ADVERTISEMENT

ಪ್ರೀತಿಯ ಹೊಸ ಅಂಕ ‘ಪ್ರಿಯಾಂಕ’

ಪ್ರಜಾವಾಣಿ ವಿಶೇಷ
Published 4 ಫೆಬ್ರುವರಿ 2016, 19:30 IST
Last Updated 4 ಫೆಬ್ರುವರಿ 2016, 19:30 IST
ಪ್ರೀತಿಯ ಹೊಸ ಅಂಕ ‘ಪ್ರಿಯಾಂಕ’
ಪ್ರೀತಿಯ ಹೊಸ ಅಂಕ ‘ಪ್ರಿಯಾಂಕ’   

ದಿನೇಶ್‌ ಬಾಬು ಎಂದಕೂಡಲೇ ನವಿರು ಭಾವಗಳ ನವಿಲುಗರಿ ಸೋಕಿದ ಭಾವವನ್ನು ಚಿತ್ರರಸಿಕರು ಅನುಭವಿಸುತ್ತಾರೆ. ‘ಪ್ರಿಯಾಂಕ’ ಚಿತ್ರ ತೆರೆಕಾಣುತ್ತಿರುವ ಸಂದರ್ಭದಲ್ಲಿ ಬಾಬು ಜತೆ ‘ಚಂದನವನ’ದ ವಿಶೇಷ ಸಂದರ್ಶನ.

* ಮೂರ್ನಾಲ್ಕು ವರ್ಷಗಳ ವಿರಾಮದ ಬಳಿಕ ‘ಪ್ರಿಯಾಂಕ’ದೊಂದಿಗೆ ಕನ್ನಡಕ್ಕೆ ಬಂದಿದ್ದೀರಿ. ಎಲ್ಲಿದ್ದಿರಿ ಇಷ್ಟು ದಿನ?
ಇಷ್ಟು ಕಾಲವೂ ಕೇರಳದಲ್ಲಿ ಇದ್ದೆ. ಅಲ್ಲಿ ನನ್ನ ತಂದೆ ಇದ್ದಾರೆ. ಅವರಿಗೆ ಅನಾರೋಗ್ಯ. ಹೀಗಾಗಿ ಅವರನ್ನು ನೋಡಿಕೊಳ್ಳಲು ನಾನು ಅಲ್ಲಿರಲೇಬೇಕಾಯಿತು. ಅದೂ ಸತತ ಒಂದೂವರೆ ವರ್ಷ ಅವರ ಜತೆಗೇ ಇದ್ದೆ. ‘ಪ್ರಿಯಾಂಕ’ದೊಂದಿಗೆ ಈಗ ಕನ್ನಡದ ಪ್ರೇಕ್ಷಕರ ಎದುರು ಬಂದಿದ್ದೇನೆ.

* ‘ಪ್ರಿಯಾಂಕ’ ವೈಶಿಷ್ಟ್ಯವೇನು? ಕಥೆ ನೈಜ ಘಟನೆ ಆಧರಿಸಿದ್ದು ಅಂತ ಹೇಳಿದ್ದಿರಿ?
ಹೌದು. ಇದು ಬೆಂಗಳೂರಿನಲ್ಲೇ ನಡೆದ ಘಟನೆಯನ್ನು ಆಧರಿಸಿದ್ದು. ಅದರಲ್ಲಿನ ಕೆಲವು ಎಳೆಗಳನ್ನು ಹಿಡಿದುಕೊಂಡು, ಕಥೆ ಮಾಡಿದ್ದೇನೆ. ‘ಪ್ರಿಯಾಂಕ’ ಅಂದರೆ ಮಮತೆಯ ಮಡಿಲು ಎಂದರ್ಥ. ಪ್ರೀತಿ ಯಾವಾಗಲು ಪವಿತ್ರ, ಸುಂದರ, ರೊಮ್ಯಾಂಟಿಕ್ ಆಗಿ ಇರುತ್ತದೆ ಅಂತ ಎಲ್ಲರೂ ನಂಬಿರುತ್ತಾರೆ. ಅದರ ಸುತ್ತಲೂ ಏನೇನೋ ರಮ್ಯ ಕಥೆಗಳು ಸುತ್ತಿಕೊಂಡಿರುತ್ತವೆ ಹಾಗೂ ಅವೆಲ್ಲವೂ ಸುಂದರವಾಗಿಯೇ ಇರುತ್ತವೆ ಎಂಬ ನಂಬಿಕೆ ಕೂಡ ಇದೆ! ಆದರೆ ಪ್ರೀತಿ ಕೆಲವು ಸಲ ಅಪಾಯಕಾರಿ ಆಗಿರಬಹುದು! ಪ್ರತಿಯೊಂದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಿದರೆ ಏನಾಗಬಹುದು ಎಂಬುದು ‘ಪ್ರಿಯಾಂಕ’ದಲ್ಲಿದೆ.

* ನೀವು ಸಿನಿಮಾಕ್ಕೆ ಆಯ್ದುಕೊಳ್ಳುವುದು ಬಹುತೇಕ ಸಲ ಚಿಕ್ಕ ಕಥೆಯಾಗಿರುತ್ತವೆ. ಹಾಗಿದ್ದ ಮೇಲೆ ನಿಮಗೆ ನಿರೂಪಣೆ ಮೇಲೆಯೇ ಹೆಚ್ಚು ನಂಬಿಕೆಯೇ?
ನಾನು ಆಯ್ದುಕೊಳ್ಳುವುದು ಸಣ್ಣ ಕಥೆ ಎಂಬುದೇನೋ ನಿಜ. ಆದರೆ ಯಾವುದೇ ಕಥೆಯನ್ನು ಸರಿಯಾಗಿ ನಿರೂಪಿಸದೇ ಹೋದರೆ ಅದೊಂದು ವ್ಯರ್ಥ ಪ್ರಯತ್ನವಾಗಿ ಬಿಡುತ್ತದೆ. ಕಥೆ ಸರಿಯಾಗಿರದೇ ಹೋದಾಗ ನಿರೂಪಣೆ ಎಷ್ಟು ಚೆಂದವಾಗಿದ್ದರೂ ಸೋತುಬಿಡುತ್ತದೆ. ಚಿಕ್ಕ ಕಥೆ ಇದ್ದರೆ, ಅದನ್ನು ವಿಸ್ತೃತವಾಗಿ ನಿರೂಪಿಸುವ ದೊಡ್ಡ ಸವಾಲು ನಮ್ಮೆದುರು ಇರುತ್ತದೆ. ಉದಾಹರಣೆಗೆ, ‘ಪ್ರಿಯಾಂಕ’ ಪತಿ– ಪತ್ನಿ ಹಾಗೂ ಒಬ್ಬ ಯುವಕನ ಕಥೆ. ಆದರೆ ಅಲ್ಲಿನ ಸಣ್ಣ ಸಣ್ಣ ಸನ್ನಿವೇಶಗಳನ್ನು ತುಂಬ ಚೆನ್ನಾಗಿ ಚಿತ್ರಿಸಬಹುದು. ಕಥೆಯೇ ದೊಡ್ಡದಾದರೆ, ಸಾಕಷ್ಟು ಸಲ ನಾವು ರಾಜಿ ಮಾಡಿಕೊಳ್ಳಬೇಕಾಗುತ್ತದೆ.

* ಸಿನಿಮಾಕ್ಕೆ ಹಾಡುಗಳು ಬೇಕೇ ಬೇಕು ಎಂಬ ಮನೋಭಾವಕ್ಕೆ ನೀವೂ ಹೊರತಾಗಿಲ್ಲ?
ನಿಜ ಹೇಳಬೇಕೆಂದರೆ, ಸಿನಿಮಾಕ್ಕೆ ಹಾಡುಗಳು ಬೇಕಾಗಿಲ್ಲ; ಅವೆಲ್ಲ ಅವಾಸ್ತವಿಕ! ನಾವು ಬದುಕಿನಲ್ಲಿ ಖುಷಿ ಅಥವಾ ದುಃಖವಾದಾಗ ಹಾಡು ಹಾಡುತ್ತೇವೆಯೇ? ಆದರೆ ಮನರಂಜನೆಯ ದೃಷ್ಟಿಯಿಂದ ನೋಡಿದಾಗ ಅವು ಬೇಕೇ ಬೇಕು. ಹಾಡುಗಳು ಭಾರತೀಯ ಸಿನಿಮಾದ ಒಂದು ಭಾಗವಾಗಿ ಬೆಳೆದುಕೊಂಡು ಬಂದಿವೆ. ‘ಪ್ರಿಯಾಂಕ’ದಲ್ಲಿ ಕೃಪಾಕರ ಸಂಯೋಜಿಸಿದ ಮೂರು ಹಾಡುಗಳು ಕಥೆಗೆ ಪೂರಕವಾಗಿ ಸಾಗುತ್ತವೆ. ಹಾಡು ಬಂದಾಗ ಪ್ರೇಕ್ಷಕ ವಿರಾಮಕ್ಕೆಂದು ಹೊರಗೆ ಹೋಗಲಾರ!

* ‘ಪ್ರಿಯಾಂಕ’ ಚಿತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡುವಾಗ ಜನಪ್ರಿಯ ನಟ–ನಟಿಯರನ್ನೇ ಆರಿಸಿದ್ದೀರಲ್ಲ?
ಅದು ಹಾಗಲ್ಲ... ಅದರಲ್ಲಿ ಸೌಂದರ್ಯ ತುಂಬಿಕೊಂಡ ಮಹಿಳೆ ಪಾತ್ರವಿದೆ. ಆದರೆ ಆಕೆ ತೀರಾ ಚಿಕ್ಕ ವಯಸ್ಸಿನವಳು ಆಗಿರಬಾರದು. ಅದಕ್ಕೆ ಪ್ರಿಯಾಂಕ ಉಪೇಂದ್ರ ಅವರೇ ಸರಿ ಅನಿಸಿತು. ಕೇಳಿದ ಕೂಡಲೇ ಒಪ್ಪಿಕೊಂಡರು. ಇನ್ನು ಪ್ರಕಾಶ್ ರೈ ಬಗ್ಗೆ... ಈ ಮೊದಲು ಅವರೊಂದಿಗೆ ಸಿನಿಮಾ ಮಾಡುವ ಯೋಚನೆಯಿದ್ದರೂ ಆಗಿರಲಿಲ್ಲ. ಈ ಸಲ ಪೊಲೀಸ್ ತನಿಖಾಧಿಕಾರಿಯ ಪಾತ್ರಕ್ಕೆ ಅವರನ್ನು ಕೇಳಿಕೊಂಡೆ. ಅವರೂ ಖುಷಿಯಿಂದ ಒಪ್ಪಿದರು. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತಾಡುತ್ತ ತನಿಖೆ ನಡೆಸುವ ಅಧಿಕಾರಿ ಪಾತ್ರದಲ್ಲಿ ರೈ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಇನ್ನು ತೇಜಸ್, ಶಿವಧ್ವಜ್ ಹಾಗೂ ವೀಣಾ ಸುಂದರ್ ನಟನೆಯ ಬಗ್ಗೆ ಹೆಚ್ಚು ಹೇಳಬೇಕಾದ್ದೇನೂ ಇಲ್ಲ. ನೀವೇ ತೆರೆಯ ಮೇಲೆ ನೋಡಿ...

* ನಿಮ್ಮ ಸಿನಿಮಾದಲ್ಲಿ ಚಿತ್ರೀಕರಣದ ಜವಾಬ್ದಾರಿಯನ್ನು ಬೇರೆಯವರಿಗೆ ಕೊಡುವುದಿಲ್ಲ, ಯಾಕೆ? ಬೇರೆ ಛಾಯಾಗ್ರಾಹಕರ ಮೇಲೆ ನಂಬಿಕೆಯಿಲ್ಲವೇ?
ನಾನು ಮೂಲತಃ ಕ್ಯಾಮೆರಾಮನ್. ನನಗೆ ಬಲು ಇಷ್ಟವಾದ ಕೆಲಸ ಅದು. ನನ್ನ ಬಳಿ ದುಬಾರಿಯಾದ ಕ್ಯಾಮೆರಾ ಇವೆ. ಅವುಗಳನ್ನು ಬಳಸಿ ನಾನೇ ಚಿತ್ರೀಕರಣ ಮಾಡಬೇಕು ಎಂಬುದು ನನ್ನ ಆಸೆ! ಇನ್ನೊಂದು ವಿಷಯವಿದೆ. ಸನ್ನಿವೇಶವೊಂದು ಹೇಗಿರಬೇಕು ಎಂದು ನಾನು ಊಹಿಸಿದಾಗ, ಅದಕ್ಕೆ ತಕ್ಕಂತೆ ಕ್ಯಾಮೆರಾ ಕೆಲಸ ಮಾಡಬೇಕು. ಒಂದು ವೇಳೆ ಇನ್ನೊಬ್ಬ ಛಾಯಾಗ್ರಾಹಕ ಆ ಕೆಲಸ ಮಾಡುತ್ತಿದ್ದರೆ ನಮ್ಮಿಬ್ಬರ ಮಧ್ಯೆ ಸಣ್ಣಪುಟ್ಟ ಸಂಘರ್ಷ ಉದ್ಭವಿಸಬಹುದು. ನಾನು ಕಲ್ಪಿಸಿದ್ದನ್ನು ಸೆರೆಹಿಡಿಯಲು ನಾನೇ ಕ್ಯಾಮೆರಾ ನಡೆಸಿದರೆ ಒಳ್ಳೆಯದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT