ADVERTISEMENT

ಬಕೆಟ್–ಬಾಲ್ಕನಿ ನಡುವೆ ಅಂತಾರೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST
ಅರಸು ಅಂತಾರೆ
ಅರಸು ಅಂತಾರೆ   

‘ಸೆಕೆಂಡು ಬಕೆಟು ಬಾಲ್ಕನಿ’ ಇದು ಸಿನಿಮಾ ಶೀರ್ಷಿಕೆ. ವಿಚಿತ್ರವಾಗಿ ಧ್ವನಿಸುವ ಶೀರ್ಷಿಕೆಯ ಈ ಸಿನಿಮಾದಲ್ಲಿ ಹೇಳಲು ಹೊರಟಿರುವ ಕಥೆಯೂ ವಿಶೇಷವೇ. ಶೀರ್ಷಿಕೆಯಲ್ಲಿರುವ ಮೂರೂ ಶಬ್ದಗಳು ಚಿತ್ರಮಂದಿರಕ್ಕೆ ಸಂಬಂಧಿಸಿವೆ. ‘ಲವ್ ಇನ್ ಮಂಡ್ಯ’ ನಿರ್ದೇಶಕ ಅರಸು ಅಂತಾರೆ ತಮ್ಮ ಎರಡನೇ ಪ್ರಯತ್ನದಲ್ಲಿ ಇಂಥದ್ದೊಂದು ಹೊಸ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ.

‘ಬಾಲ್ಕನಿ, ಸೆಕೆಂಡು ಮತ್ತು ಬಕೆಟ್ ಎಂದು ಚಿತ್ರಮಂದಿರದಲ್ಲಿನ ಆಸನ ವ್ಯವಸ್ಥೆಯನ್ನು ಕರೆಯಲಾಗುತ್ತದೆ. ಸಿನಿಮಾ ಪರದೆಯ ಎದುರು ಬೆಂಕಿ ಆಕಸ್ಮಿಕ ತಡೆಗಟ್ಟಲು ಮರಳು ತುಂಬಿ ಇಡಲಾಗುತ್ತಿದ್ದ ಕೆಂಪು ಬಕೆಟ್‌ಗಳ ಕಡೆಯಿಂದ ಬಕೆಟ್ ಕ್ಲಾಸ್ ಶುರು. ನಂತರ ಸೆಕೆಂಡು, ಆಮೇಲೆ ಬಾಲ್ಕನಿ. ಮೈಸೂರು, ಮಂಡ್ಯದಲ್ಲಿ ಇನ್ನೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಅಂತಾರೆ.

ಇದು ಚಿತ್ರಮಂದಿರಗಳ ಹೊರಗೆ ಬ್ಲ್ಯಾಕ್ ಟಿಕೆಟ್ ಮಾರುವವರು ಮತ್ತು ಜನರಿಗೆ ಸಂಬಂಧಿಸಿದ ಚಿತ್ರವಂತೆ. ಮೈಸೂರಿನಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತರಾಗಿ ಅರಸು ಕಥೆ ಬರೆದಿದ್ದಾರೆ.

‘ಈ ಬ್ಲ್ಯಾಕ್ ಟಿಕೆಟ್ ಮಾರುವವರನ್ನು ನಾನು ಚಿಕ್ಕವನಿದ್ದಾಗಿನಿಂದಲೂ ಹತ್ತಿರದಿಂದ ಕಂಡಿದ್ದೇನೆ. ಅವರ ಜೀವನ ಶೈಲಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಇದು’ ಎಂದು ಹೇಳಿಕೊಂಡಿರುವ ಅರಸು ಈ ಚಿತ್ರವನ್ನು, ‘ಸಿನಿಮಾದಿಂದ ಸಿನಿಮಾಗೋಸ್ಕರ ಸಿನಿಮಾಗಾಗಿ’ ಅಂತಾರೆ.

ಗಮನ ಸೆಳೆವ ಗೀತರಚನೆಕಾರ ಅರಸು ‘ಲವ್ ಇನ್ ಮಂಡ್ಯ’ದ ನಂತರ ಎರಡು ವರ್ಷಗಳ ಬಳಿಕ ಮತ್ತೆ ಅವರು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕಳೆದ ವಾರದಿಂದ ಚಿತ್ರೀಕರಣ ಆರಂಭವಾಗಿದೆ. ಪಾತ್ರಪೋಷಣೆಗೆ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗಿದೆ.

ಕರ್ಣ, ‘ಸೋಡಾಬುಡ್ಡಿ’ಯ ಖುಷಿ ಮತ್ತು ಅಚ್ಯುತಕುಮಾರ್ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಹರ್ಷ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಅಭಿಷೇಕ್ ಕಾರಸಗೋಡು ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನ ಇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT