ADVERTISEMENT

ಮಾನ್ವಿತಾ ಮದುವೆ!

ಪದ್ಮನಾಭ ಭಟ್ಟ‌
Published 7 ಸೆಪ್ಟೆಂಬರ್ 2017, 9:54 IST
Last Updated 7 ಸೆಪ್ಟೆಂಬರ್ 2017, 9:54 IST
ಮಾನ್ವಿತಾ ಹರೀಶ್‌
ಮಾನ್ವಿತಾ ಹರೀಶ್‌   

ಶ್ರುತಿ ಹರಿಹರನ್ ಅವರ ಮದುವೆ ಗಾಸಿಪ್‌ಗಳು ತಣ್ಣಗಾಗುವ ಮುನ್ನವೇ, ಮಾನ್ವಿತಾ ಹರೀಶ್‌ ಕೂಡ ಯಾರಿಗೂ ಹೇಳದೆ ಮದುವೆಯಾಗಿಬಿಟ್ರಾ?! ಇದೇನು ಹೀಗೆ ಒಬ್ಬರ ಹಿಂದೆ ಒಬ್ಬಂತೆ ನಟಿಮಣಿಯರು ಮದ್ವೆಯಾಗುತ್ತಿದ್ದಾರಲ್ಲಾ...

ಸ್ವಲ್ಪ ತಾಳಿ. ಮಾನ್ವಿತಾ ಮದುವೆಯಾಗಿರುವದು ನಿಜ. ಆದರೆ ಅದು ನಿಜಜೀವನವಲ್ಲ! ರಾಜಶೇಖರ ಬಂಡಿಯಪ್ಪ ಅವರು ನಿರ್ದೇಶಿಸುತ್ತಿರುವ ‘ತಾರಕಾಸುರ’ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಈ ಚಿತ್ರದಲ್ಲಿ ಅವರು ಕೆಎಎಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಮದುವೆಯ ದೃಶ್ಯವನ್ನು ಇತ್ತೀಚೆಗೆ ಬೆಂಗಳೂರಿನ ಅಬ್ಬಯ್ಯನಾಯ್ಡು ಸ್ಟುಡಿಯೊ ಸಮೀಪದ ಛತ್ರವೊಂದರಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಕ್ಯಾಮೆರಾ ಎದುರಿಗೆ ಮಾನ್ವಿತಾ ಕನಕಾಂಬರ ಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದಾರೆ.

ಮಲ್ಲಿಗೆ ಹೂವು ಮುಡಿದುಕೊಂಡು, ಆಭರಣಗಳನ್ನು ಧರಿಸಿಕೊಂಡು ನಸುನಗುತ್ತ ನಿಂತ ಚಿತ್ರವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತೆರೆಯ ಮೇಲೆ ಮದುವೆಯಾದ ಅನುಭವದ ಬಗ್ಗೆ ಮಾನ್ವಿತಾ ಅವರನ್ನು ಕೇಳಿದರೆ ‘ರಿಯಲ್‌ ಮದುವೆಗೆ ಇದೊಂಥರ ಟ್ರೈಯಲ್‌ ಇದ್ದ ಹಾಗಿದೆ’ ಎಂದು ನಗುತ್ತಾರೆ.

ADVERTISEMENT

ಅವರು ನಟಿಸಿರುವ ಐದು ಸಿನಿಮಾಗಳಲ್ಲಿ ಇದೇ ಮೊದಲ ಬಾರಿಗೆ ಮದುಮಗಳಾಗಿ ಕಾಣಿಸಿಕೊಳ್ಳುತ್ತಿರುವುದಂತೆ. ‘ಈ ಸಿನಿಮಾದ ಪಾತ್ರವೇ ತುಂಬ ಚೆನ್ನಾಗಿದೆ. ವಿಭಿನ್ನವಾದ ಕಥೆ. ಹಾಗೆಯೇ ಮದುವೆಯ ಈ ದೃಶ್ಯ ನೀಡಿದ ಅನುಭವವೂ ಅಷ್ಟೇ ಭಿನ್ನವಾದದ್ದು. ಇನ್ನೂ ವಿಶೇಷವೆಂದರೆ ಮದುಮಗಳಾಗಿ ನಟಿಸಿದ್ದಕ್ಕೋ ಏನೋ ಸೆಟ್‌ನಲ್ಲಿ ಇಂದು ಮದುವೆಯ ವಿಶೇಷ ಊಟವೇ ಇತ್ತು’  ಎಂದು ಮಾನ್ವಿತಾ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ತೆರೆಯ ಮೇಲಿನ ಮಾತು ಬಿಡಿ, ನಿಜಜೀವನದಲ್ಲಿ ಬಾಸಿಂಗಧಾರಣೆ ಯಾವಾಗ? ಎಂದು ಪ್ರಶ್ನಿಸಿದರೆ ಸುಮ್ಮನೇ ಮಾತು ತಪ್ಪಿಸಿ ಜಾಣನಗು ನಕ್ಕು ಸುಮ್ಮನಾಗುವ ಕಲೆಯೂ ಅವರಿಗೆ ಚೆನ್ನಾಗಿಯೇ ಗೊತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.