ADVERTISEMENT

ಭಾವುಕನಾದ ಸಲ್ಮಾನ್‌

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2015, 19:30 IST
Last Updated 1 ಅಕ್ಟೋಬರ್ 2015, 19:30 IST

ನಟ ಸಲ್ಮಾನ್‌ ಖಾನ್‌ ಮತ್ತು ನಟಿ ಐಶ್ವರ್ಯಾ ರೈ ಒಂದು ಕಾಲಕ್ಕೆ ಬಿ–ಟೌನ್‌ನ ಬಹುಪ್ರಸಿದ್ಧ ಪ್ರೇಮ ಪಕ್ಷಿಗಳಾಗಿದ್ದರು ಎನ್ನುವುದು ಹಳೆಯ ಸುದ್ದಿ. ನಂತರ ಐಶ್ವರ್ಯಾ ಅವರು ಅಭಿಷೇಕ್‌ ಬಚ್ಚನ್‌ ಅವರನ್ನು ವಿವಾಹವಾಗಿ ಐಶ್ವರ್ಯಾ ರೈ ಬಚ್ಚನ್‌ ಆಗಿ ಬದಲಾಗಿದ್ದು, ಇತ್ತ ಸಲ್ಮಾನ್‌ ಹೆಸರೂ ಬಾಲಿವುಡ್‌ನ ಅನೇಕ ನಟಿಯರ ಜತೆ ತಳುಕು ಹಾಕಿಕೊಂಡು ಗಾಳಿಸುದ್ದಿ ಹಬ್ಬಿಸಿದ್ದೆಲ್ಲವೂ ಈಗ ಗಾಸಿಪ್‌ ಪುಸ್ತಕದ ಹಳೆಯ ಪುಟಗಳಲ್ಲಿ ಸೇರಿಹೋಗಿವೆ.

ಪ್ರೇಮ ಮುರಿದುಬಿದ್ದು ಬಹುಕಾಲವಾಗಿದ್ದರೂ ಹಳೆಯ ಪ್ರೇಮಿಯ ನೆನಪಾದರೆ ಮನಸ್ಸು ಭಾವುಕತೆಯ ಸೆಳೆತಕ್ಕೆ ಸಿಕ್ಕುವುದು ಸಹಜ ತಾನೆ? ಸಲ್ಮಾನ್‌ ಖಾನ್‌ಗೆ ಕೂಡ ಹೀಗೆಯೇ ಆಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಬಿಗ್‌ ಬಾಸ್‌’ ರಿಯಾಲಿಟಿ ಷೋದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಬಂದ ಪ್ರಶ್ನೆಯೊಂದು ಸಲ್ಮಾನ್‌ ಅವರನ್ನು ಭಾವುಕತೆಗೆ ನೂಕಿದೆ.

‘ನೀವು ನಡೆಸಿಕೊಡುವ ಬಿಗ್‌ ಬಾಸ್‌ ರಿಯಾಲಿಟಿ ಷೋದಲ್ಲಿ ನಟಿ ಐಶ್ವರ್ಯ ರೈ ಕಾಣಿಸಿಕೊಳ್ಳಬಹುದೇ?’ ಎಂದು ಕೇಳಿದ ಪ್ರಶ್ನೆಗೆ, ಸಲ್ಮಾನ್ ಖಾನ್ ‘ಜಸ್ಬಾತಿ ಸವಾಲ್‌ ಕರ್‌ ದಿಯಾ...’ (ಭಾವನಾತ್ಮಕ ಪ್ರಶ್ನೆಯನ್ನು ಕೇಳಿಬಿಟ್ಟಿರಿ) ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಐದು ವರ್ಷಗಳ ನಂತರ ನಟಿಸುತ್ತಿರುವ ‘ಜಸ್ಬಾ’ ಚಿತ್ರದ ಪ್ರಚಾರಕ್ಕಾಗಿ ಐಶ್ವರ್ಯಾ ರೈ ‘ಬಿಗ್‌ ಬಾಸ್‌’ ಷೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.