ADVERTISEMENT

ಪ್ರೀತಿಯ ‘ನಗಾರಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST
ಪ್ರೀತಿಯ ‘ನಗಾರಿ’
ಪ್ರೀತಿಯ ‘ನಗಾರಿ’   

‘ನಗಾರಿ ಬಾರಿಸಿದಾಗ ಯಾವ ರೇಂಜ್‌ಗೆ ಶಬ್ದ ಬರುತ್ತೋ ಅದೇ ರೇಂಜ್‌ಗೆ ನಮ್ಮ ಚಿತ್ರದಲ್ಲಿನ ಪ್ರೇಮ ಕಥೆ, ಮತ್ತು ಚಿತ್ರದ ವಿಷಯ ಸೌಂಡ್ ಮಾಡುತ್ತೆ’ ಎನ್ನುತ್ತಲೇ ಮಾತು ಆರಂಭಿಸಿದರು ‘ನಗಾರಿ’ ಚಿತ್ರದ ನಿರ್ದೇಶಕ ನಂದೀಶ. ಅದು ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. ಅಂದಹಾಗೆ, ಸಂಪೂರ್ಣ ಹೊಸಬರೇ ನಿರ್ಮಿಸಿದ ಚಿತ್ರ ‘ನಗಾರಿ’.

ಓಂಪ್ರಕಾಶ್‌ ರಾವ್, ಎ.ಆರ್. ಬಾಬು ಅವರಿಗೆ ಸಹಾಯಕನಾಗಿ ದುಡಿದ ನಂದೀಶ ‘ನಗಾರಿ’ ಮೂಲಕ ಮೊದಲ ಬಾರಿ ಸ್ವತಂತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಿದ್ದಾಗಿ ಹೇಳಿಕೊಳ್ಳುತ್ತಾರವರು. ನಿರ್ಮಾಪಕರಿಗಾಗಿ ಹುಡುಕಾಡಿದಾಗ ಯಾರೂ ಸಿಗದಿದ್ದ ಕಾರಣಕ್ಕೆ ಆರು ಜನ ಸ್ನೇಹಿತರೇ ಸೇರಿ ಹಣ ಹೊಂದಿಸಿದ್ದಾರೆ.

ಹಾಡುಗಳ ಹಕ್ಕು ಖರೀದಿಸಿರುವ ಲಹರಿ ಸಂಸ್ಥೆಯ ವೇಲು ಅವರು ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದರು. ಚಿತ್ರತಂಡದ ಉತ್ಸಾಹ ಹಾಗೂ ಹಾಡುಗಳ ಬಗ್ಗೆ ಅವರು ಒಳ್ಳೆಯ ಅಂಕವನ್ನೇ ನೀಡಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದೆರಡು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಹಂಸಲೇಖ ಅವರ ದೇಸಿ ಕಾಲೇಜಿನ ವಿದ್ಯಾರ್ಥಿ ನವನೀತ್ ಶಾಮ್ ಅವರು ಸಂಗೀತ ನೀಡಿದ್ದಾರೆ. ಒಂದೇ ವಾರದಲ್ಲಿ ಆರೂ ಹಾಡುಗಳನ್ನು ಸಂಯೋಜಿಸಿದ ಹೆಮ್ಮೆ ಅವರದು. ನಗಾರಿ ವಾದ್ಯವನ್ನು ಹಾಡುಗಳಲ್ಲಿ ವಿಶೇಷವಾಗಿ ಬಳಸಿಕೊಳ್ಳಲಾಗಿದೆಯಂತೆ. ಅಲ್ಲದೇ ಎಲ್ಲ ಹಾಡುಗಳಿಗೆ ಹೊಸಬರು ದನಿಯಾಗಿರುವುದು ವಿಶೇಷ.

ನಿರ್ಮಾಪಕರಾದ ವಿಕಾಸ್ ನಾಯಕನ ಪಾತ್ರವನ್ನೂ ನಿರ್ವಹಿಸಿದ್ದಾರೆ. ‘ಅಕ್ಕ’ ಧಾರಾವಾಹಿಯ ಅನುಪಮ ಅವರು ವಿಕಾಸ್‌ಗೆ ಜೊತೆಯಾಗಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಮೈಕೊ ನಾಗರಾಜ್, ವೈಜನಾಥ್ ಬಿರಾದಾರ್ ಮುಂತಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಂಡ್ಯ, ಮಂಗಳೂರು, ಉಡುಪಿ, ಮಲ್ಪೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.