ADVERTISEMENT

ಬಿಡುಗಡೆಗೂ ಮುನ್ನವೇ ಹರಿದಾಡಿದ ‘ಜೂಲಿ 2’ ಸಿನಿಮಾದ ದೃಶ್ಯಗಳು

ಏಜೆನ್ಸೀಸ್
Published 23 ನವೆಂಬರ್ 2017, 11:33 IST
Last Updated 23 ನವೆಂಬರ್ 2017, 11:33 IST
ಬಿಡುಗಡೆಗೂ ಮುನ್ನವೇ ಹರಿದಾಡಿದ ‘ಜೂಲಿ 2’ ಸಿನಿಮಾದ ದೃಶ್ಯಗಳು
ಬಿಡುಗಡೆಗೂ ಮುನ್ನವೇ ಹರಿದಾಡಿದ ‘ಜೂಲಿ 2’ ಸಿನಿಮಾದ ದೃಶ್ಯಗಳು   

ಮುಂಬೈ: ಮಾದಕ ಸುಂದರಿ ಲಕ್ಷ್ಮೀ ರೈ ಕೆಂಡಾಮಂಡಲವಾಗಿದ್ದಾರೆ. ಅವರ ಬಹು ನಿರೀಕ್ಷೆಯ ಸಿನಿಮಾ ‘ಜೂಲಿ 2’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿರುವಾಗಲೇ (ನವೆಂಬರ್‌ 24)  ಆ ಸಿನಿಮಾದ ಕೆಲವು ರಮ್ಯ ಸನ್ನಿವೇಶಗಳು ಸೋರಿಕೆಯಾಗಿರುವುದು ಇದಕ್ಕೆ ಕಾರಣ.

ನಿಜ, ಎರಡು ಬಾರಿ ಮುಂದೂಡಿಕೆಯಾಗಿ ಇದೀಗ ಬಿಡುಗಡೆ ಭಾಗ್ಯ ಕಾಣುತ್ತಿರುವ ಸಿನಿಮಾದ ಕೆಲವು ಮಹತ್ವದ ದೃಶ್ಯಗಳು ಗುರುವಾರ ಬೆಳಗ್ಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ!

ಸೆನ್ಸಾರ್‌ ಮಂಡಳಿಯ ಹಿಂದಿನ ಮುಖ್ಯಸ್ಥ ಪಹ್ಲಾಜ್‌ ನಿಹಲಾನಿ ನಿರ್ದೇಶನದ ‘ಜೂಲಿ 2’ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಲಕ್ಷ್ಮೀ ಸೇರಿದಂತೆ ಇಡೀ ಚಿತ್ರತಂಡ ಭ್ರಮನಿರಸನಗೊಂಡಿದೆ. ‘ನಾನು ಇಲ್ಲಿ ಚಿತ್ರಕ್ಕಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದೇನೆ. ಈ ಹಂತದಲ್ಲಿ ಹೀಗಾಗಿರುವುದು ನಿಜಕ್ಕೂ ಅಕ್ಷಮ್ಯ’ ಎಂದು ಕಿಡಿಕಾರಿದ್ದಾರೆ ಲಕ್ಷ್ಮಿ.

ADVERTISEMENT

‘ಜೂಲಿ 2’ದಲ್ಲಿ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೆಯೇ ಸೆನ್ಸಾರ್‌ ಮಂಡಳಿ ‘ಎ’ ಸರ್ಟಿಫಿಕೇಟ್‌ ನೀಡಿರುವ ಖುಷಿಯಲ್ಲಿರುವಾಗಲೇ ಈ ಆಘಾತ ಎದುರಾಗಿದೆ. ಈ ಹಿಂದೆ ಪಹ್ಲಾಜ್‌ ನಿಹಲಾನಿ ಸೆನ್ಸಾರ್‌ ಮಂಡಳಿ ಮುಖ್ಯಸ್ಥರಾಗಿದ್ದಾಗ ಸಿನಿಮಾಗಳಿಗೆ ಸರ್ಟಿಫಿಕೇಟ್‌ ನೀಡುವ ಸಂಬಂಧ ಸಾಕಷ್ಟು ವಿವಾದ ಸೃಷ್ಟಿಸಿದ್ದರು. ‘ಜಬ್‌ ಹ್ಯಾರಿ ಮೆಟ್‌’ ಚಿತ್ರದಲ್ಲಿದ್ದ ‘ಸಂಭೋಗ’ ಎಂಬ ಪದವನ್ನು ಕಿತ್ತುಹಾಕಿದ್ದು, ಹಲವು ಸಿನಿಮಾಗಳಲ್ಲಿನ ಮುತ್ತಿನ ದೃಶ್ಯಗಳಿಗೆ ಕತ್ತರಿ ಹಾಕಿದ್ದು ಬಾಲಿವುಡ್‌ ನಿರ್ದೇಶಕ, ನಿರ್ಮಾಪಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದೀಗ ಅವರದೇ ಸಿನಿಮಾಕ್ಕೆ ಅನಿರೀಕ್ಷಿತ ಏಟು ಬಿದ್ದಂತಾಗಿದೆ. ಒಟ್ಟಿನಲ್ಲಿ, ‘ಜೂಲಿ 2’ ಭವಿಷ್ಯ ಏನಾಗುತ್ತದೋ ಕಾದುನೋಡಬೇಕಾಗಿದೆ.

ಮತ್ತೊಂದೆಡೆ, ‘ಜೂಲಿ 2’ ಸಿನಿಮಾ, ನಟಿ ನಗ್ಮಾ ಅವರ ಜೀವನಕತೆಯನ್ನು ಆಧರಿಸಿದ್ದು ಎಂಬ ಗುಲ್ಲೆದ್ದಿದೆ. ಆದರೆ ಇದನ್ನು ಸ್ವತಃ ನಗ್ಮಾ ನಿರಾಕರಿಸಿದ್ದಾರೆ.

‘ಕೆಲವು ಸನ್ನಿವೇಶಗಳಿಗೆ ಹೋಲಿಕೆ ಇರುವುದು ನನಗೂ ತಿಳಿದಿದೆ. ಆದರೆ ನನ್ನದೇ ಬದುಕಿನ ಕತೆಯನ್ನು ಒಳಗೊಂಡ ಸಿನಿಮಾ ಅಲ್ಲ. ಸಿನಿಮಾ ಬಿಡುಗಡೆಯಾದ ಮೇಲಷ್ಟೇ ವಾಸ್ತವ ತಿಳಿಯಲಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ವಿವಿಧ ಚಿತ್ರನಟಿಯರ ಬದುಕಿನ ಮೇಲೆ ಬೆಳಕು ಚೆಲ್ಲುವ ಚಿತ್ರ ಇದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.