ADVERTISEMENT

ನಾಯಕನ ಬೂಟಿನೊಳಗೆ ಸೋನು ಕಾಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ತಾವು ಅಭಿನಯಿಸಿದ ಬಹುನಿರೀಕ್ಷಿತ ‘ಹ್ಯಾಪಿ ನ್ಯೂ ಇಯರ್‌’ ಚಿತ್ರದ ಬಿಡುಗಡೆಯ ನಂತರ ನಟ ಸೋನು ಸೂದ್‌ ತಮ್ಮ ನಟನಾಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಹ್ಯಾಪಿ ನ್ಯೂ ಇಯರ್‌’ನಲ್ಲಿನ ತಮ್ಮ ಅಭಿನಯಕ್ಕೆ ವೀಕ್ಷಕ ವರ್ಗ ಮತ್ತು ಚಿತ್ರರಂಗದಿಂದ ಬರುವ ಪ್ರತಿಕ್ರಿಯೆಗಳನ್ನು ಗಮನಿಸಿ ತಮ್ಮ ನಟನಾ ವೃತ್ತಿಯನ್ನು ಮತ್ತೊಂದು ಹಂತಕ್ಕೆ ಒಯ್ಯುವ ಸಿದ್ಧತೆ ಅವರ ಈ ನಿರ್ಧಾರದ ಹಿಂದೆ ಇದೆ.
‘ಹ್ಯಾಪಿ ನ್ಯೂ ಇಯರ್‌ ಚಿತ್ರ ನನ್ನ ವೃತ್ತಿಜೀವನದ ಪರ್ವಬಿಂದು ಎಂದುಕೊಂಡಿದ್ದೇನೆ. ಇದರ ಮೂಲಕ ನನ್ನ ನಟನಾವೃತ್ತಿಯ ಒಂದು ಹಂತ ಮುಗಿದು ಇನ್ನೊಂದು ಮಜಲು ಆರಂಭವಾಗಿದೆ ಎಂಬುದು ನನ್ನ ಭಾವನೆ. ಆದ್ದರಿಂದಲೇ ಹ್ಯಾಪಿ ನ್ಯೂ ಇಯರ್‌ ಚಿತ್ರದ ನಂತರ ನಾನು ಯಾವುದೇ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಈ ಸಿನಿಮಾದಲ್ಲಿ ಮುಖ್ಯಪಾತ್ರಧಾರಿಯಾಗಿ ನನ್ನ ಅಭಿನಯಕ್ಕೆ ಬರುವ ಪ್ರತಿಕ್ರಿಯೆಗಳಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ತಮಗೆ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಬಂದಿದ್ದು ಶಾರುಖ್‌ ಖಾನ್‌ ಅವರಿಂದ ಎಂದು ಸೋನು ಒಪ್ಪಿಕೊಳ್ಳುತ್ತಾರೆ.
‘ಹ್ಯಾಪಿ ನ್ಯೂ ಇಯರ್‌ನ ಪ್ರಚಾರ ಕಾರ್ಯಗಳಲ್ಲಿ ಶಾರುಖ್‌ ನನಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದಾರೆ. ಪ್ರತಿ ಹಂತದಲ್ಲಿಯೂ ಚಿತ್ರದಲ್ಲಿನ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಅದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಹಿಂದಿ, ತೆಲುಗು, ತಮಿಳು ಭಾಷೆಯ ಅನೇಕ ಚಿತ್ರಗಳಲ್ಲಿ ಮುಖ್ಯ ಖಳನಾಯಕ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಇದು ಗಂಭೀರ ನಾಯಕನ ಪಾತ್ರಗಳನ್ನು ನಿರ್ವಹಿಸಲು ಸಕಾಲ’ ಎಂದು ಹೇಳುವ ಮೂಲಕ ನಾಯಕನಾಗಲು ತಾವು ಸಿದ್ಧ ಎಂಬ ಸುಳಿವನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT