ADVERTISEMENT

ಮಕ್ಕಳ ಜಗತ್ತಿನಲ್ಲಿ ‘ಟ್ಯಾಬ್’ ನೋಟ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಮಕ್ಕಳ ಜಗತ್ತಿನಲ್ಲಿ ‘ಟ್ಯಾಬ್’ ನೋಟ
ಮಕ್ಕಳ ಜಗತ್ತಿನಲ್ಲಿ ‘ಟ್ಯಾಬ್’ ನೋಟ   

ಮಕ್ಕಳ ಪ್ರಪಂಚವೇ ಬೇರೆ. ಬಹುತೇಕ ಸಂದರ್ಭಗಳಲ್ಲಿ ತಂದೆ–ತಾಯಿ ಕೂಡ ಅವರ ಆಸೆ–ಆಸಕ್ತಿಗಳನ್ನು ಅರಿಯಲು ವಿಫಲವಾಗುತ್ತಾರೆ. ಒಂದು ವೇಳೆ ಅರಿತರೂ ಪೂರೈಸಲಾಗದ ಸ್ಥಿತಿ ಅವರದಾಗಿರುತ್ತದೆ. ಅಂತಹ ಮಕ್ಕಳು ಮತ್ತು ತಂದೆ–ತಾಯಿಯ ಕುರಿತ ಚಿತ್ರ ‘ಟ್ಯಾಬ್’.

ಶೀರ್ಷಿಕೆ ಕೇಳಿದರೆ – ಇದೇನಿದು? ಚಿತ್ರದ ಕಥಾವಸ್ತುವಿಗೂ ಶೀರ್ಷಿಕೆಗೂ ಹೋಲಿಕೆ ಕಂಡುಬರುತ್ತಿಲ್ಲವಲ್ಲ ಎನಿಸಬಹುದು. ಆದರೆ, ಈ ಕಾಲದ ಮಧ್ಯಮ ವರ್ಗದಿಂದ ಹಿಡಿದು ಶ್ರೀಮಂತ ಕುಟುಂಬದ ಮಕ್ಕಳವರೆಗೆ ಈ ಟ್ಯಾಬ್ ಎಂಬುದು ಆಟಿಕೆಯಾಗಿದೆ. ಈ ಸಾಧನವನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಮಲ್ಲಿಕಾರ್ಜುನ್ ಹೊಯ್ಸಳ.

ತಮ್ಮ ಮೊದಲ ಆ್ಯಕ್ಷನ್‌–ಕಟ್‌ಗೆ ಆಯ್ದುಕೊಂಡಿರುವುದು ಶಿಮ ಅವರ ‘ಮುಗ್ಧ ಮನಸುಗಳು’ ಕಾದಂಬರಿಯನ್ನು.

ADVERTISEMENT

‘ಮಕ್ಕಳ ನೋವು, ನಲಿವು ಹಾಗೂ ಭಾವನೆಗಳ ಅನಾವರಣವಾಗಿರುವ ಈ ಚಿತ್ರದಲ್ಲಿ ಅತ್ಯುತ್ತಮ ಸಂದೇಶವಿದೆ’ ಎಂದ ನಿರ್ದೇಶಕರು, ಚಿತ್ರಕ್ಕೆ ಬಂಡವಾಳ ಹಾಕಿ ಎಲ್ಲಾ ರೀತಿಯಲ್ಲೂ ನೆರವು ನೀಡಿದ ನಿರ್ಮಾಪಕ ಶ್ರೀನಿವಾಸ ಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

(ಮಲ್ಲಿಕಾರ್ಜುನ್)

ಮಾಸ್ಟರ್ ಜಯಂತ್ ಮತ್ತು ಬೇಬಿ ಸಾತ್ವಿಕಾ ಶಾಲಾ ಮಕ್ಕಳಾಗಿ, ಲಕ್ಷ್ಮೀ ಹೆಗಡೆ ಮತ್ತು ನಾರಾಯಣ ಸ್ವಾಮಿ ಮಕ್ಕಳ ತಂದೆ– ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

‘ಮಕ್ಕಳ ಮನಸ್ಸು ಸೂಕ್ಷ್ಮವಾದುದು. ಕೆಲವರು ತಂದೆ– ತಾಯಿಯ ಪರಿಸ್ಥಿತಿ ಕಂಡು ತಮ್ಮೊಳಗಿನ ಭಾವನೆಗಳನ್ನು ಹತ್ತಿಕ್ಕಿಕೊಳ್ಳುತ್ತಾರೆ. ಅಂತಹ ಮಕ್ಕಳ ಕುರಿತು ಈ ಚಿತ್ರ ಗಮನ ಸೆಳೆಯುತ್ತದೆ’ ಎಂದು ಚಿತ್ರದ ಕಥೆಯ ಎಳೆಯನ್ನು ಲಕ್ಷ್ಮಿ ಹೆಗಡೆ ಹಂಚಿಕೊಂಡರು.

ಎ.ಎಂ. ನೀಲ್ ಸಂಗೀತ ಹಾಗೂ ಧನ್‌ಪಾಲ್ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾಗಾಗಿ ಒಂದು ಹಾಡನ್ನು ಕವಿರಾಜ್ ಬರೆದಿದ್ದು, ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಏಪ್ರಿಲ್ ಅಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.