರ್‌ಗೆ ಅಭಿನಂದನೆಗಳು’ ಎಂದರು. ಆರು ನಿಮಿಷಗಳಲ್ಲಿ 22 ಭಾಷೆಗಳ ಮೂಲಕ ಸಿಗರೇಟ್ ಆರೋಗ್ಯಕ್ಕೆ ಅಪಾಯಕರ ಎಂಬ ಸಂದೇಶ ಸಾರುವ ಹಾಡಿಗೆ ಸಂಗೀತ ಸಂಯೋಜಿಸಿದ ಸನ್ನಿವೇಶವನ್ನು ನೆನಪಿಸಿಕೊಂಡರು.

‘ಪ್ರೇಮಕಥೆ ಹಾಗೂ ಸಿಗರೇಟ್‌–ಎರಡನ್ನೂ ಬೆಸೆದ ಸಂವೇದನೆಯ ಕಥೆ ಸಿನಿಮಾದ್ದು. ನಾನೂ ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ’ ಎಂದು ನಾಯಕ ನಾಗಶೇಖರ್ ಹೇಳಿದರು. ನಾಯಕಿಯರಾದ ರೂಪಶ್ರೀ, ರಕ್ಷಿತಾ ಪೊನ್ನಪ್ಪ ಹಾಗೂ ನೇಹಾ ಪಾಟೀಲ್ ಮಾತನಾಡಿದರು. ಸಿಗರೇಟ್ ಫ್ಯಾಕ್ಟರಿ ಮಾಲೀಕನಾಗಿ ಕಾಣಿಸಿಕೊಂಡಿರುವ ಸುಧಾಕರ, ಈ ಚಿತ್ರ ನೋಡಿದ ಧೂಮಪಾನಿಗಳು, ತಕ್ಷಣ ಸಿಗರೇಟ್ ತ್ಯಜಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಎಲ್ಲ ತಾಂತ್ರಿಕ ಕೆಲಸಗಳು ಮುಗಿದಿವೆ. ಜಯಣ್ಣ ಕಂಬೈನ್ಸ್‌ ಮೂಲಕ ಸುಮಾರು 60 ಕೇಂದ್ರಗಳಲ್ಲಿ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.