ADVERTISEMENT

ನೂತನ ‘ಅಸ್ತಿತ್ವ’

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST
ನೂತನ ‘ಅಸ್ತಿತ್ವ’
ನೂತನ ‘ಅಸ್ತಿತ್ವ’   

ಈ ಹಿಂದೆ ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ಯನ್ನು ಚಂದನವನದ ಚಿತ್ರರಸಿಕರಿಗೆ ಒಪ್ಪಿಸಿದ್ದ ನಿರ್ದೇಶಕ ನೂತನ್ ಉಮೇಶ್ ಈಗ ‘ಅಸ್ತಿತ್ವ’ದ ಹುಡುಕಾಟದಲ್ಲಿದ್ದಾರೆ!

ಹೌದು! ತಮ್ಮ ಎರಡನೇ ಚಿತ್ರ ‘ಅಸ್ತಿತ್ವ’ಕ್ಕಾಗಿ ಸಾಕಷ್ಟು ಕಷ್ಟಪಟ್ಟಿರುವ ನೂತನ್, ಅದರ ಫಲಿತಾಂಶವನ್ನು ತೋರಿಸಲು ಸುದ್ದಿಮಿತ್ರರನ್ನು ಆಹ್ವಾನಿಸಿದ್ದರು.
ಅದು ಮೊದಲ ಟ್ರೇಲರ್ ಬಿಡುಗಡೆ ಸಮಾರಂಭ. ‘ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಹೀಗಿದೆ ಅದರ ಮೊದಲ ತುಣುಕು’ ಎಂದರು ನೂತನ್.
ಅಸ್ತಿತ್ವ ಅಂದರೆ ಉಳಿವಿಗಾಗಿ ನಡೆಸುವ ಹೋರಾಟ. ಬುದ್ಧಿಜೀವಿ ಎನಿಸಿಕೊಂಡ ಮನುಷ್ಯ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾನೆ. ಅಂಥ ಹೋರಾಟದ ಎಳೆ ಚಿತ್ರದಲ್ಲಿದೆ ಎಂಬ ವಿವರವನ್ನು ನಿರ್ದೇಶಕರು ನೀಡಿದರು.

ಅಂದ ಹಾಗೆ ತಮಿಳಿನ ‘ನಾನ್’ ಎಂಬ ಸಿನಿಮಾದಲ್ಲಿನ ಒಂದು ಅಂಶ ನೂತನ್‌ಗೆ ಹೆಚ್ಚು ಇಷ್ಟವಾಯಿತಂತೆ. ಅದೇ ‘ಅಸ್ತಿತ್ವ’ ಸೆಟ್ಟೇರಲು ಪ್ರೇರಣೆ.
‘ಇದೊಂದು ಮಾಮೂಲಿ ಪ್ರೇಮಕಥೆಯಲ್ಲ. ಇದರಲ್ಲಿ ಥ್ರಿಲ್ಲರ್ ಅಂಶಗಳಿವೆ. ಜನರಲ್ಲಿ ಕುತೂಹಲ ಸೃಷ್ಟಿಸಿ, ಸಿನಿಮಾ ಗೆಲ್ಲುವಂತೆ ಮಾಡಬೇಕು. ನಾನೂ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ’ ಎಂದರು ನೂತನ್.

ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿರುವ ಯುವರಾಜ್‌ಗೆ ಮೂರು ಶೇಡ್‌ಗಳ ಪಾತ್ರ ಇದೆಯಂತೆ. ಎರಡು ಶೇಡ್‌ಗಳ ವಿವರ ನೀಡಿದ ಅವರು, ಮೂರನೆಯದ್ದನ್ನು ಮಾತ್ರ ಗುಟ್ಟಾಗಿಟ್ಟರು. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು, ಉಷಾ ಭಂಡಾರಿ ಸ್ಕೂಲ್‌ನಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.

ಸಿನಿಮಾ ಜಗತ್ತಿಗೆ ಬರುವ ಮುನ್ನ ‘ಜನರಲ್ ಮೋಟಾರ್ಸ್‌’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ‘ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಹೋಗುವ ಚಿತ್ರವಿದು. ನನ್ನ ಪಾತ್ರ ವಿಶಿಷ್ಟವಾಗಿದೆ’ ಎಂದು ಹೇಳಿಕೊಂಡರು.

ನಾಯಕಿ ಪ್ರಜ್ಜು ಪೂವಯ್ಯ ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದಾರಂತೆ. ‘ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಹುಡುಗಿ ಪಾತ್ರ ನನ್ನದು. ಇಷ್ಟು ಮಾತ್ರ ಹೇಳಬಲ್ಲೆ’ ಎಂದರು.

‘ಆಟೋ ರಾಜಾ’ನಿಗೆ ಬಂಡವಾಳ ಹಾಕಿರುವ ವಿಶ್ವ ಕಾರಿಯಪ್ಪ ಈ ಚಿತ್ರಕ್ಕೂ ಹಣ ಹಾಕಿದ್ದಾರೆ. ಹೊಸಬಗೆಯ ಚಿತ್ರಗಳು ಈಗ ಗೆಲ್ಲುತ್ತಿವೆ. ಅಸ್ತಿತ್ವ ಕೂಡ ಅಂಥದೇ ಸಿನಿಮಾ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಕಲನಕಾರ ಕ್ರೇಜಿ ಮೈಂಡ್ಸ್ ಸಿನಿಮಾದ ವೇಗವೇ ಇದರ ವಿಶೇಷ ಎಂದು ಬಣ್ಣಿಸಿದರು. ಸುದ್ದಿಗೋಷ್ಠಿಗೂ ಮುನ್ನ ಟ್ರೇಲರ್ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.