ADVERTISEMENT

ಮತ್ತೆ ಮತ್ತೆ ವೀರಪ್ಪನ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಗಾಂಧಿನಗರಕ್ಕೆ ವೀರಪ್ಪನ್ ವೈರಸ್! ನಿಜ, ಒಂದು ಕಡೆ ಖ್ಯಾತ ನಿರ್ಮಾಪಕ ರಾಮಗೋಪಾಲ್ ವರ್ಮ ಮತ್ತು ಶಿವರಾಜ್ ಕುಮಾರ್ ಕಾಂಬಿನೇಶನ್‌ನಲ್ಲಿ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದ್ದರೆ, ಇತ್ತ ‘ಮತ್ತೆ ಬಂದ ವೀರಪ್ಪನ್‌’ ಶೀರ್ಷಿಕೆಯಡಿ ಮತ್ತೊಂದು ಚಿತ್ರ ಸೆಟ್ಟೇರಿದೆ. ಒಟ್ಟಿನಲ್ಲಿ ವೀರಪ್ಪನ್ ಇತಿಹಾಸ ಸೇರಿದ್ದರೂ ಆತನನ್ನು ಮತ್ತೆ ಮತ್ತೆ ನೆನಪು ಮಾಡಿಸುವ ಪರ್ವ.

ಎನ್‌. ಓಂಕಾರ್ ಪುರುಷೋತ್ತಮ್ ‘ಮತ್ತೆ ಬಂದ ವೀರಪ್ಪನ್‌’ ಚಿತ್ರದ ನಿರ್ದೇಶಕ. ‘ಮಹಾಶರಣ ಹರಳಯ್ಯ’, ‘ಶ್ರೀಗುರು ತಿಪ್ಪೇರುದ್ರ ಸ್ವಾಮಿ’ ಸೇರಿದಂತೆ ಹಲವು ಭಕ್ತಿ ಪ್ರದಾನ ಚಿತ್ರಗಳನ್ನು ನಿರ್ದೇಶಿಸಿದ್ದ ಅವರು ‘ಪಗಡೆ’ ಎನ್ನುವ ಕಮರ್ಷಿಯಲ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಈಗ ‘ಪಗಡೆ’ಯನ್ನು ನಿರ್ಮಿಸಿದ್ದ ಅಣ್ಣಪ್ಪ ಅವರ ಬೆಂಬಲದಿಂದಲೇ ವೀರಪ್ಪನ್‌ಗೆ ರೂಪುಕೊಡುತ್ತಿದ್ದಾರೆ.

‘ವೀರಪ್ಪನ್ ಸತ್ತು, ಮತ್ತೆ ಹುಟ್ಟಿ ಬರುತ್ತಾನೆ. ಆಗ ಅವನು ಸಮಾಜಕ್ಕೆ ಒಳ್ಳೆಯವನಾಗುತ್ತಾನೆಯೋ ಇಲ್ಲ ಘಾತುಕವಾಗುತ್ತಾನೆಯೋ ಎನ್ನುವ ಅಂಶಗಳು ಚಿತ್ರದಲ್ಲಿರಲಿವೆ. ಹಿಂಸೆ, ಕ್ರೌರ್ಯ ಇಲ್ಲಿ ಇರುವುದಿಲ್ಲ. ಕೆಟ್ಟ ಮನುಷ್ಯನಿಗೆ ಅರಿವು ಮೂಡಿದರೆ ಆತ ಒಳ್ಳೆಯ ಕಾರ್ಯಗಳನ್ನೂ ಮಾಡಬಹುದು’ ಎನ್ನುವ ವಿಷಯಗಳು ಸಿನಿಮಾದಲ್ಲಿರಲಿವೆ’ ಎಂದರು ನಿರ್ದೇಶಕ ಪುರುಷೋತ್ತಮ್.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ತಮ್ಮ ವೃತ್ತಿ ಬದುಕಿನ ನೈಜ ಪಾತ್ರ ಮಾಡುತ್ತಿರುವುದು ‘ವೀರಪ್ಪನ್‌’ನ ವಿಶೇಷ. ಅವರು ನಟಿಸುತ್ತಿರುವ ಮೊದಲ ಚಿತ್ರ ಇದು. ಚಿತ್ರದಲ್ಲಿ ನಾಲ್ಕು ಐಟಂ ಹಾಡುಗಳಿವೆ ಎನ್ನುವ ನಿರ್ದೇಶಕರ ಹೇಳಿಕೆಯಿಂದ ತಮ್ಮ ನುಡಿ ಆರಂಭಿಸಿದರು ಬಿದರಿ.

‘ಐಟಂ ಹಾಡುಗಳಿವೆ ಎಂದಾಗ ಭಯವಾಗುತ್ತಿದೆ. ಆದರೆ ಇಲ್ಲಿ ನನ್ನದು ಎರಡೇ ನಿಮಿಷದ ಪಾತ್ರ. ಒಬ್ಬ ವೀರಪ್ಪನ್ ಸತ್ತಿದ್ದಾನೆ. ಆದರೆ ನಮ್ಮ ನಡುವಿರುವ ವೀರಪ್ಪನ್ (ಕೆಟ್ಟ ವಿಷಯಗಳು)ನ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.


ಬಿದರಿ ಅವರ ಐಟಂ ಮಾತುಗಳಿಗೆ ಕೊಂಚ ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಪಕ್ಕದಲ್ಲಿದ್ದ ‘ಮುಖ್ಯಮಂತ್ರಿ’ ಚಂದ್ರು ‘ನಾವೆಲ್ಲ ಇದ್ದಾಗ ನಿಮಗೆಲ್ಲಿ ಐಟಂ ಸಾಂಗು ಕೊಡುತ್ತೇವೆ’ ಎಂದರು ತಿಳಿಹಾಸ್ಯದಲ್ಲಿ. ಡಬ್ಬಿಂಗ್‌ ಪರವಾದ ಮಂಡಳಿ ಹುಟ್ಟನ್ನು ಆಕ್ಷೇಪಿಸಿದ ಚಂದ್ರು, ‘ಕನ್ನಡ ಭಾಷೆಗೆ ಧಕ್ಕೆಯಾಗುವ ಡಬ್ಬಿಂಗ್‌ ಅನ್ನು ನಾನು ವಿರೋಧಿಸುವೆ’ ಎಂದು ಸ್ಪಷ್ಟವಾಗಿ ಹೇಳಿದರು. ಪ್ರೊಡಕ್ಷನ್ ಮ್ಯಾನೇಜರ್‌ ಪಾತ್ರದಲ್ಲಿ ಚಂದ್ರು ಕಾಣಿಸಿಕೊಳ್ಳುತ್ತಿದ್ದು ಈ ಮ್ಯಾನೇಜರ್ ಎಡವಟ್ಟುಗಳು ನಿರ್ಮಾಪಕನನ್ನು ಹೇಗೆ ಆತಂಕಕ್ಕೆ ದೂಡುತ್ತವೆ ಎನ್ನುವುದನ್ನು ತೋರುತ್ತದೆ. ಚಂದ್ರು ಅವರಿಗೆ ಟೆನ್ನಿಸ್ ಕೃಷ್ಣ ಸಹಾಯಕನಾಗಿ ನಟಿಸುತ್ತಿದ್ದಾರೆ.

ಪ್ರಮುಖ ಪಾತ್ರದಲ್ಲಿ ಸುಮನ್ ನಟಿಸುತ್ತಿದ್ದಾರೆ. ‘ರೆಡ್ ಅಲರ್ಟ್, ಟೈಸನ್ ಮತ್ತು ಇಲ್ಲಿಯೂ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದ ಅವರು ಕಥೆಯ ಕೋನಗಳನ್ನು ಪ್ರಶಂಸಿಸಿದರು. ವೀರಪ್ಪನ್ ಪಾತ್ರದಲ್ಲಿ ನಿರ್ಮಾಪಕ ಅಣ್ಣಪ್ಪ, ಕಾಮಿಡಿ ಪೊಲೀಸ ಪಾತ್ರದಲ್ಲಿ ತಬಲಾ ನಾಣಿ ನಟಿಸುತ್ತಿದ್ದಾರೆ. ದೀಪಾಗೌಡ ನಾಯಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT