ADVERTISEMENT

ಬಾಲಿವುಡ್‌ ಮೆಚ್ಚಿದ ‘ತನು...’

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:30 IST
Last Updated 25 ಮೇ 2015, 19:30 IST
‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರದಲ್ಲಿ ಕಂಗನಾ ರನೋಟ್‌
‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರದಲ್ಲಿ ಕಂಗನಾ ರನೋಟ್‌   

ಕಂಗನಾ ರನೋಟ್‌ ಮತ್ತು ಆರ್‌. ಮಾಧವನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಹಳೆಯ ಮಾತು.

ಬಾಲಿವುಡ್‌ ಗಣ್ಯರಿಗೂ ಈ ಚಿತ್ರ ಇಷ್ಟವಾಗಿದೆ. ಅದರಲ್ಲಿಯೂ ಗುಂಗುರು ಕೂದಲ ಚೆಲುವೆ ಕಂಗನಾ ರನೋಟ್‌್ ಅವರ ದ್ವಿಪಾತ್ರಾಭಿನಯಕ್ಕೆ ವಿಶೇಷ ಪ್ರಶಂಸೆ ವ್ಯಕ್ತವಾಗುತ್ತಿದೆ.  ಜತೆಗೆ ಮಾಧವನ್‌ ಮತ್ತು ಇತರ ಕಲಾವಿದರ ಅಭಿನಯದ ಬಗೆಗೂ ಮೆಚ್ಚುಗೆಯ ಮಾತು ಕೇಳಿಬರುತ್ತಿವೆ.

ಆನಂದ್‌ ಎಲ್‌. ರೈ ನಿರ್ದೇಶನದ ಈ ಸಿನಿಮಾ 2011ರಲ್ಲಿ ತೆರೆಕಂಡಿದ್ದ ‘ತನು ವೆಡ್ಸ್‌ ಮನು’ ಚಿತ್ರದ ಎರಡನೇ ಭಾಗ.
ಈ ಚಿತ್ರದ ಬಗ್ಗೆ ಬಾಲಿವುಡ್‌ ಮಂದಿ ಮೆಚ್ಚುಗೆಯ ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹರಿಬಿಟ್ಟಿದ್ದಾರೆ.

‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರ ನೋಡಿದೆ. ಅದ್ಭುತ ಚಿತ್ರ!. ನಿರ್ದೇಶಕ ಆನಂದ ರೈ, ನಟರಾದ ಕಂಗನಾ, ಮಾಧವನ್‌, ದೀಪಕ್‌ ಇಡೀ ಚಿತ್ರತಂಡಕ್ಕೇ ಅಭಿನಂದನೆಗಳು. ಇದೊಂದು ಅತ್ಯುತ್ತಮ ಚಿತ್ರ’ ಎಂದು ಹೇಳಿದ್ದಾರೆ ಹುಮಾ ಖುರೇಷಿ.

‘ಈ ಚಿತ್ರವನ್ನು ನಾನು ಅದೆಷ್ಟು ಇಷ್ಟಪಟ್ಟೆ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಖಂಡಿತ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲುತ್ತದೆ. ಪ್ರಶಸ್ತಿಗಳನ್ನೂ ಬಾಚಿಕೊಳ್ಳುತ್ತದೆ. ಕಂಗನಾ ಮತ್ತು ಮಾಧವನ್‌ ಅವರ ಅಭಿನಯವಂತೂ.. ವ್ಹಾ..!’ ಎಂದು ಉತ್ಸುಕತೆಯಿಂದ ಟ್ವೀಟ್‌ ಮಾಡಿದ್ದಾರೆ ಪ್ರೀತಿ ಜಿಂಟಾ.

ಪರ್ಹಾ ಖಾನ್‌ ಕೂಡ ಈ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಜತೆಗೆ ‘ಈ ವಾರಾಂತ್ಯದಲ್ಲಿ ನೀವು ತನು ವೆಡ್ಸ್‌ ಮನು ರಿಟರ್ನ್ಸ್‌ ಚಿತ್ರವನ್ನು ನೋಡಲೇಬೇಕು. ಸೂಪರ್‌ ಫನ್‌ ಸಿನಿಮಾ! ಆನಂದ ರೈ ಮತ್ತು ತಂಡಕ್ಕೆ ನನ್ನ ಶುಭಹಾರೈಕೆಗಳು’ ಎಂದಿದ್ದಾರೆ.

ಮುದ್ದು ನಗುವಿನ ಬೆಡಗಿ ಜೆನಿಲಿಯಾ ದೇಶಮುಖ್‌ ಅವರಿಗೂ ಈ ಚಿತ್ರ ಸಖತ್‌ ಖುಷಿಕೊಟ್ಟಿದೆ. ‘ಎಂಥಾ ಚಿತ್ರ.. ವಾವ್‌!  ನಿಜವಾಗಲೂ ತುಂಬ ಇಷ್ಟಪಟ್ಟೆ. ಇಂಥ ಸಿನಿಮಾ ಮಾಡಿದ್ದಕ್ಕಾಗಿ ಧನ್ಯವಾದಗಳು ಆನಂದ ರೈ. ಬ್ರಿಲಿಯಂಟ್‌!’ ಎಂದು ಉದ್ಗರಿಸಿದ್ದಾರೆ ಜೆನಿಲಿಯಾ.
ಒಟ್ಟಾರೆ ಬಾಲಿವುಡ್‌ ಗಲ್ಲಿಗಳಲ್ಲಿ ತನು ವೆಡ್ಸ್‌ ಮನು ಮರುಕಳಿಕೆಗೆ ಭರ್ಜರಿ ಪ್ರತಿಕ್ರಿಯೆಯೇ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.