ADVERTISEMENT

ನೀನಾಸಮ್ ಸತೀಶ್ ಪ್ರಕಾರ 'ನಮ್ಮೂರಲ್ಲಿ ಚಳಿಗಾಲದಲ್ಲಿ ಹಾಡು' ಹುಟ್ಟಿದ್ದು ಹೀಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 16:15 IST
Last Updated 21 ಏಪ್ರಿಲ್ 2017, 16:15 IST
ನೀನಾಸಮ್ ಸತೀಶ್ - ಕೃಪೆ ಫೇಸ್‍ಬುಕ್
ನೀನಾಸಮ್ ಸತೀಶ್ - ಕೃಪೆ ಫೇಸ್‍ಬುಕ್   

ಬೆಂಗಳೂರು: ಬ್ಯೂಟಿಫುಲ್ ಮನಸುಗಳು ಚಿತ್ರದ ನಮ್ಮೂರಲ್ಲಿ ಚಳಿಗಾಲದಲ್ಲಿ ಹಾಡು  ಬರ್ಟೋಲ್ಟ್ ಬ್ರೆಕ್ಟ್ ಅವರ ಪುಂಟಿಲಾ ನಾಟಕದಲ್ಲಿ ಬಳಸಲಾದ 'ನಮ್ಮೂರಲ್ಲಿ ಮೇ ತಿಂಗಳಲ್ಲಿ ಮುಂಜಾವು ಮೂಡೋದೇ ಚಂದ' ಹಾಡಿನಿಂದ ಸ್ಫೂರ್ತಿ ಪಡೆದದ್ದು ಎಂದು 'ಪ್ರಜಾವಾಣಿ' ವರದಿ ಪ್ರಕಟಿಸಿತ್ತು.

ಈ ವರದಿಗೆ ‘ಬ್ಯೂಟಿಫುಲ್ ಮನಸುಗಳು’ ಚಿತ್ರದ ನಾಯಕ ಸತೀಶ್ ನೀನಾಸಮ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ. ‘ಕಾರಂತರ ಹಾಡಿನಿಂದ ಸ್ಫೂರ್ತಿಗೊಂಡು ಬ್ಯೂಟಿಫುಲ್ ಮನಸುಗಳು ಹಾಡನ್ನು ಮಾಡಿದ್ದೇವೆ. ಅದನ್ನು ನಾವು ಪತ್ರಿಕಾಗೋಷ್ಠಿಯಲ್ಲೂ ಹೇಳಿದ್ದೇವೆ. ಸಿನಿಮಾದಲ್ಲಿ ಕೂಡ ಕೆ.ವಿ. ಸುಬ್ಬಣ್ಣ, ಬಿ.ವಿ. ಕಾರಂತ, ಕೆ.ವಿ. ಅಕ್ಷರ ಮತ್ತು ನೀನಾಸಮ್‌ಗೆ ಕೃತಜ್ಞತೆ ಸಲ್ಲಿಸಿದ್ದೇವೆ’ ಎಂದು ಉಲ್ಲೇಖಿಸಿದ್ದಾರೆ.

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸತೀಶ್, ‘ಇದೇ ಹಾಡಿಗೆ ಎಂದು ಪ್ರತ್ಯೇಕವಾಗಿ ಕೃತಜ್ಞತೆ ಸಲ್ಲಿಸಿಲ್ಲ. ಏಕೆಂದರೆ ಕಾರಂತರ ಸಂಯೋಜನೆಯ ಇಡೀ ಹಾಡನ್ನು ನಾವು ಬಳಸಿಕೊಂಡಿಲ್ಲ. ಎರಡು ಸಾಲು ಮಾತ್ರ ಉಳಿಸಿಕೊಂಡು ಉಳಿದಂತೆ ಹಿನ್ನೆಲೆ ಸಂಗೀತವನ್ನೆಲ್ಲ ಹೊಸದಾಗೇ ಸಂಯೋಜಿಸಲಾಗಿದೆ. ಹಾಗಿದ್ದಾಗ ಕಾರಂತರ ಸಂಗೀತ ಎಂದು ಕ್ರೆಡಿಟ್ ಕೊಟ್ಟರೆ ಅದು ಸರಿಯಲ್ಲ’

ADVERTISEMENT

‘ಹಾಡಿನ ಹಕ್ಕುಸ್ವಾಮ್ಯ ಇರುವುದು ಕೆ.ವಿ. ಅಕ್ಷರ ಅವರ ಹತ್ತಿರ. ಅವರೊಂದಿಗೆ ಚರ್ಚಿಸಿಯೇ ಹಾಡನ್ನು ಬಳಸಿಕೊಂಡಿದ್ದೇವೆ. ಧ್ವನಿಮುದ್ರಣದ ಸೀಡಿಯಲ್ಲಿ ಕಾರಂತರ ಹೆಸರನ್ನು ಉಲ್ಲೇಖಿಸುವುದೇನು ಬೇಕಿಲ್ಲ ಎಂದು ಅಕ್ಷರ ಅವರೇ ಹೇಳಿದರು. ನಾನೂ ನೀನಾಸಮ್ನವನು ಎಂಬ ಅಭಿಮಾನದಿಂದ ಕಾರಂತರ ಮೇಲಿನ ಗೌರವ ಭಾವದಿಂದಲೇ ಅವರ ಹಾಡಿನ ಸ್ಫೂರ್ತಿ ಪಡೆದಿದ್ದೇವೆ. ಈ ಹಾಡನ್ನು ಜನಪ್ರಿಯಗೊಳಿಸಬೇಕು ಎಂಬ ಆಸೆಯೂ ನನಗಿತ್ತು’ ಎಂದು ಹೇಳಿದ್ದಾರೆ.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.