ADVERTISEMENT

ಪ್ರೇಮಾ ಮತ್ತೆ ಬಂದಿದ್ದಾರೆ

ವಿಜಯ್ ಜೋಷಿ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
ಪ್ರೇಮಾ
ಪ್ರೇಮಾ   

‘ಉಪೇಂದ್ರ ಮತ್ತೆ ಬಾ’ ಸಿನಿಮಾದ ಮೂಲಕ ಮತ್ತೆ ತೆರೆಯ ಮೇಲೆ ಬರುತ್ತಿರುವವರು ನಟಿ ಪ್ರೇಮಾ. ‘ನಮ್ಮೂರ ಮಂದಾರ ಹೂವೆ’, ‘ಚಂದ್ರಮುಖಿ ಪ್ರಾಣಸಖಿ’ಯಂತಹ ಸದಭಿರುಚಿಯ, ಕುಟುಂಬದ ಎಲ್ಲರೂ ಕುಳಿತು ನೋಡುವಂತಹ ಚಿತ್ರಗಳಲ್ಲಿ ಅಭಿನಯಿಸಿದ್ದ ಪ್ರೇಮಾ ಹಲವು ವರ್ಷಗಳಿಂದ ಕನ್ನಡ ಸಿನಿತೆರೆಯಿಂದ ದೂರವೇ ಉಳಿದಿದ್ದರು.

ಪ್ರೇಮಾ ಅವರ ಹೊಸ ಸಿನಿಮಾ ‘ಉಪೇಂದ್ರ ಮತ್ತೆ ಬಾ’ ಶುಕ್ರವಾರ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ‘ಚಂದನವನ’ ಪ್ರೇಮಾ ಅವರ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ವರ್ಷಗಳ ಬಿಡುವಿನ ನಂತರ ಪ್ರಮುಖ ಪಾತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದೀರಿ. ಈ ಕಥೆ ಒಪ್ಪಿಕೊಳ್ಳಲು ಕಾರಣ ಏನು?
ಈ ಸಿನಿಮಾ ಕೌಟುಂಬಿಕ ಕಥೆಯನ್ನು ಹೊಂದಿದೆ. ಅದು ಒಂದು ಕಾರಣ. ಇಂತಹ ಕಥೆಗಳು ಈಗ ಬರುತ್ತಿಲ್ಲ. ಇಂಥದ್ದೊಂದು ಕಥೆಗಾಗಿ ನಾನು ಕಾಯುತ್ತಿದ್ದೆ. ಏಳು ವರ್ಷಗಳ ಹಿಂದೆ ‘ಶಿಶಿರ’ ಸಿನಿಮಾ ಮಾಡಿದ್ದೆ. ಅದಾದ ನಂತರ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಆ ಸಿನಿಮಾ ಜನರಿಗೆ ಇಷ್ಟವಾಗಲಿಲ್ಲ ಅಂತ ನನಗೆ ಅನ್ನಿಸಿತು. ನಾನು ಮೊದಲಿನಿಂದಲೂ ಕೌಟುಂಬಿಕ ಕಥಾಹಂದರ ಇರುವ ಸಿನಿಮಾಗಳಲ್ಲಿ ಅಭಿನಯಿಸಿಕೊಂಡು ಬಂದವಳು. ಈ ಸಿನಿಮಾದಲ್ಲಿ ನನಗೆ ಎರಡು ಬಗೆಯ ಪಾತ್ರಗಳಿವೆ – ಅದರಲ್ಲಿ ಒಂದು ಯಂಗ್‌ ಪಾತ್ರ. ಈ ಸಿನಿಮಾ ನಾನು ಒಪ್ಪಿಕೊಳ್ಳಲು ಮುಖ್ಯ ಕಾರಣ ಕಥೆ ಹಾಗೂ ನನಗೆ ದೊರೆತ ಪಾತ್ರ.

ADVERTISEMENT

* ಈ ಕಥೆ ನಿಮಗೆ ಸಿಕ್ಕಿದ್ದು ಹೇಗೆ?
ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ನಾನು ನಟಿಸಲಿ ಎಂಬ ಆಸೆ ಇತ್ತು. ಆದರೆ ನನಗೆ ಸಿನಿಮಾ ಬೇಡ ಅನಿಸುತ್ತಿದೆ ಎಂದು ಹೇಳಿದ್ದೆ. ಒಮ್ಮೆ ಕಥೆಯನ್ನು ನೋಡಿ ನಂತರ ತೀರ್ಮಾನಿಸಿ ಎಂದು ಅವರು ಹೇಳಿದ್ದರು. ನಾನು ಮತ್ತೆ ಮತ್ತೆ ಕಥೆಯನ್ನು ಪರಿಶೀಲಿಸಿದೆ. ನಾನು ಮತ್ತು ನನ್ನ ಅಮ್ಮ ಕಥೆಯನ್ನು ನೋಡಿದೆವು. ನಾನು ಈ ಪಾತ್ರವನ್ನು ನಿಭಾಯಿಸಬೇಕು, ಪಾತ್ರ ನನಗೆ ಚೆನ್ನಾಗಿ ಹೊಂದುತ್ತದೆ ಎಂದು ಅಮ್ಮನಿಗೆ ಅನಿಸಿತ್ತು. ಅವರೂ ಒತ್ತಾಯಿಸಿದರು. ಎಲ್ಲವೂ ಕೂಡಿಬಂದವು. ಈ ಸಿನಿಮಾದಲ್ಲಿ ಅಭಿನಯಿಸಿದ ನಂತರ, ಮತ್ತೆ ಮುಂದುವರೆಯಬೇಕೋ ಬೇಡವೋ ಎಂಬುದನ್ನು ನೀನೇ ತೀರ್ಮಾನಿಸು ಎಂದೂ ಅಮ್ಮ ಹೇಳಿದ್ದರು. ಉಪೇಂದ್ರ ಹಾಗೂ ನಿರ್ದೇಶಕ ಲೋಕಿ ಅವರೂ ಕರೆ ಮಾಡಿ ನನ್ನ ಜೊತೆ ಮಾತನಾಡಿದರು. ನಂತರ ಮತ್ತೆ ಮತ್ತೆ ಕಥೆಯನ್ನು ಪರಿಶೀಲಿಸಿದೆ. ಈ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ನನ್ನ ಮನಸ್ಸೂ ಹೇಳಿತು. ಒಪ್ಪಿಕೊಂಡೆ.

* ಏಳು ವರ್ಷ ತೆರೆಯಿಂದ ಮರೆಯಾಗಿದ್ದಕ್ಕೆ ಕಾರಣ?
ನಾನು ಎಲ್ಲೋ ಒಂದು ಕಡೆ ನನ್ನ ವೈಯಕ್ತಿಕ ಜೀವನವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದು ನನ್ನನ್ನು ಕಾಡುತ್ತಿತ್ತು. ಹೈದರಾಬಾದ್‌ಗೆ ಹೋಗುವುದು, ಚೆನ್ನೈಗೆ ಹೋಗುವುದು, ಕೊಚ್ಚಿಗೆ ಹೋಗುವುದು, ವಿದೇಶಕ್ಕೆ ಚಿತ್ರೀಕರಣಕ್ಕೆ ಹೋಗುವುದು... ಇಷ್ಟೇ ಆಗಿಬಿಟ್ಟಿತ್ತು ನನ್ನ ಜೀವನ. ನನಗೆ ನನ್ನದೇ ಆದ ಸಮಯ ಬೇಕಾಗಿತ್ತು. ಹಾಗಾಗಿ ಯೋಗಾಭ್ಯಾಸ, ಧ್ಯಾನ ಇಂಥದ್ದನ್ನೆಲ್ಲ ಮಾಡಲು ಆರಂಭಿಸಿದೆ. ನಾನು ಫ್ರೆಷ್‌ ಆಗಿ ಕ್ಯಾಮೆರಾ ಮುಂದೆ ಬರಬೇಕು ಅನಿಸಿತು. ಮತ್ತೆ ಅತ್ತೆಯ ಪಾತ್ರ, ಅಮ್ಮನ ಪಾತ್ರ ಮಾಡಲು ಮನಸ್ಸಿರಲಿಲ್ಲ. ನನಗೆ ಸೃಜನಶೀಲ ಪಾತ್ರವೊಂದು ಬೇಕು ಅನಿಸುತ್ತಿತ್ತು.

* ನಟಿಯೊಬ್ಬಳು ಒಂದಿಷ್ಟು ವಯಸ್ಸು ದಾಟಿದ ನಂತರ ಪ್ರಧಾನ ಪಾತ್ರ ಆಕೆಗೆ ಸಿಗುವುದಿಲ್ಲ. ಆಕೆ ಸಪೋರ್ಟಿಂಗ್ ಪಾತ್ರಗಳನ್ನೇ ಮಾಡಬೇಕಾದ ಸ್ಥಿತಿ ಇದೆ ಎಂದು ಹೇಳಿದ್ದೀರಿ. ನಿಮಗೆ ಹಾಗೆ ಅನಿಸಿದ್ದು ಏಕೆ?
ನಮ್ಮಲ್ಲಿ ಆ ವಯಸ್ಸಿನ ಹೆಣ್ಣುಮಗಳಿಗೆ ಮುಖ್ಯ ಪಾತ್ರವೊಂದು ಸೃಷ್ಟಿಯೇ ಆಗುತ್ತಿಲ್ಲವಲ್ಲ? ನಾನು ಸಿನಿಮಾದಿಂದ ಬಿಡುವು ತೆಗೆದುಕೊಳ್ಳುವಾಗ, ಮುಂದೆ ಯಾವ ತರಹದ ಪಾತ್ರ ಸಿಗುತ್ತದೆಯೋ ನೋಡೋಣ ಎಂಬ ಆಲೋಚನೆ ಮನಸ್ಸಿನಲ್ಲಿ ಇತ್ತು. ನನಗೊಂದು ಪಾತ್ರ ಸಿಗಬಹುದು ಎಂಬ ಭರವಸೆ ಇತ್ತು. ಈ ಸಿನಿಮಾದಲ್ಲಿ ನನಗೆ ದೊರೆತಿರುವುದು ಒಂದು ಹಂತದಮಟ್ಟಿಗೆ, ಆ ವಯಸ್ಸಿನ ಹೆಣ್ಣುಮಗಳಿಗೆ ಸಿಗಬಹುದಾದ ಒಳ್ಳೆಯ ಪಾತ್ರ.

ಕನ್ನಡದಲ್ಲಿ ಈಗ ಮಹಿಳೆಯರೂ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ. ನಿಮಗೆ ಅಂಥದ್ದೊಂದು ಜವಾಬ್ದಾರಿ ನಿಭಾಯಿಸುವ ಬಯಕೆ ಇದೆಯೇ?
ನಿಜ ಹೇಳುವೆ, ನನಗೆ ನಿರ್ದೇಶನದ ಬಗ್ಗೆ ನನ್ನದೇ ಆದ ಆಲೋಚನೆಗಳು ಇಲ್ಲ. ಅಭಿನಯ ಮಾಡುತ್ತಲೇ ನಿರ್ದೇಶನ ಕೂಡ ಮಾಡುವುದು ನನಗೆ ಬಹಳ ಕಷ್ಟದ ಕೆಲಸ. ನಾನೊಬ್ಬಳು ನಟಿ. ನಟಿಯಾಗಿಯೇ ಉಳಿಯಲು ಇಷ್ಟಪಡುವೆ.

* ಈ ಸಿನಿಮಾದ ನಂತರ ಯಾವ ಬಗೆಯ ಪಾತ್ರಗಳಲ್ಲಿ ನಟಿಸುವ ಆಸೆ ನಿಮ್ಮದು?
ನನಗೆ ಗೊತ್ತಿಲ್ಲ. ನಾನು ಪರಿಸ್ಥಿತಿ ಹೇಗೆ ಬರುತ್ತದೆಯೇ ಹಾಗೆಯೇ ಸ್ವೀಕರಿಸುವೆ. ಪಾತ್ರವೊಂದು ಇಷ್ಟವಾದರೆ ಅಭಿನಯಿಸುವೆ. ನಾನೊಂದು ರೀತಿಯಲ್ಲಿ ಮೂಡಿ. ಈ ಸಿನಿಮಾದ ನಂತರ ನನ್ನ ಬಳಿ ಸೃಜನಶೀಲ ನಿರ್ದೇಶಕರು ಬರುತ್ತಾರೋ, ಇಲ್ಲವೋ ಎಂಬುದನ್ನು ಆಧರಿಸಿವೆ ಮುಂದಿನ ತೀರ್ಮಾನಗಳು.

*
ನನ್ನಲ್ಲೊಂದು ಬೇಸರ ಇದೆ. ನನ್ನ ಅಭಿಮಾನಿಗಳಿಗೆ ನಾನು ದ್ರೋಹ ಮಾಡಿಬಿಟ್ಟೆನಾ ಎಂಬ ಬೇಸರ ಅದು. ಸಿನಿಮಾ ಕ್ಷೇತ್ರದಿಂದ ಬಿಡುವು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರಿಗೆ ಹೇಳಲೇ ಇಲ್ಲ ನಾನು.
-ಪ್ರೇಮಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.