ADVERTISEMENT

ನಿಶಾಂತ್ ನಿರೀಕ್ಷೆ...

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

‘ಗಣಪ’ ಚಿತ್ರಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ಸಿಕ್ಕುತ್ತಿದೆ. ಇತ್ತ ನಟ ನಿಶಾಂತ್ ಸಿನಿಮಾ ಭಾಗ್ಯದ ಬಾಗಿಲೂ ತೆರೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ‘ಗಣಪ’ನಲ್ಲಿ ನಾಯಕನ ಸ್ನೇಹಿತ ಮಣಿ ಪಾತ್ರದಲ್ಲಿ ಕಾಣಿಸಿಕೊಂಡವರು ಜಿ.ಎನ್. ನಿಶಾಂತ್. ಕಿರುತೆರೆ ಪ್ರೇಕ್ಷಕರಿಗೆ ಕೊಂಚ ಪರಿಚಿತವಾಗಿರುವ ಅವರು ಈಗ ‘ಗಣಪ’ನ ಮೂಲಕ ಹಿರಿತೆರೆ ಪ್ರೇಕ್ಷಕರಲ್ಲೂ ಗುರ್ತಾಗಿದ್ದಾರೆ. 

‌ಲೂಸ್ ಮಾದ ಯೋಗೀಶ್ ಅಭಿನಯದ ‘ಕಾಲಾಯ ತಸ್ಮೈ ನಮಃ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ನಿಶಾಂತ್ ತಣ್ಣನೆ ಪ್ರವೇಶ ಮಾಡಿದವರು. ಇದಕ್ಕೂ ಮುನ್ನ ಅವರು ತೊಡಗಿದ್ದು ಸಾಲು ಸಾಲು ಧಾರಾವಾಹಿಗಳಲ್ಲಿ. ನಂತರ ‘ಜಿಂಕೆ ಮರಿ’ ಸಿನಿಮಾದಲ್ಲಿ. ಈಗ ‘ಗಣಪ’, ಮುಂದಿನದ್ದು ‘ಕೂಗು’ ಚಿತ್ರ. ಡ್ರಾಮಾ ಡಿಪ್ಲೊಮಾ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಡ್ರಾಮಾ ಸ್ನಾತಕೋತ್ತರ ಪದವಿ ಪಡೆದಿರುವ ನಿಶಾಂತ್‌ ರಂಗಭೂಮಿಯಲ್ಲೂ ತೊಡಗಿಸಿಕೊಂಡವರು.

‘‘ಕಾಲೇಜು ದಿನಗಳಲ್ಲಿಯೇ ನಟನಾಗಬೇಕು ಎನ್ನುವ ಹಂಬಲವಿತ್ತು. ದ್ವಿತೀಯ ಪಿಯು ವ್ಯಾಸಂಗದ ವೇಳೆ ಸಂಜೆ ಕಾಲೇಜಿನಲ್ಲಿ ಡ್ರಾಮಾ ಡಿಪ್ಲೊಮಾ ಪೂರ್ಣಗೊಳಿಸಿದೆ. ಆನಂತರ ಸ್ನಾತಕೋತ್ತರ ಪದವಿ. ಸದ್ಯ ಫೈನಲ್ ಕಟ್ ಸಂಸ್ಥೆಯಲ್ಲಿರುವ ಹಿರಿಯೂರು ರಾಘವೇಂದ್ರ ‘ಕಾಲಾಯ ತಸ್ಮೈ ನಮಃ’ ಚಿತ್ರದಲ್ಲಿ ರೋಲು ಕೊಡಿಸಿದರು. ಆ ಚಿತ್ರದ ನಿರ್ದೇಶಕ ಚಂದ್ರಶೇಖರ್ ಶ್ರೀವಾತ್ಸವ. ‘ನಿನಗೆ ಆಡಿಷನ್ ಮಾಡಿಸುವುದಿಲ್ಲ ಒಂದು ಧಾರಾವಾಹಿಯಲ್ಲಿ ಕಾಮಿಡಿ ಪಾತ್ರ ಕೊಡುವೆ’ ಎಂದರು ನಿರ್ದೇಶಕರು.ಆ ಪಾತ್ರ ನೋಡಿ ಚಿತ್ರದಲ್ಲಿ ಅವಕಾಶ ನೀಡಿದರು’’ ಎಂದು ಮೊದಲ ಸಿನಿಮಾ ಸಂಪರ್ಕವನ್ನು ಬಿಡಿಸಿಡುವರು ನಿಶಾಂತ್. ಸದ್ಯ ‘ಮಹಾಭಾರತ’ ಧಾರಾವಾಹಿಯಲ್ಲಿ ದುರ್ಯೋಧನನಿಗೆ ನೆರವಾಗುವ ಆಲಂಬೂಷನಾಗಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಸಿನಿಮಾ ‘ಕೂಗು’ ಕೈಯಲ್ಲಿದೆ.

ನಿಶಾಂತ್ ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಕಾವ್ಯ–ಕಸ್ತೂರಿ’, ‘ಚಿಟ್ಟೆ ಹೆಜ್ಜೆ’, ‘ಚಿತ್ರಲೇಖ’ ಇತ್ಯಾದಿ. ‘ಚಿತ್ರಲೇಖ’ದಲ್ಲಿ ಅತ್ತಿಗೆಯ ವಿರುದ್ಧ ಕತ್ತಿ ಮಸೆಯುವ ವಿಲನ್ ಮಂಡ್ಯ ರವಿ ಅವರಿಗೆ ಸಹಾಯಕನಾಗಿ ಕಾಣಿಸಿಕೊಂಡಿದ್ದರು. ಆ ಪಾತ್ರ ಅವರಿಗೆ ಐಡೆಂಟಿಟಿಯನ್ನು ತಂದುಕೊಟ್ಟಿತು. ‘ಚಿತ್ರಲೇಖ ನೋಡುವ ಫ್ಯಾಮಿಲಿ ಆಡಿಯನ್ಸ್ ನನ್ನನ್ನು ಚೆನ್ನಾಗಿಯೇ ಗುರ್ತಿಸಿದರು. ಕಿರುತೆರೆಯ ಬದುಕಿಗೆ ಬ್ರೇಕ್ ಸಹ ಕೊಟ್ಟಿತು’ ಎಂದು ವಿವರಿಸುವರು.

‘ಗಣಪ’ ಚಿತ್ರವನ್ನು ನೋಡಿರುವ ಇಬ್ಬರು ನಿರ್ದೇಶಕರು ನಿಶಾಂತ್ ಪಾತ್ರವನ್ನು ಮೆಚ್ಚಿಕೊಂಡಿದ್ದಾರಂತೆ. ‘ಈ ಹಿನ್ನೆಲೆಯಲ್ಲಿ ಖಂಡಿತಾ ನನಗೆ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳು ಸಿಕ್ಕಲಿವೆ. ಸದ್ಯ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ನೀಡುವೆ’ ಎನ್ನುವ ಅವರಿಗೆ ಒಳ್ಳೆಯ ಪಾತ್ರ ಸಿಕ್ಕರೆ ಕಿರುತೆರೆಯಲ್ಲೂ ತೊಡಗುವ ಮನಸ್ಸಿದೆ. ರಂಗಭೂಮಿ ಹಿನ್ನೆಲೆಯ ನಿಶಾಂತ್ 60ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ನಮ್ಮ ನಿಮ್ಮೊಳಗೊಬ್ಬ’, ‘ಸಮಗ್ರ ಮಹಾಭಾರತ’ ಸೇರಿದಂತೆ ಪ್ರಮುಖ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಉತ್ತಮ ಮತ್ತು ಎಲ್ಲ ಪಾತ್ರಗಳು ಸಿಗಬೇಕು ಎಂದರೆ ಫಿಟ್‌ನೆಟ್‌ ಕಾಪಾಡಿಕೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಸುಮಾರು 25 ಕೆ.ಜಿ. ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT