ADVERTISEMENT

ಮತ್ತೊಮ್ಮೆ ಕೌರವ!

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST
ಅನೂಷಾ
ಅನೂಷಾ   

ಬಿ.ಸಿ. ಪಾಟೀಲ್‌ ಅವರನ್ನು ‘ಕೌರವ’ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದ ಎಸ್‌. ಮಹೇಂದರ್‌ ಈಗ ‘ಒನ್ಸ್‌ ಮೋರ್‌ ಕೌರವ’ ಎನ್ನುತ್ತಿದ್ದಾರೆ. ಹೊಸ ಕೌರವನ ಜತೆ ಅವರು ಮತ್ತೆ ಕಣಕ್ಕಿಳಿದಿದ್ದಾರೆ.

ಇದುವರೆಗೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ನರೇಶ್‌ ಗೌಡ ಈ ಸಿನಿಮಾದ ಮೂಲಕ ನಾಯಕನಟನ ಪಟ್ಟಕ್ಕೆ ಏರುತ್ತಿದ್ದಾರೆ. ‘ಒನ್ಸ್‌ ಮೋರ್‌ ಕೌರವ’ ಸಿನಿಮಾದ ನಿರ್ಮಾಣದ ಹೊಣೆಯನ್ನೂ ನರೇಶ್‌ ಅವರೇ ನಿಭಾಯಿಸಿದ್ದಾರೆ.

ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿತ್ತು. ಮಾಧ್ಯಮದವರೆದುರು ನಿರ್ದೇಶಕರಿಗಿಂತ ಹೆಚ್ಚಾಗಿ ಮಾತನಾಡಿದ್ದು ಈ ಸಿನಿಮಾಕ್ಕೆ ಸಂಭಾಷಣೆ ಬರೆದ ಬಿ.ಎ. ಮಧು. ಮೂರು ವರ್ಷದ ಹಿಂದೆಯೇ ‘ಒನ್ಸ್‌ ಮೋರ್‌ ಕೌರವ’ದ ಕಥೆಯನ್ನು ಮಹೇಂದರ್‌ ಮತ್ತು ಮಧು ಸಿದ್ಧಪಡಿಸಿದ್ದರಂತೆ.

‘ಒಬ್ಬ ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ಒಂದು ಹಳ್ಳಿಯನ್ನು ಹೇಗೆಲ್ಲಾ ಅಭಿವೃದ್ಧಿಗೊಳಿಸಬಹುದು ಎಂಬುದನ್ನು ಈ ಸಿನಿಮಾದಲ್ಲಿ ಹೇಳಹೊರಟಿದ್ದೇವೆ’ ಎಂದು ವಿವರಣೆ ನೀಡಿದ ಮಧು, ‘ಈ ಚಿತ್ರದ ಒಂದು ಪಾತ್ರದಲ್ಲಿ ಬಿ.ಸಿ. ಪಾಟೀಲ್‌ ಅಭಿನಯಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಅಭಿನಯಿಸಿಲ್ಲ. ಬದಲಿಗೆ ಬೇರೊಬ್ಬರು ಆ ಪಾತ್ರದಲ್ಲಿ ನಟಿಸಿದ್ದಾರೆ’ ಎಂದರು.

ಸಿನಿಮಾದಲ್ಲಿನ ಏಳೂ ಹಾಡುಗಳನ್ನು ಕೆ. ಕಲ್ಯಾಣ್‌ ಬರೆದಿದ್ದಾರೆ. ಅವರ ಸಾಲುಗಳಿಗೆ ಶ್ರೀಧರ್ ಸಂಭ್ರಮ್‌ ಸಂಗೀತ ಹೊಸೆದಿದ್ದಾರೆ. ಮಹೇಂದರ್‌ ಜತೆ ಕೆಲಸ ಮಾಡಬೇಕು ಎಂಬ ತಮ್ಮ ಹಳೆಯ ಕನಸು ನನಸಾದ ಖುಷಿಯಲ್ಲಿ ಶ್ರೀಧರ್‌ ಇದ್ದರು.

ನಾಯಕ, ನಿರ್ಮಾಪಕ ನರೇಶ್‌ ಗೌಡ ಈ ಸಿನಿಮಾ ಮಾಡುತ್ತೇನೆ ಎಂದು ಹೊರಟಾಗ ಹಲವಾರು ಸ್ನೇಹಿತರು ಸಹಾಯ ಮಾಡುವುದಾಗಿ ಹೇಳಿದ್ದರಂತೆ. ಕೊನೆಗೆ ಎಲ್ಲರೂ ಕೈಕೊಟ್ಟಾಗ ತಾವೇ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದರು. ‘ಪೊಲೀಸ್‌ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಬೇಕು ಎಂಬ ಆಸೆ ನನಗೆ ಯಾವಾಗಲೂ ಇತ್ತು.

ಮಹೇಂದರ್‌ ಮೂಲಕ ನನ್ನ ಕನಸು ನನಸಾಗುತ್ತಿದೆ. ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ನನಗಿದೆ’ ಎಂದರು ನರೇಶ್‌. ನಾಯಕಿ ಅನೂಷಾ ಈ ಸಿನಿಮಾದಲ್ಲಿ ಮಾತಿನಮಲ್ಲಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯಾರಿಗೂ ಅಂಜದ ಬೋಲ್ಡ್‌ ಹುಡುಗಿಯಾಗಿ ನಟಿಸಿದ್ದೇನೆ’ ಎಂದು ಅವರು ಹೆಮ್ಮೆಯಿಂದಲೇ ಹೇಳಿಕೊಂಡರು.

ನಂತರ ಮಾತಿಗಿಳಿದ ಮಹೇಂದರ್‌ ಮೂವತ್ತು ವರ್ಷಗಳ ಹಿಂದೆ ಸಂಕ್ರಾಂತಿಯ ದಿನದಂದು ಕೊಳ್ಳೇಗಾಲದಿಂದ ಸಿನಿಮಾ ಮಾಡುವ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದ ದಿನಗಳನ್ನು ನೆನಪಿಸಿಕೊಂಡರು.

‘ಆಗ ನಾನು ಸಿನಿಮಾದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡು ಬಂದಿದ್ದೆ. ಈಗ ಒನ್ಸ್‌ ಮೋರ್‌ ಕೌರವ ಸಿನಿಮಾದಲ್ಲಿಯೂ ಹಲವಾರು ಹೊಸಬರ ಕನಸು ಇದೆ. ಸುಮಾರು 20 ಜನರನ್ನು ಪರಿಚಯಿಸಿದ್ದೇವೆ. ಅವರಿಗೆಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು. ಎ.ವಿ. ಕೃಷ್ಣಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನೆರಡು ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.