ADVERTISEMENT

ಭಿನ್ನ ಪಾತ್ರದ ನಿರೀಕ್ಷೆಯಲ್ಲಿ ಶಾಹೀದ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಶಾಹೀದ್‌ ಕಪೂರ್‌ ಈಗ ಭಿನ್ನ ಬಗೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಲವರ್‌ಬಾಯ್‌, ಆ್ಯಕ್ಷನ್‌ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಈ ನಟನಿಗೆ ಈಗ ಖಳನಾಯಕನಾಗಬೇಕೆಂಬ ಆಸೆಯಂತೆ. ಇವರ ಆಸೆಯನ್ನು ಈಡೇರಿಸಲು ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಸಿದ್ಧತೆ ನಡೆಸಿದ್ದಾರೆ. 2009ರಲ್ಲಿ ಬಿಡುಗಡೆಯಾಗಿದ್ದ ‘ಕಮೀನೆ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಮಹಾ ಕಮೀನೆ’ ಚಿತ್ರ ಇದೀಗ ಸೆಟ್ಟೇರಲಿದೆಯಂತೆ.

ಸದ್ಯ ಇವರಿಬ್ಬರೂ ‘ಹೈದರ್‌’ ಎಂಬ ಚಿತ್ರದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಈ ಚಿತ್ರದ್ದೂ ವಿಭಿನ್ನ ಕಥಾವಸ್ತು. ಶಾಹೀದ್‌ ಕಪೂರ್‌ ಜತೆ ಈ ಚಿತ್ರದಲ್ಲಿ ನಟಿಸುತ್ತಿರುವುದು ಹಿರಿಯ ನಟಿ ಟಬು. ಇವರಿಬ್ಬರ ನಡುವೆ ವಯಸ್ಸಿನ ಅಂತರವಿರುವುದು ಸುಲಭಕ್ಕೆ ಗ್ರಹಿಸಬಹುದು. ಕಥೆಯೂ ಕೂಡಾ ಅದನ್ನೇ ಬಯಸಿದೆಯಂತೆ.

ಶಾಹೀದ್‌ ಮಲತಾಯಿಯಾಗಿ ಟಬು ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವಿನ ಪ್ರಣಯ ಪ್ರಸಂಗವೂ ಚಿತ್ರದಲ್ಲಿದೆಯಂತೆ. ಆದರೆ ಕಥೆ ಏನು ಎಂಬ ಒಂದಿಷ್ಟು ಸುಳಿವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಶೇಕ್ಸ್‌ಪಿಯರ್‌ ಅವರ ‘ಹ್ಯಾಮ್ಲೆಟ್‌’ ನಾಟಕದಿಂದ ಪ್ರೇರೇಪಣೆಗೊಂಡಿದ್ದು ಎಂಬ ಸುದ್ದಿಯೂ ಇದೆ. ಈ ಚಿತ್ರದಲ್ಲಿ ಶಾಹೀದ್‌ ಅವರ ಜತೆ ಶ್ರದ್ಧಾ ಕಪೂರ್‌ ನಟಿಸುತ್ತಿದ್ದಾರೆ.

ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿರುವ ‘ಹೈದರ್‌’ ಚಿತ್ರದ ಬಹುಪಾಲು ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಇರ್ಫಾನ್‌ ಖಾನ್‌, ಕೇಕೇ ಮೆನನ್‌ ಮತ್ತಿತರರು ಚಿತ್ರದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.