ADVERTISEMENT

ಬಿ–ಟೌನ್‌ ಖಳನಾಯಕರು

ಪಂಚರಂಗಿ

ಅನಿತಾ ಈ.
Published 1 ಜನವರಿ 2016, 9:12 IST
Last Updated 1 ಜನವರಿ 2016, 9:12 IST

ಸಂಜಯ್‌ ದತ್
ಬಾಲಿವುಡ್‌ನ ದಾದಾ, ಮುನ್ನಾಭಾಯಿ ಎಂದೇ ಖ್ಯಾತಿ ಪಡೆದಿರುವ ಸಂಜಯ್‌ ದತ್‌, ನಟ ಸುನಿಲ್‌ ದತ್‌ ಮತ್ತು  ನರ್ಗೀಸ್‌ ದತ್‌ ಅವರ ಪುತ್ರ. ‘ಖಳ್‌ನಾಯಕ್‌’ ಚಿತ್ರದಲ್ಲಿ  ಪ್ರೇಕ್ಷಕರ ಮನಗೆದ್ದಿದ್ದ ಅವರು ನಿಜ ಜೀವನದಲ್ಲೂ ಕಾನೂನು ಉಲ್ಲಂಘಿಸಿ ಖಳನಾಯಕನೆಸಿಕೊಂಡಿದ್ದಾರೆ.

‘ಮುನ್ನಾಭಾಯಿ ಎಂಬಿಬಿಎಸ್‌’, ‘ಲಗೆ ರಹೋ ಮುನ್ನಾ ಭಾಯಿ’ ಚಿತ್ರಗಳಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂಜಯ್‌, ಅದಕ್ಕೂ ಮುನ್ನ ‘ವಾಸ್ತವ್‌’, ‘ಖಳ್‌ನಾಯಕ್‌’ಗಳಂತಹ ಹಿಟ್‌ ಚಿತ್ರಗಳನ್ನು ನೀಡಿದರು. ಸಂಜಯ್‌ ದತ್‌ ಸದ್ಯ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೂ ಮುನ್ನ ಅಕ್ರಮವಾಗಿ ಎಕೆ– 56 ರೈಫಲ್‌ ಹೊಂದಿದ್ದ ಅಪರಾಧಕ್ಕಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ.

1993ರ ಮಾರ್ಚ್‌ 12ರಂದು ಮುಂಬೈನಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಹಲವು ಕಡೆಗಳಲ್ಲಿ 12 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಇದರಲ್ಲಿ ಸುಮಾರು 257 ಮಂದಿ ಸಾವನ್ನಪ್ಪಿದರೆ, 713 ಮಂದಿ ಗಾಯಗೊಂಡಿದ್ದರು. ಜೊತೆಗೆ ₹27 ಕೋಟಿ ಆಸ್ತಿಪಾಸ್ತಿ ನಷ್ಟವಾಗಿತ್ತು. 1993ರ ಏಪ್ರಿಲ್‌ 19ರಂದು ಸಂಜಯ್‌ ದತ್‌ ಮಾರಿಷಿಯಸ್‌ನಿಂದ ಬರುತ್ತಿದ್ದಂತೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಮೇ 3ರಂದು ಜಾಮೀನಿನ ಮೇಲೆ ಹೊರ ಬಂದಿದ್ದ ದತ್‌ ಅವರನ್ನು ಮತ್ತೆ ಅದೇ ವರ್ಷ ಜುಲೈ 4ರಂದು ಬಂಧಿಸಲಾಗಿತ್ತು.

ನಂತರ ವಿಚಾರಣಾಧೀನ ಕೈದಿಯಾಗಿ 16 ತಿಂಗಳು ಸೆರೆವಾಸ ಅನುಭವಿಸಿದ್ದ ಅವರು, 1995ರ ಅಕ್ಟೋಬರ್‌ 16ರಲ್ಲಿ ಮತ್ತೆ ಜಾಮೀನಿನ ಮೇಲೆ ಸಂಜಯ್‌ ಹೊರ ಬಂದಿದ್ದರು. ನಂತರ  2006ರ ನವೆಂಬರ್‌ 27ರಂದು ಸಂಜಯ್‌ ದತ್‌ ಅವರನ್ನು ಬಂಧಿಸಲು ಟಾಡಾ ನ್ಯಾಯಾಲಯ ಸಮನ್ಸ್‌ ಹೊರಡಿಸಿತ್ತು. ನವೆಂಬರ್‌ 28ರಂದು ಟಾಡಾ ನ್ಯಾಯಾಲಯ ನೀಡಿದ ತೀರ್ಪಿನ ಅನುಸಾರ ಶಸ್ತ್ರಾಸ್ತ್ರ ಕಾಯಿದೆಗೆ ಸಂಬಂಧಿಸಿದಂತೆ ಮಾತ್ರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟಾಡಾಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಿಂದಲೂ ಮುಕ್ತರಾದರು.

9 ಎಂಎಂ ಪಿಸ್ತೂಲ್‌ ಹಾಗೂ ಎಕೆ–56 ರೈಫಲ್‌ ಅನ್ನು ಅಕ್ರಮವಾಗಿ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2007ರ ಜುಲೈನಲ್ಲಿ ಹೊರಬಿದ್ದ ತೀರ್ಪಿನ ಪ್ರಕಾರ ಸಂಜಯ್‌ ದತ್‌ 6 ವರ್ಷ ಜೈಲುವಾಸ ಅನುಭವಿಸಬೇಕಿತ್ತು. ಆದರೆ  ಈ ತೀರ್ಪನ್ನು ಪ್ರಶ್ನಿಸಿ 2007ರ ಆಗಸ್ಟ್ 7ರಂದು ಸಂಜಯ್‌ ಮೇಲ್ಮನವಿ ಸಲ್ಲಿಸಿದ್ದರು. ಅದಕ್ಕೂ ಮುನ್ನ ಆಗಸ್ಟ್‌ 2ರಂದು ಅರ್ಥರ್ ಜೈಲಿನಿಂದ ಪುಣೆಯಲ್ಲಿರುವ ಯರವಾಡ ಜೈಲಿಗೆ ಸಂಜಯ್‌ ಅವರನ್ನು ಸ್ಥಳಾಂತರಿಸಲಾಗಿತ್ತು.

ಈ ಮಧ್ಯೆ ಮತ್ತೆ ಜಾಮೀನು ಕೋರಿ ದತ್‌ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ನಂತರ 2013ರ ಮಾರ್ಚ್‌ನಲ್ಲಿ ಟಾಡಾ ನ್ಯಾಯಲಯ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದು, ದತ್‌ಗೆ 5 ವರ್ಷ ಸೆರೆವಾಸದ ಶಿಕ್ಷೆ ನೀಡಿತು. ಅಷ್ಟರಲ್ಲಿ ದತ್‌ 65 ತಿಂಗಳವರೆಗೆ ಜಾಮೀನಿನ ಮೇರೆಗೆ ಜೈಲಿನಿಂದ ಹೊರಕ್ಕೆ ಬಂದಿದ್ದರು. 2013ರ ಡಿಸೆಂಬರ್‌ 21ರಿಂದ 2014ರ ಮಾರ್ಚ್‌ವರೆಗೆ ಪೆರೋಲ್‌ ವಿಸ್ತರಣೆ ಮಾಡಿಕೊಂಡಿದ್ದರು.

ಜೊತೆಗೆ ಗೈರುಹಾಜರಿ ರಜೆ ಮೇಲೂ ದತ್‌ ಜೈಲಿನಿಂದ ಹೊರಗೆ ಬಂದಿದ್ದಾಗ ಹಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ಸುಪ್ರೀಂಕೋರ್ಟ್‌ ಆದೇಶದ ನಂತರ 2013ರ ಮೇ 16ರಂದು ಶರಣಾಗಿದ್ದ ಅವರು ಉತ್ತಮ ನಡತೆ ಮತ್ತು ಇತರ ಕಾರಣಗಳಿಂದ 2016ರ ಮಾರ್ಚ್‌ 7ಕ್ಕೆ ಶಿಕ್ಷೆಯ ಅವಧಿ ಮುಗಿಸಿ ಹೊರಬರುವ ಸಾಧ್ಯತೆಗಳಿವೆ.
*
ಸಲ್ಮಾನ್‌ ಖಾನ್‌
ಸದಾ ಗೆಳತಿಯರೊಂದಿಗೆ ಜಗಳ, ಲವ್‌ ಬ್ರೇಕ್‌ಅಪ್‌, ಸಹ ನಟರೊಂದಿಗೆ ಗಲಾಟೆಗಳಿಂದ ಬಿ–ಟೌನ್‌ನಲ್ಲಿ  ಆಗಾಗ ಸುದ್ದಿ ಮಾಡುತ್ತಿದ್ದ ಸಲ್ಮಾನ್‌, ಇನ್ನೊಂದು ರೀತಿಯ ಖಳನಾಯಕ.

1998ರಲ್ಲಿ ಕೃಷ್ಣಮೃಗ ಬೇಟೆ, 2002ರಲ್ಲಿ ವಾಹನ ಗುದ್ದಿ, ನಿಲ್ಲಸದೇ  ಹೋದ ಪ್ರಕರಣದಿಂದ ನಿಜ ಜೀವನದಲ್ಲಿ ಖಳನಾಯಕನಾದರು. ‘ದ ಮೋಸ್ಟ್‌ ಎಲಿಜಬಲ್ ಬ್ಯಾಚುಲರ್‌’ ಸಲ್ಮಾನ್‌ ಖಾನ್‌ನನ್ನು ಪ್ರೀತಿಸುತ್ತಿದ್ದ ಹುಡುಗಿಯರು ತಾವಾಗಿಯೇ ಅವರಿಂದ ದೂರವಾಗುತ್ತಿದ್ದರು. ತೆರೆಮೇಲೆ ಕಾಣಿಸುವ ಲವರ್‌ ಬಾಯ್‌ ಸಲ್ಮಾನ್‌ ನಿಜ ಜೀವನದಲ್ಲಿ ‘ಟಾರ್ಚರ್‌ ಬಾಯ್‌’ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದಾರೆ.

‘ಹಮ್‌ ದಿಲ್‌ ದೇ ಚುಕೆ ಸನಮ್‌’ ಚಿತ್ರದಿಂದ ಐಶ್ ಹಾಗೂ ಸಲ್ಮಾನ್‌ ಲವ್‌ ಸ್ಟೋರಿ ಪ್ರಾರಂಭವಾಗಿತ್ತಾದರೂ ತುಂಬಾ ಕಾಲ ಉಳಿಯಲಿಲ್ಲ. ಸಲ್ಮಾನ್‌ ನಡವಳಿಕೆಯಿಂದ ಬೇಸತ್ತ ಐಶ್ವರ್ಯಾ ತಮ್ಮ ಲವ್‌ಸ್ಟೋರಿಗೆ ಅಂತ್ಯ ಹಾಡಿದ್ದರು. ಇದಾದ ನಂತರ ಐಶ್ವರ್ಯಾ ಅಭಿನಯಿಸುತ್ತಿದ್ದ ಸಿನಿಮಾಗಳ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದ ಸಲ್ಮಾನ್‌, ಐಶ್ವರ್ಯಾಗೆ ಅವಮಾನ ಮಾಡುತ್ತಿದ್ದರು.

ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಅಭಿನಯದ ‘ಕುಚ್‌ ನಾ ಕಹೋ’  ಹಾಗೂ ಶಾರುಖ್ ಖಾನ್‌ ಜತೆ ಅಭಿನಯಿಸಿದ್ದ ‘ಹಮ್‌ ದಿಲ್‌ ದೇ ಚುಕೆ ಸನಮ್‌’ ಸಿನಿಮಾ ಚಿತ್ರೀಕರಣದ ವೇಳೆ ಅಲ್ಲಿಗೆ ಹೋಗಿ ಐಶ್ವರ್ಯಾ ಜೊತೆ ಜಗಳ ಮಾಡಿ, ಆಕೆಯನ್ನು ನೆಲಕ್ಕೆ ತಳ್ಳಿದ್ದರು. ಸಾಲದ್ದಕ್ಕೆ ಆಕೆಯ ಮನೆಗೆ ತೆರಳಿ ಹಿಂಸೆ ನೀಡುತ್ತಿದ್ದರು. ಈ ಸಂಬಂಧ ದೂರು ದಾಖಲಿಸಿದ್ದ ಐಶ್ವರ್ಯಾ, ಪೊಲೀಸ್‌ ರಕ್ಷಣೆಯನ್ನೂ ಪಡೆದಿದ್ದರು.

ನಂತರ 2003ರಲ್ಲಿ ಐಶ್ವರ್ಯಾ ಮತ್ತು ವಿವೇಕ್‌ ಒಬೆರಾಯ್‌ ಸ್ನೇಹದಿಂದಿರುವ ವಿಷಯ ತಿಳಿದ ಸಲ್ಮಾನ್‌, ವಿವೇಕ್‌ಗೆ ಪ್ರಾಣ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ವಿವೇಕ್‌ ಪತ್ರಿಕಾಗೋಷ್ಠಿ ಕರೆದು ತನ್ನ ಅಳಲು ತೋಡಿಕೊಂಡಿದ್ದರು. ನಂತರ ಕತ್ರೀನಾ ಕೈಫ್‌ ಜೊತೆ ಸಲ್ಮಾನ್‌ ಪ್ರೇಮ ಗೀತೆ ಆರಂಭಿಸಿದ್ದರು. ಒಮ್ಮೆ ಕತ್ರಿನಾ ಕೈಫ್‌ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕೈಫ್‌ ವಿಷಯಕ್ಕೆ ಶಾರುಖ್‌ ಹಾಗೂ ಸಲ್ಮಾನ್ ನಡುವೆ ಜಗಳವಾಗಿ ಇತ್ತಿಚಿನವರೆಗೂ ಶೀತಲ ಸಮರ ನಡೆಯುತ್ತಿತ್ತು.

ಆದರೆ ಕೆಲವು ದಿನಗಳ ಹಿಂದೆಯಷ್ಟೇ ಇಬ್ಬರೂ ಖಾನ್‌ಗಳು ಮತ್ತೆ ಒಂದಾದರು. ಆದರೆ ಕತ್ರನಾ ಜೊತೆಗಿನ ಪಯಣ ಸಹ ದೀರ್ಘ ಕಾಲ ಉಳಿಯಲಿಲ್ಲ. ಕತ್ರನಾ ಹಾಗೂ ರಣಬೀರ್‌ ಕಪೂರ್‌ ಸಂಬಂಧ ಕುರಿತು ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಯಿಂದ ಕೆಂಡಾಮಂಡಲವಾಗಿದ್ದ ಸಲ್ಮಾನ್‌, ಪತ್ರಕರ್ತರ ವಿರುದ್ಧವೂ ಗರಂ ಆಗಿದ್ದು ಉಂಟು.

ಕೃಷ್ಣಮೃಗ ಬೇಟೆ ಪ್ರಕರಣ
1998ರಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ‘ಹಮ್‌ ಸಾಥ್‌ ಸಾಥ್‌ ಹೈ’ ಸಿನಿಮಾ ಚಿತ್ರೀಕರಣಕ್ಕಾಗಿ ಜೋಧ್‌ಪುರಕ್ಕೆ ತೆರಳಿದ್ದಾಗ ಸಲ್ಮಾನ್‌ ಖಾನ್‌ ಕಂಕಾನಿ ಹಳ್ಳಿ ಬಳಿ ಕಾನೂನು ಬಾಹಿರವಾಗಿ ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಈ ಘಟನೆ ನಡೆದದ್ದು 1998ರ ಸೆಪ್ಟೆಂಬರ್‌ನಲ್ಲಿ. ವಿಷಯ ತಿಳಿದ ಸ್ಥಳೀಯರು ಅದೇ ಅಕ್ಟೋಬರ್‌ 2ರಂದು ಸಲ್ಮಾನ್‌ ವಿರುದ್ಧ ಬಿಷ್ಣೋಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 12ರಂದು ಸಲ್ಮಾನ್‌ ಖಾನ್‌ ಬಂಧನವಾಗಿತ್ತು. ನಂತರ ಅ.17ಕ್ಕೆ ಜಾಮೀನಿನ ಮೇಲೆ ಹೊರಬಂದ ಸಲ್ಮಾನ್‌ ಮತ್ತೆ ಎಂದಿನಂತೆ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸಲ್ಮಾನ್‌ಗೆ ಐದು ವರ್ಷ ಜೈಲು ಹಾಗೂ ₹25 ಸಾವಿರ ದಂಡ ವಿಧಿಸಿತ್ತು. ಅಧೀನ ನ್ಯಾಯಾಲಯ ಈ ತೀರ್ಪನ್ನು ಎತ್ತಿಹಿಡಿದಿತ್ತು. ಸಲ್ಮಾನ್‌ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸದ್ಯ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈ ಪ್ರಕರಣದಲ್ಲಿ ಸಹ ನಟರಾದ ಸೈಫ್ ಅಲಿ ಖಾನ್‌, ಸೋನಾಲಿ ಬೇಂದ್ರೆ, ನೀಲಂ ಹಾಗೂ ಟಬು ಅವರನ್ನೂ ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಪ್ರಕರಣದಿಂದ ಒಮ್ಮೆ ಸಲ್ಮಾನ್‌ಗೆ ಯು.ಕೆ.ಗೆ ಹೋಗಲು ವೀಸಾ ನೀಡಲು ನಿರಾಕರಿಸಲಾಗಿತ್ತು.

ಹಿಟ್‌ ಅಂಡ್‌ ರನ್‌ ಕೇಸ್‌
2002ರಲ್ಲಿ ನಡೆದಿದ್ದ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು. ಕುಡಿದು ವಾಹನ ಓಡಿಸಿ ರಸ್ತೆ ಬದಿಯಲ್ಲಿ ಮಲಗಿದ್ದ ನಾಲ್ವರ ಮೇಲೆ ಕಾರನ್ನು ಹತ್ತಿಸಿದ್ದ ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗಿದ್ದ ಸಲ್ಮಾನ್‌ ಈಗ ಈ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಸಾಕ್ಷ್ಯಗಳ ಕೊರತೆಯಿಂದ ಸಲ್ಮಾನ್‌ ಈಗ ಆರೋಪ ಮುಕ್ತರಾಗಿದ್ದಾರೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಲ್ಮಾನ್‌ ಅಭಿನಯದ ಸಿನಿಮಾಗಳು ಬಾಕ್ಸ್‌ ಆಫೀಸನ್ನು ಕೊಳ್ಳೆ ಹೊಡೆಯುತ್ತಿವೆ.
*
ಸೂರಜ್‌ ಪಂಚೋಲಿ
ನಟ ಆದಿತ್ಯ ಪಂಚೋಲಿ ಪುತ್ರ ಹಾಗೂ ‘ಹೀರೊ’ ಚಿತ್ರದ ನಾಯಕ ಸೂರಜ್‌ ಪಂಚೋಲಿ, ಜಿಯಾ ಖಾನ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. 2013ರ ಜೂನ್‌ನಲ್ಲಿ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ  ಜಿಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಸೂರಜ್ ಕೊಲೆ ಮಾಡಿದ್ದಾರೆ ಎಂದು ಜಿಯಾ ತಾಯಿ ಆರೋಪಿಸಿದ್ದರು.

ಇದರಿಂದಾಗಿ ಆಗ ಸೂರಜ್‌ ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದರು. ನಂತರ ಜಿಯಾ ಸಾವಿನ ಪ್ರಕರಣದಲ್ಲಿ ಸೂರಜ್‌ ಪಾತ್ರ ಇಲ್ಲ ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ ನ್ಯಾಯಾಲಯದ ನಿರ್ಧಾರದಿಂದ ಬೇಸರಗೊಂಡಿದ್ದ ಜಿಯಾ ತಾಯಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ನಂತರ ಹೈಕೋರ್ಟ್‌ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಈಗ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
*
ಶಾರುಖ್‌ ಖಾನ್‌  
ನಟ ಶಾರುಖ್‌ ಖಾನ್‌ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕೂಗಾಡಿದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ದಾಖಲಾಗಿತ್ತು. 2012ರಲ್ಲಿ ನಡೆದ ಐಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ ಜಯಗಳಿಸಿದ್ದ ಸಂದರ್ಭದಲ್ಲಿ ಶಾರುಖ್‌ ಕ್ರೀಡಾಂಗಣದ ಒಳಗೆ ಹೋಗಲು ಯತ್ನಿಸಿದ್ದರು.

ಈ ವೇಳೆ ತಡೆದ ಕ್ರೀಡಾಂಗಣದ ಸಿಬ್ಬಂದಿ ಮೇಲೆ ಕೂಗಾಡಿದ್ದರು. ಆಗ ಎಂಸಿಎ ಅಧಿಕಾರಿಗಳು ಶಾರುಖ್‌ ವಿರುದ್ಧ ಪ್ರಕರಣ ದಾಖಲಿಸಿ, ವಾಂಖೆಡೆ ಕ್ರೀಡಾಂಗಣ ಪ್ರವೇಶಿದಂತೆ ಶಾರುಖ್‌ ಮೇಲೆ ಐದು ವರ್ಷ ನಿಷೇಧ ಹೇರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾರುಖ್‌, ಕ್ರೀಡಾಂಗಣದ ಸಿಬ್ಬಂದಿ ತಮ್ಮ ಮಕ್ಕಳ ಮೇಲೆ ಕೈ ಮಾಡಿದ್ದರು ಎಂದು ಆರೋಪಿಸಿದ್ದರು. ಇತ್ತೀಚೆಗೆ ಶಾರುಖ್‌ ಮೇಲೆ ಹೇರಿದ್ದ ನಿಷೇಧವನ್ನು ತೆಗೆಯಲಾಗಿದೆ.
*
ಸೈಫ್‌ ಅಲಿ ಖಾನ್‌
ನಟ ಸೈಫ್‌ ಅಲಿಖಾನ್‌ ಮುಂಬೈನ ಕೋಲಾಬಾದಲ್ಲಿರುವ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಆಫ್ರಿಕಾದ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದರು. 2012ರಲ್ಲಿ ವ್ಯಾಪಾರಿ ಇಕ್ಬಾಲ್‌ ಮೀರ್‌ ಶರ್ಮಾ ತನ್ನ ಸ್ನೇಹಿತರೊಡನೆ ಬಂದಿದ್ದ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿತ್ತು. ಅಂದು ಮೀರ್‌ ಅವರ ಪಕ್ಕದ ಟೇಬಲ್‌ನಲ್ಲೇ ಕುಳಿತ್ತಿದ್ದ ಸೈಫ್‌ ಅಲಿ ಖಾನ್‌, ಕರೀನಾ, ಕರಿಷ್ಮಾ, ಮಲೈಕಾ ಅರೋರಾ, ಶಕೀಲ್‌ ಲಡಾಖ್‌ ಹಾಗೂ ಅಮೃತಾ ಅರೋರಾ ತುಂಬಾ ಜೋರಾಗಿ ಮಾತನಾಡುತ್ತಿದ್ದರು.

ಇದರಿಂದ ಕಿರಿಕಿರಿಗೊಂಡ ಮೀರ್‌ ಮೆಲ್ಲನೆ ಮಾತನಾಡುವಂತೆ ಸೈಫ್‌ಗೆ ತಿಳಿಸಲು ಹೋಟೆಲ್‌ನ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿದ್ದರು. ಜೊತೆಗೆ ಸೈಫ್‌ ಕುಳಿತ್ತಿದ್ದ ಟೇಬಲ್‌ಗೆ ಒಂದು ಚೀಟಿಯನ್ನೂ ಕಳುಹಿಸಿದ್ದರು. ಇದರಿಂದ ಕೋಪಗೊಂಡ ಸೈಫ್‌, ಮೀರ್‌ ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಅವರ ಮುಖಕ್ಕೆ ಪಂಚ್‌ ಮಾಡಿದ್ದರು. ಈ ಸಂಬಂಧ ಸೈಫ್‌ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT