ADVERTISEMENT

ಮಗನ ಜೊತೆ ಅಭಿನಯ ಜಾಕಿಗೆ ಇಷ್ಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

‘ಹಿರೋ ಪಂಥಿ’ ಚಿತ್ರದ ಮೂಲಕ ಬಿ–ಟೌನ್‌ಗೆ ಎಂಟ್ರಿ ಕೊಟ್ಟ ನಟ ಟೈಗರ್‌ ಶ್ರಾಫ್‌ ಜತೆ ಚಿತ್ರದಲ್ಲಿ ನಟಿಸುವುದು ನನಗೆ ತುಂಬಾ ಇಷ್ಟ ಎಂದು ತಮ್ಮ ಮನದಾಳದ ಬಯಕೆಯನ್ನು ನಟ ಜಾಕಿ ಶ್ರಾಫ್‌ ಹೊರಹಾಕಿದ್ದಾರೆ.

‘ಟೈಗರ್‌ ಜತೆ ನಟಿಸಲು ಇನ್ನೂ ಕಾಲಕೂಡಿ ಬಂದಿಲ್ಲ. ಸರಿಯಾದ ಸಮಯದಲ್ಲಿ ಒಳ್ಳೆಯ ಕಥೆ ಸಿಕ್ಕಾಗ ನಾನೂ ಖಂಡಿತವಾಗಿಯೂ ಮಗನೊಂದಿಗೆ ಅಭಿನಯಿಸುತ್ತೇನೆ’ ಎಂದಿದ್ದಾರೆ ಜಾಕಿ.

‘ನನಗೆ ಮಗನ ಬಗ್ಗೆ ಹೆಮ್ಮೆ ಇದೆ. ತನ್ನ ಗುರಿ ಮುಟ್ಟುವತ್ತ ಯಶಸ್ವಿಯಾಗಿ ಸಾಗುತ್ತಿದ್ದಾನೆ. ಜನರು ನಮ್ಮಿಬ್ಬರನ್ನು ತೆರೆ ಮೇಲೆ ಜತೆಯಾಗಿ ನೋಡಲು ಬಯಸುತ್ತಿದ್ದಾರೆ. ಆದರೆ ಅದಕ್ಕೆ ಸರಿಯಾದ ಅವಕಾಶ ಹಾಗೂ ಉತ್ತಮ ಕಥೆಯ ಅಗತ್ಯ ಇದೆ. ಅದು ಸಿಕ್ಕರೆ ಮಗನೊಂದಿಗೆ ನಟಿಸುವುದು ನನಗೆ ತುಂಬಾ ಇಷ್ಟ’ ಎಂದು ಐಎಎನ್‌ಎಸ್‌ಗೆ ಹೇಳಿದ್ದಾರೆ. 

‘ಕೆ.ಸಿ. ಬೊಕಾಡಿಯಾ ಅವರ ‘ಡರ್ಟಿ ಪಾಲಿಟಿಕ್ಸ್‌’ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಹೆಸರಿಗೆ ತಕ್ಕಂತೆ ಇಡೀ ಚಿತ್ರ ರಾಜಕೀಯ ವಸ್ತುವನ್ನು ಕೇಂದ್ರವಾಗಿ ಹೊಂದಿದೆ. ಈ ಚಿತ್ರ ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. 

ಇತ್ತೀಚೆಗೆ ತೆರೆಕಂಡ, ಫರ್‍ಹಾ ಖಾನ್‌ ನಿರ್ದೇಶನದ ಹ್ಯಾಪಿ ನ್ಯೂ ಇಯರ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜಾಕಿ, ತಮ್ಮ ಮುಂಬರಲಿರುವ ‘ಡರ್ಟಿ ಪಾಲಿಟಿಕ್ಸ್‌’ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಚಿತ್ರದಲ್ಲಿ ನಟಿ ಮಲ್ಲಿಕಾ ಶೆರಾವತ್‌ ಹಾಗೂ ಓಂಪುರಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.