ADVERTISEMENT

‘ಧೈರ್ಯ’ವಂತ ಅಜಯ್‌ ರಾವ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 19:30 IST
Last Updated 6 ಏಪ್ರಿಲ್ 2017, 19:30 IST
‘ಧೈರ್ಯ’ವಂತ ಅಜಯ್‌ ರಾವ್‌
‘ಧೈರ್ಯ’ವಂತ ಅಜಯ್‌ ರಾವ್‌   
‘ಅಜಯ್‌ ರಾವ್‌ ಅಂದ್ರೆ ಎಮೋಶನಲ್‌ ಪಾತ್ರಗಳು, ಸೆಂಟಿಮೆಂಟ್‌, ಗ್ಲಿಸರಿನ್‌ ಅಳು ಅಂತಾನೇ ಎಲ್ಲರೂ ಯೋಚಿಸುತ್ತಿದ್ದರು. ನನ್ನನ್ನು ಯಾಕೆ ಎಲ್ಲರೂ ಹೀಗೆಯೇ ನೋಡ್ತಾರೆ. ಈ ಇಮೇಜ್‌ಗಿಂತ ಪೂರ್ತಿ ಭಿನ್ನವಾಗಿ ತೋರಿಸಬೇಕು ಎಂದು ಯಾಕೆ ಯೋಚಿಸಲ್ಲ ಎಂದು ಬೇಸರವಾಗುತ್ತಿತ್ತು. ‘ಧೈರ್ಯಂ’ ಸಿನಿಮಾ ಈ ಬೇಸರವನ್ನು ತೊಡೆದುಹಾಕಿದೆ’ – ಹೀಗೆಂದು ಸಮಾಧಾನದ ಉಸಿರುಬಿಟ್ಟರು ಅಜಯ್‌ರಾವ್‌.
 
ಅದು‘ಧೈರ್ಯಂ’ ಸಿನಿಮಾ ಮೋಷನ್‌ ಪೊಸ್ಟರ್‌ ಬಿಡುಗಡೆ ಕಾರ್ಯಕ್ರಮ. ಅಜಯ್‌ ಮಾತಿನ ಲಹರಿಯಲ್ಲಿದ್ದರು. ತಮ್ಮ ಈ ಹೊಸ ಅವತಾರದ ಬಗ್ಗೆ ಖುಷಿಯಿದ್ದಷ್ಟೇ ಆತಂಕವೂ ಇದ್ದದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
 
‘ಧೈರ್ಯಂ ಕಥೆ ಕೇಳಿದಾಗ ತುಂಬಾ ಎಕ್ಸೈಟ್‌ ಆಗಿದ್ದೆ. ಆದರೆ ಸಿನಿಮಾ ಮಾಡ್ತಾ ಮಾಡ್ತಾ ಶೀರ್ಷಿಯಲ್ಲಿದ್ದ ಧೈರ್ಯ ನನ್ನಲ್ಲಿ ಇಲ್ಲವಾಗಿತ್ತು. ಭಯ ಶುರುವಾಗಿತ್ತು. ಅದಕ್ಕೆ ಕಾರಣ ನನ್ನ ಪಾತ್ರ. ಇದುವರೆಗೆ ಕಾಣಿಸಿಕೊಂಡಿರದ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.

ಈ ಸಿನಿಮಾದ ನಾಯಕನಿಗೆ ಕೊಂಚ ನೆಗೆಟಿವ್‌ ಶೇಡ್‌ ಕೂಡ ಇದೆ. ಜನರು ಈ ಪಾತ್ರದಲ್ಲಿ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಶುರುವಾಯ್ತು. ಆ ಆತಂಕ ಇನ್ನೂ ಇದೆ’ ಎಂದರು ಅಜಯ್‌.
 
‘ಧೈರ್ಯಂ’ ಕೆಲಸ ಬಹುತೇಕ ಪೂರ್ತಿಗೊಂಡಿದೆ. ಈ ಹಂತದಲ್ಲಿ ಹಲವು ಸಲ ಸಿನಿಮಾ ನೋಡಿರುವ ಅಜಯ್‌ ಅವರಲ್ಲಿ ಸಿನಿಮಾದ ಬಗ್ಗೆ ವಿಶ್ವಾಸವೂ ಬಂದಿದೆ. 
 
‘ಇದು ಯುವಜನರಿಗೆ ಸ್ಫೂರ್ತಿ ನೀಡುವಂಥ ಚಿತ್ರ. ಸಾಮಾಜಿಕ ಸಂದೇಶವೂ ಇದೆ. ಸಮಾಜದಲ್ಲಿ ಎಂಥದ್ದೇ ಕಷ್ಟಗಳು ಎದುರಾದರೂ ಧೈರ್ಯವೊಂದಿದ್ದರೆ ಗೆದ್ದು ಬರಬಹುದು ಎಂಬುದನ್ನು ಸಿನಿಮಾ ತೋರಿಸುತ್ತದೆ’ ಎಂದರು ನಿರ್ದೇಶಕ ಶಿವ ತೇಜಸ್‌. 
 
ಮೋಶನ್‌ ಪೊಸ್ಟರ್‌ ಬಿಡುಗಡೆ ಮಾಡಿದ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಧೈರ್ಯಂನಲ್ಲಿ ನಾಯಕನ ತಂದೆಯ ಪಾತ್ರ ಮಾಡಿದ್ದಾರೆ. ‘ಎಲ್ಲರೂ ಸೇರಿ ಶ್ರಮಿಸಿದಾಗ ಒಂದು ಒಳ್ಳೆಯ ಸಿನಿಮಾ ಆಗುತ್ತದೆ ಎನ್ನುವುದಕ್ಕೆ ಧೈರ್ಯಂ ಒಳ್ಳೆಯ ನಿದರ್ಶನ. ಅಜಯ್‌ ರಾವ್‌ಗೆ ಈ ಸಿನಿಮಾ ಖಂಡಿತ ಯಶಸ್ಸು ತಂದುಕೊಡುತ್ತದೆ’ ಎಂದರು ಕೃಷ್ಣ.
 
ಈ ಸಿನಿಮಾದಲ್ಲಿ ಅಜಯ್‌ಗೆ ಜತೆಯಾಗಿ ಅಧಿತಿ ಪ್ರಭುದೇವ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಅವರಿಗಿದು ಮೊದಲ ಸಿನಿಮಾ. ‘ಈ ಚಿತ್ರದಿಂದ ಒಂದು ಒಳ್ಳೆಯ ಕುಟುಂಬ ದೊರೆತಂತಾಗಿದೆ. ಈ ತಂಡದಲ್ಲಿ ನಾನೇ ಹೊಸಬಳು. ಆದರೆ ಯಾರೂ ಹೊಸಬಳು ಎಂದು ನೋಡದೇ ತುಂಬ ಸಹಕಾರ ನೀಡಿದರು. 

ನನ್ನಿಂದ ಸಾಧ್ಯವಾದಷ್ಟೂ ಒಳ್ಳೆಯ ರೀತಿಯಲ್ಲಿ ನಟಿಸಿದ್ದೇನೆ. ಈ ಸಿನಿಮಾದಿಂದ ನನ್ನ ವೃತ್ತಿಜೀವನದ ಭವಿಷ್ಯ ರೂಪಿಸಿಕೊಳ್ಳು ಖಂಡಿತ ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.
 
ನಿರ್ದೇಶಕ ಶಿವ ತೇಜಸ್‌ ಮೇಲೆ ನಂಬಿಕೆ ಕೆ. ರಾಜು ಅವರು ಹಣ ಹೂಡಿದ್ದಾರೆ. ಶೇಖರ್‌ ಚಂದ್ರ ಛಾಯಾಗ್ರಹಣ ಸಿನಿಮಾಕ್ಕಿದೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ತಂಡ ಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.