ADVERTISEMENT

ಪ್ರೀತಿಯ ಕಲರವ ಮತ್ತು ಮಾಫಿಯಾ!

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಸಂದೀಪ್ ದಕ್ಷ , ಸುಬ್ರಮಣ್ಯ , ಲಕ್ಕಿ
ಸಂದೀಪ್ ದಕ್ಷ , ಸುಬ್ರಮಣ್ಯ , ಲಕ್ಕಿ   

ತೆರೆಗೆ ಬರಲು ಸಿದ್ಧವಾಗಿರುವ ‘ಈ ಕಲರವ’ ಎಂಬ ಚಿತ್ರದ ಪತ್ರಿಕಾಗೋಷ್ಠಿ ಅದು. ವೇದಿಕೆ ಮುಂದೆ ಇದ್ದವರತ್ತ ನಗುಬೀರಿ ಮಾತು ಆರಂಭಿಸಿದ ನಿರೂಪಕ, ‘ಈ ಚಿತ್ರದ ಸಂಭಾಷಣೆಗಳು, ಪಾತ್ರಗಳು, ಸನ್ನಿವೇಶಗಳು ಹಾಗೂ ಮೊದಲ ಸಲ ತೋರಿಸಿರುವ ರಹಸ್ಯ ಮಾಫಿಯಾ ಯಾವ ಚಿತ್ರಗಳ ಹೋಲಿಕೆಗೂ ನಿಲುಕುವುದಿಲ್ಲವಂತೆ. ಹಾಗಂತ, ಚಿತ್ರತಂಡ ಸವಾಲು ಹಾಕಿದೆ’ ಎಂದು ಚಿತ್ರತಂಡದ ನಾಲ್ವರನ್ನು ಪರಿಚಯಿಸಿ, ನಿರ್ದೇಶಕ ಸಂದೀಪ್ ದಕ್ಷ ಕೈಗೆ ಮೈಕ್ ಹಸ್ತಾಂತರಿಸಿದರು.

ಹೀಗೂ ಉಂಟಾ! ಎಂಬ ಉದ್ಗಾರಕ್ಕೆ ಕಾರಣವಾದ ನಿರೂಪಕನ ಮಾತುಗಳು, ಮಾಧ್ಯಮ ಮಂದಿಯ ಕುತೂಹಲವನ್ನು ಹೆಚ್ಚಿಸಿದವು.

‘ಕಲರವ ಅಂದರೆ, ಒಂದು ಬಗೆಯ ಸೌಂಡ್. ನಾಗರಿಕತೆಯ ನಂಟು ಅಷ್ಟಾಗಿಲ್ಲದ ಹಳ್ಳಿಯಲ್ಲಿ ನಡೆಯುವ ನಮ್ಮ ಚಿತ್ರದ ಪ್ರೀತಿಯ ಕಥೆ ವಿಭಿನ್ನ ಮತ್ತು ಕಲ್ಪನಾತೀತ’ ಎಂಬ ಸಂದೀಪ್ ದಕ್ಷ ಅವರ ಮಾತುಗಳ ಹಿನ್ನೆಲೆಯಲ್ಲಿ – ‘ನಿಮ್ಮ ಚಿತ್ರದ ಕಥೆ ಏನು? ಯಾವ ಮಾಫಿಯಾ ಬಗ್ಗೆ ಗಮನ ಸೆಳೆದಿದ್ದೀರಿ? ಇದುವರೆಗೆ ಕೇಳದ ಸಂಭಾಷಣೆ ಎನ್ನುತ್ತೀರಿ, ಹಾಗಿದ್ದರೆ ಒಂದು ಡೈಲಾಗ್ ಹೇಳಿ ನೋಡೋಣ...’ ಎಂಬ ಪ್ರಶ್ನೆಗಳು ತೂರಿ ಬಂದವು.

ADVERTISEMENT

‘ಚಿತ್ರದ ಬಗ್ಗೆ ಸ್ವಲ್ಪ ಮಾತನಾಡಿದರೂ, ಇಡೀ ಕಥೆ ಗೊತ್ತಾಗುತ್ತದೆ. ಆಗ ಯಾರು ನಮ್ಮ ಸಿನಿಮಾ ನೋಡುತ್ತಾರೆ?’ ಎಂಬ ಮರುಪ್ರಶ್ನೆ ನಿರ್ದೇಶಕರಿಂದ. ಸಿನಿಮಾಕ್ಕೆ ‘ಯು/ಎ’ ಪ್ರಮಾಣಪತ್ರ ಯಾಕೆ ಸಿಕ್ಕಿದೆ ಎನ್ನುವ ಪ್ರಶ್ನೆಗೆ – ‘ರಕ್ತಪಾತ, ಕ್ರೈಂ ಹಾಗೂ ಮಾಫಿಯಾ’ ಅದಕ್ಕೆ ಕಾರಣ ಎಂಬ ಸಿದ್ಧ ಉತ್ತರ.

ನಿರ್ಮಾಪಕ ಎಂ. ಮಹಾದೇವಗೌಡ, ‘ತಾವು ಗಾರೆ ಕೆಲಸ ಮಾಡಿಕೊಂಡು, ಕಷ್ಟಪಟ್ಟು ಗುತ್ತಿಗೆದಾರನಾಗಿ, ಇದೀಗ ಸಿನಿಮಾ ನಿರ್ಮಿಸುವ ಹಂತಕ್ಕೆ ಬೆಳೆದಿದ್ದೇನೆ’ ಎಂದು ಮಾತು ಮುಗಿಸಿದರು. ಚಿತ್ರದ ನಾಯಕನ ತಮ್ಮನ ಪಾತ್ರಕ್ಕೆ ಮೈಸೂರಿನ ಲಕ್ಕಿ ಬಣ್ಣ ಹಚ್ಚಿದರೆ, ಸುಬ್ರಮಣ್ಯ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ನವೀನ್ ಕೃಷ್ಣ ನಾಯಕನಾಗಿರುವ ಈ ಚಿತ್ರಕ್ಕೆ ರೋಹಿಣಿ ರಶ್ಮಿ ನಾಯಕಿ.

‘ನನ್ನೂರು ಮೈಸೂರು. ಮೊದಲ ಚಿತ್ರವಿದು. ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಲಕ್ಕಿ ಮಾತಿಗೆ ವಿರಾಮ ಹಾಕಿದರೆ, ‘ಸ್ಮಶಾನದ ಮೂಳೆಗಳನ್ನು ಕದ್ದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರುವ ಮಾಫಿಯಾ ಕುರಿತು ಚಿತ್ರದಲ್ಲಿ ಗಮನ ಸೆಳೆಯಲಾಗಿದೆ’ ಎಂದು ಸುಬ್ರಮಣ್ಯ ಚಿತ್ರದ ಕಥೆಯ ಎಳೆಯೊಂದನ್ನು ತಣ್ಣಗೆ ಬಿಚ್ಚಿಟ್ಟರು.

ಜೂನ್‌ ತಿಂಗಳಲ್ಲಿ ರಾಜ್ಯದಾದ್ಯಂತ 50 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.