ADVERTISEMENT

ನೋಟಿನಲ್ಲಿ ತಲೆಮಾರುಗಳ ಕಥನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 19:30 IST
Last Updated 2 ಫೆಬ್ರುವರಿ 2017, 19:30 IST
ನೋಟಿನಲ್ಲಿ ತಲೆಮಾರುಗಳ ಕಥನ
ನೋಟಿನಲ್ಲಿ ತಲೆಮಾರುಗಳ ಕಥನ   

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ತಲೆಮಾರು ಮತ್ತು ಇಡೀ ವ್ಯವಸ್ಥೆಯಲ್ಲಾಗಿರುವ ಬದಲಾವಣೆಯನ್ನು ವಿಭಿನ್ನವಾಗಿ ನೋಡುವ ಪ್ರಯತ್ನವೇ ‘5ನೇ ಜನರೇಷನ್’ ಎಂದು ನಿರ್ದೇಶಕ ಗುರುವೇಂದ್ರ ಶೆಟ್ಟಿ ತಮ್ಮ ಚಿತ್ರದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಲು ಯತ್ನಿದರು. ಕೆಲವು ಆ್ಯಕ್ಷನ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಗುರುವೇಂದ್ರರ ಮೊದಲ ಆ್ಯಕ್ಷನ್–ಕಟ್ ಚಿತ್ರವಿದು.

ನಿರ್ದೇಶಕರೇ ಹೇಳಿಕೊಂಡಂತೆ, ನೂರು ರೂಪಾಯಿ ನೋಟನ್ನು ಮನಸಲ್ಲಿಟ್ಟುಕೊಂಡು ಆರೇಳು ವರ್ಷದ ಹಿಂದೆ ಕಥೆ ಬರೆದಿಟ್ಟುಕೊಂಡಿದ್ದರು. ಇಂದಿನ ಜಾಯಮಾನಕ್ಕೆ ಹೇಳಲೇಬೇಕೆನಿಸಿದ್ದ ಕಥೆಯನ್ನು ಕಲಾತ್ಮಕ ಸಿನಿಮಾ ರೂಪಕ್ಕಿಳಿಸಲು ಓಡಾಡುತ್ತಿದ್ದಾಗ, ಚಿತ್ರ ನಿರ್ಮಾಣದ ಹುಮ್ಮಸ್ಸಿನಲ್ಲಿದ್ದ ಜಗದೀಶ್ ಸಿಕ್ಕರು. ಕಥೆಯನ್ನು ಮೆಚ್ಚಿಕೊಂಡು  ಕಮರ್ಷಿಯಲ್ ಚಿತ್ರ ಮಾಡಲು ಮುಂದೆ ಬಂದರು.

‘ಗಾಂಧೀಜಿ ಭಾವಚಿತ್ರವಿರುವ ಐದು ನೂರು ರೂಪಾಯಿ ನೋಟು ಈ ಚಿತ್ರದ ಕೇಂದ್ರಬಿಂದು. ನೋಟಿನಲ್ಲಿರುವ ಗಾಂಧೀಜಿಯ ಮುಖ ವಿರುದ್ಧ ದಿಕ್ಕಿಗೆ ತಿರುಗಿರುತ್ತದೆ. ಅದಕ್ಕೆ ಕಾರಣ ಏನು ಎಂಬುದೇ ಚಿತ್ರದ ತಿರುಳು. ನೋಟು ಅಮಾನ್ಯದ ಸುಳಿವುಗಳು ತಂಡಕ್ಕೆ ಮೊದಲೇ ಇತ್ತೆಂಬಂತೆ ಸಿನಿಮಾ ಮೂಡಿ ಬಂದಿದೆ’ ಎಂದು ನಿರ್ದೇಶಕರು ಗಮನ ಸೆಳೆದರು.

‘ಸಿಂಪಲ್ಲಾಂಗ್ ಮತ್ತೊಂದು ಲವ್ ಸ್ಟೋರಿ’ಯ ನಂತರ ಪಾತ್ರಗಳ ಆಯ್ಕೆಯಲ್ಲಿ ಗೊಂದಲದಲ್ಲಿದ್ದೆ. ಆಗ ಸಿಕ್ಕ ಅತ್ಯುತ್ತಮ ಕಥೆಯ ಚಿತ್ರವಿದು. ಹೆಚ್ಚು ಬಿಜಿಯಾಗಿರುವ ನಿರುದ್ಯೋಗಿಯ ಪಾತ್ರ ನನ್ನದಾಗಿದ್ದು,  ಮನರಂಜನೆ, ಸಂದೇಶ ಹಾಗೂ ವ್ಯಂಗ್ಯದ ಲೇಪವೂ ಇದಕ್ಕಿದೆ’ ಎಂದು ನಾಯಕ ನಟ ಪ್ರವೀಣ್  ಪಾತ್ರವನ್ನು ಪರಿಚಯಿಸಿಕೊಂಡರು.

‘ಬದಲಾಗಿರುವ ಪ್ರೇಕ್ಷಕರ ಮನಸ್ಥಿತಿಗೆ ತಕ್ಕಂತೆ ಚಿತ್ರವನ್ನು ಮಾಡಲಾಗಿದೆ. ನನ್ನ ಮಟ್ಟಿಗೆ ಇದೊಂದು ಪ್ರಯೋಗಾತ್ಮಕ ಸಿನಿಮಾ’ ಎಂದ ನಾಯಕಿ ನಟಿ ನಿಧಿ ಸುಬ್ಬಯ್ಯ, ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು. ನಿರ್ಮಾಪಕ ಜಗದೀಶ್ ಮಾತನಾಡಿ, ‘ಶೀರ್ಷಿಕೆಗೆ ತಕ್ಕಂತೆ 5ಜಿ ವೇಗದಲ್ಲೇ ಸಿನಿಮಾ ಮುಗಿದಿದೆ. ಫೆಬ್ರುವರಿ ಎರಡನೇ ವಾರದಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಮಾತು ಮುಗಿಸಿದರು.

ಪುನರಾವರ್ತನೆ ಇಲ್ಲದ ಪಾತ್ರಗಳು ಮತ್ತು ವಿಭಿನ್ನ ನಿರೂಪಣೆ ಚಿತ್ರದ ಹೈಲೈಟ್ಸ್‌. ಚಿತ್ರದ ಹಾಡುಗಳಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆಯಂತೆ. ಸಿನಿಮಾ ಸದ್ಯದಲ್ಲೇ ಸೆನ್ಸಾರ್ ಮಂಡಳಿ ಪರೀಕ್ಷೆ ಎದುರಿಸಲು ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.