ADVERTISEMENT

ಬಾಲಿವುಡ್‌ ಗಳಿಕೆ ಫಲ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2015, 19:30 IST
Last Updated 1 ಅಕ್ಟೋಬರ್ 2015, 19:30 IST

ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಿನಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರಗಳು ಭರ್ಜರಿ ಹಣ ಗಳಿಸಿವೆ. ಕಳೆದ ವರ್ಷದ ಈ ಸಮಯಕ್ಕೆ ಹೋಲಿಕೆ ಮಾಡಿ ನೋಡಿದರೆ ಹಣಗಳಿಕೆಯಲ್ಲಿ ಶೇ 30 ಹೆಚ್ಚಳವಾಗಿದೆ.

ಈ ವರ್ಷದ ಮೂರನೇ ಕ್ವಾರ್ಟರ್‌ನಲ್ಲಿ ಬಾಲಿವುಡ್‌ನಲ್ಲಿ ಹಣದ ಹೊಳೆಯೇ ಹರಿದಿದ್ದು, ಒಟ್ಟು ₹1000 ಕೋಟಿ ಹಣ ಗಳಿಕೆಯಾಗಿದೆ. 
‘2015ನೇ ವರ್ಷದ ಮೂರನೇ ಕ್ವಾರ್ಟರ್‌ ಅತ್ಯದ್ಭುತ. ಈ ಸಮಯದಲ್ಲಿ ತೆರೆಕಂಡ ‘ಬಜರಂಗಿ ಭಾಯಿಜಾನ್‌’, ‘ಬಾಹುಬಲಿ’ ಮತ್ತು ‘ದೃಶ್ಯಂ’ ಸಿನಿಮಾಗಳು ಸ್ವದೇಶದಲ್ಲೇ ₹600 ಕೋಟಿ ಗಳಿಕೆ ಮಾಡಿವೆ’ ಎಂದಿದ್ದಾರೆ ಚಿತ್ರಮಾರುಕಟ್ಟೆ ವಿಶ್ಲೇಷಕರಾದ ಅಕ್ಷಯ ರಥಿ.

ಈ ಮೂರು ಚಿತ್ರಗಳ ಭರ್ಜರಿ ಯಶಸ್ಸಿನ ಜೊತೆಗೆ ಇದೇ ಅವಧಿಯಲ್ಲಿ ಬಾಲಿವುಡ್‌ ಅನೇಕ ಫ್ಲಾಪ್‌ ಸಿನಿಮಾಗಳನ್ನು ಕಂಡಿದೆ. ಇಮ್ರಾನ್‌ ಖಾನ್‌ ಅಭಿನಯದ ‘ಕಟ್ಟಿ ಬಟ್ಟಿ’, ಅಭಿಷೇಕ್‌ ಬಚ್ಚನ್‌ ಅಭಿನಯದ ‘ಆಲ್‌ ಈಸ್‌ ವೆಲ್‌’, ಸೂರಜ್‌ ಪಂಚೋಲಿ ಅಭಿನಯದ ‘ಹೀರೊ’ ಸಿನಿಮಾಗಳ ಜೊತೆಗೆ ಆ್ಯಕ್ಷನ್‌ ಕಿಂಗ್‌ ಅಕ್ಷಯ್‌ ಕುಮಾರ್‌ ಅಭಿನಯದ ‘ಬ್ರದರ್ಸ್‌’ ಸಿನಿಮಾ ಕೂಡ ಅಂತಹ ಗಳಿಕೆಯನ್ನೇನೂ ಮಾಡಲಿಲ್ಲ. ಈ ಎಲ್ಲ ಸಿನಿಮಾಗಳೂ ನಿರ್ಮಾಪಕರಿಗೆ ನಷ್ಟವನ್ನು ತಂದೊಡ್ಡಿವೆ. ಕುತೂಹಲದ ಸಂಗತಿಯೆಂದರೆ,  ಕಾಮಿಡಿ ಸಿನಿಮಾಗಳಾದ ‘ವೆಲ್‌ಕಂ ಬ್ಯಾಕ್‌’ ಮತ್ತು ‘ಕಿಸ್‌ ಕಿಸ್‌ಕೊ ಪ್ಯಾರ್‌ ಕರೂ’ ಸಿನಿಮಾಗಳು ಉತ್ತಮ ಗಳಿಕೆ ತೋರುತ್ತಿವೆ. ಅದರಲ್ಲೂ ಕಾಮಿಡಿ ಕಿಂಗ್‌ ಕಪಿಲ್‌ ಶರ್ಮ ಅಭಿನಯದ ಮೊದಲ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುವಲ್ಲಿ ಯಶಸ್ವಿಯಾಗಿದೆ.

‘ಸೂಪರ್‌ಹಿಟ್‌ ಸಿನಿಮಾದ ಮುಂದುವರಿದ ಭಾಗಕ್ಕೆ ಚಿತ್ರಕಥೆ ಮಾಡುವಾಗ ನಾನು ತುಂಬ ಜಾಗರೂಕನಾಗಿದ್ದೆ. 2007ರಲ್ಲಿ ತೆರೆಕಂಡಿದ್ದ ‘ವೆಲ್‌ಕಂ’ ಚಿತ್ರಕ್ಕಿಂತಲೂ ‘ವೆಲ್‌ಕಂ ಬ್ಯಾಕ್‌’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಮನರಂಜನೆ ಇದೆ’ ಎಂದಿದ್ದಾರೆ ಅನೀಸ್‌ ಬಝ್ಮಿ. ‘ನಮ್ಮದು ಕಡಿಮೆ ಬಜೆಟ್‌ನ ಸಿನಿಮಾ. ಹಾಗಾಗಿ, ನಮ್ಮ ಚಿತ್ರ ₹100 ಕೋಟಿ ಗಳಿಕೆ ಮಾಡುತ್ತದೆ ಎಂದು ನಿರೀಕ್ಷಿಸುವುದಿಲ್ಲ’ ಎಂದಿದ್ದಾರೆ ‘ಕಿಸ್‌ ಕಿಸ್ಕೊ ಪ್ಯಾರ್‌ ಕರೂ’ ಸಿನಿಮಾದ ನಿರ್ದೇಶಕ ಅಬ್ಬಾಸ್‌ ಮಸ್ತಾನ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.