ADVERTISEMENT

ನಗುನಗುತಾ ಅಪೂರ್ವ...

ಗಣೇಶ ವೈದ್ಯ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

‘ಟ್ರೇಲರ್ ನೋಡಿ, ಹಾಡುಗಳನ್ನು ಕೇಳಿ ಜನರು ಈಗಾಗಲೇ ಸಾಕಷ್ಟು ಇಷ್ಟ ಪಟ್ಟಿದ್ದಾರೆ. ಸಿನಿಮಾಕ್ಕೆ ಬರಲು ಇದು ಆಮಂತ್ರಣ. ಇನ್ನು ಸಿನಿಮಾ ನೋಡಿದರೆ ಹಬ್ಬವೇ. ಅಷ್ಟು ಮನರಂಜನೆ ಚಿತ್ರದಲ್ಲಿದೆ. ಎಲ್ಲಿಯೂ ಹೊಸಬರೇ ಮಾಡಿದ ಚಿತ್ರ ಎಂದನ್ನಿಸುವುದಿಲ್ಲ. ಇಂಥ ಒಳ್ಳೆಯ ಚಿತ್ರದ ಭಾಗವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ’

ಇದು ತಾವು ಮೊದಲ ಬಾರಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಅವಕಾಶ ನೀಡಿದ ಚಿತ್ರದ ಬಗ್ಗೆ ನಟಿ ಅಪೂರ್ವ ಗೌಡ ಆಡುವ ಸಂತಸದ ನುಡಿ. ಅಂದಹಾಗೆ ಅಪೂರ್ವ ಅವರ ಮೊದಲ ಚಿತ್ರ ‘ಫಸ್ಟ್ ರ‍್ಯಾಂಕ್‌ ರಾಜು’ ಇಂದು (ನ. 27) ತೆರೆಕಾಣುತ್ತಿದೆ.

ದಂತ ವೈದ್ಯಕೀಯ ವಿದ್ಯಾರ್ಥಿನಿ ಅಪೂರ್ವ ‘...ರಾಜು’ ತಂಡಕ್ಕೆ ಆಡಿಷನ್ ನೀಡಿ ಬಂದಿದ್ದರು. ಹೇಗಿದ್ದರೂ ಆಯ್ಕೆಯಾಗುವುದಿಲ್ಲ ಎಂದುಕೊಂಡು ಮನೆಯಲ್ಲೂ ಆ ವಿಚಾರ ಹೇಳಿರಲಿಲ್ಲ. ಆಡಿಷನ್ ಆಗಿ ಒಂದು ವಾರ ಯಾವ ಸುದ್ದಿಯೂ ಇರಲಿಲ್ಲ. ಆದರೆ ಸರಿಯಾಗಿ ಕಳೆದ ವರ್ಷದ ಆಯುಧ ಪೂಜೆಯ ದಿನ ‘ನೀನು ಸೆಲೆಕ್ಟ್ ಆಗಿದ್ದೀಯಮ್ಮ. ಬಿಡುವಾದಾಗ ಕಚೇರಿಗೆ ಬಾ, ಕಥೆ ಹೇಳ್ತೀನಿ’ ಎಂದು ನಿರ್ದೇಶಕ ನರೇಶ್ ಕುಮಾರ್ ಕರೆ ಬಂದಿತ್ತು.

ಈಗ ಮನೆಯಲ್ಲಿ ಹೇಳದೆ ಬೇರೆ ದಾರಿಯಿರಲಿಲ್ಲ. ಮೊದಲು ಮನೆಯಲ್ಲಿ ಬೇಡವೆಂದರೂ, ಈ ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಮುಂದಿನ ಭವಿಷ್ಯ ನಿರ್ಧರಿಸಬೇಕು ಎಂಬ ಷರತ್ತೂ ಬಿತ್ತು. ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದೇನೆ ಎಂದರೆ ಚಿತ್ರರಂಗ ಪ್ರವೇಶಕ್ಕೆ ಇದು ಶುಭ ಸೂಚನೆ ಎಂಬ ಭಾವ ಅಪೂರ್ವ ಅವರದ್ದು.

‘ಆಯ್ಕೆಯಾದ ಎರಡೇ ವಾರಕ್ಕೆ ಚಿತ್ರೀಕರಣ ಆರಂಭವಾಯಿತು. ಪಾತ್ರದಲ್ಲಿ ಆಳವಾಗಿ ಇಳಿಯಲು ಸಾಧ್ಯವಾಗಿಲ್ಲ. ಆದರೆ ಚಿತ್ರೀಕರಣಕ್ಕೂ ಮುನ್ನ ನಿರ್ದೇಶಕರು ತರಬೇತಿ ನೀಡಿದ್ದರು. ಕಾಲೇಜಿನಲ್ಲಿ ಯಾವಾಗಲೂ ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಇವೆಲ್ಲ ಕ್ಯಾಮೆರಾ ಎದುರಿಸಲು ಸಹಾಯವಾಯಿತು. ಈ ಚಿತ್ರ ನನಗೆ ಒಂದು ರೀತಿಯಲ್ಲಿ ಕಲಿಕೆಯೇ’ ಎನ್ನುತ್ತಾರೆ ಅಪೂರ್ವ. ಚಿಕ್ಕಂದಿನಲ್ಲಿ ಯಾವುದಾದರೂ ಕಲಾವಿದರನ್ನು ಅನುಸರಿಸಿ ಅಭಿನಯಿಸುವ ಹವ್ಯಾಸವೂ ಅವರಿಗಿತ್ತು. ‘ಇವಳು ನಟಿಯಾಗುವುದು ಗ್ಯಾರಂಟಿ’ ಎಂದು ಆಗಲೇ ಹೇಳಿದವರೂ ಇದ್ದರು.

ಇಬ್ಬರು ನಾಯಕಿಯರಿದ್ದರೂ ಅಪೂರ್ವ ಪಾತ್ರದ ಪ್ರಾಮುಖ್ಯತೆಗೆ ಏನೂ ಕೊರತೆಯಾಗಿಲ್ಲ. ಅವರಿಲ್ಲಿ, ಮೊದಲ ಬೆಂಚಿನ ಬುದ್ದು ರಾಜುವಿಗೆ ತಿಳಿವಳಿಕೆ ಹೇಳಿ ಆತನನ್ನು ‘ಕಾಲೇಜು ಹುಡುಗ’ನಂತೆ ತಯಾರು ಮಾಡುವ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದೊಳಗೆ, ಸಿನಿಮಾ ಎಂದರೆ ಪ್ರಾಣ ಎನ್ನುವ ಅವರಿಗೆ ಸಿನಿಮಾ ನಾಯಕಿ ಮಾಡಿಕೊಳ್ಳುವಂತೆ ಫ್ಯಾಷನ್ ಮಾಡುವ ಹುಚ್ಚೂ ಇದೆಯಂತೆ.

‘ಸಿನಿಮಾ ಸೆಟ್ ಹೇಗಿರುತ್ತೆ ಎಂಬ ಕಲ್ಪನೆಯೂ ಇರಲಿಲ್ಲ. ವರ್ಕ್‌ಷಾಪ್ ಮಾಡಿಸಿದ್ದ ಕಾರಣ ನಾಯಕ ಗುರುನಂದನ್ ಜೊತೆ ಕೆಲಸ ಸಲೀಸಾಯಿತು. ಆದರೆ ಅನಂತನಾಗ್, ಸಾಧುಕೋಕಿಲ, ಅಚ್ಯುತಕುಮಾರ್ ಅವರೆದುರು ಅಭಿನಯಿಸುವಾಗ ನರ್ವಸ್ ಆಗಿದ್ದೆ. ಈಗ ಆ ಭಯ ಇಲ್ಲ. ಮುಂದಿನ ಚಿತ್ರಗಳಲ್ಲಿ ಇನ್ನೂ ಚೆನ್ನಾಗಿ ನಟಿಸಬಹುದು’ ಎಂದು ತಮ್ಮ ಆರಂಭಿಕ ಅನುಭವಾಮೃತವನ್ನು ಹಂಚಿಕೊಳ್ಳುತ್ತಾರೆ ಅಪೂರ್ವ. ಚಿತ್ರ ಬಿಡುಗಡೆಯ ದಿನ ಹತ್ತಿರವಾದಂತೆ ಅವರ ನರ್ವಸ್‌ನೆಸ್ ಇನ್ನೂ ಹೆಚ್ಚಾಗಿದೆ. ಆದರೆ ಅವರಿಗೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಸ್ವಲ್ಪ ಧೈರ್ಯವನ್ನೂ ತುಂಬಿಕೊಂಡಿದ್ದಾರೆ.

‘ಸುಮ್ಮನೇ ಬುದ್ಧಿವಾದ ಹೇಳಿದರೆ ಇಷ್ಟವಾಗುವುದಿಲ್ಲ. ಹಾಸ್ಯದ ಜೊತೆ ಬೆರೆಸಿದಾಗ ಅದರ ಪರಿಣಾಮವೇ ಭಿನ್ನವಾಗಿರುತ್ತದೆ. ಚಿಕ್ಕ ಮಕ್ಕಳ ಜೊತೆ ಈ ಸಿನಿಮಾಕ್ಕೆ ಬರಬಾರದಿತ್ತು ಎಂದು ಎಲ್ಲಿಯೂ ಅನ್ನಿಸುವುದಿಲ್ಲ. ಇಂದಿನ ವೇಗದ ಬದುಕಿಗೆ ಒಂದೊಳ್ಳೆಯ ವಿರಾಮ–ಆರಾಮ ನಮ್ಮ ಚಿತ್ರ’ ಎಂದು ಚಿತ್ರಕ್ಕೆ ಆಹ್ವಾನ ನೀಡುತ್ತಾರೆ ಅಪೂರ್ವ.

ಮೂರನೇ ಸೆಮಿಸ್ಟರ್ ಓದುತ್ತಿರುವ ಅಪೂರ್ವಗೆ ನಟಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದನ್ನಿಸಿರೆ ಹಲ್ಲಿನ ಡಾಕ್ಟರ್ ಆಗಿ ಮುಂದುವರಿಯುವ ಆಯ್ಕೆಯೂ ಇದೆ. ಆದರೆ ಅದು ನಿರ್ಧಾರವಾಗುವುದು ‘ಫಸ್ಟ್ ರ‍್ಯಾಂಕ್‌ ರಾಜು’ ಪಾಸೋ ಫೇಲೋ ಎಂಬುದನ್ನು ಅವಲಂಬಿಸಿದೆ. ಅದಕ್ಕಾಗಿಯೇ ಈವರೆಗೆ ಬಂದ ಕೆಲವು ಅವಕಾಶಗಳಿಗೆ ಅವರಿನ್ನೂ ಗ್ರೀನ್ ಸಿಗ್ನಲ್ ತೋರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.