ADVERTISEMENT

‘ಮೂಕಹಕ್ಕಿ’ಯ ಮೌನ ಗೀತೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
‍ಪೂಜಾ
‍ಪೂಜಾ   

‘ಎಲ್ಲರ ಬದುಕಿನ ಬಗ್ಗೆ ಚಿತ್ರಗಳು ಬಂದಿವೆ. ಆದರೆ, ಮೂಕ ಜನಾಂಗಗಳ ಅಂತರ್ಗತ ನೋವು ಕುರಿತು ಹೇಳುವ ಸಿನಿಮಾಗಳು ಬರುತ್ತಿಲ್ಲ. ದೃಶ್ಯ ಮತ್ತು ಧ್ವನಿಯಲ್ಲಿ ನಿಜ ಬದುಕು ಕಾಣಿಸಿಕೊಳ್ಳುತ್ತಿಲ್ಲ’ ಎಂದು ಮಾತಿಗಿಳಿದರು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ.

ಅವರ ಮಾತು ಅಲೆಮಾರಿ ಸಮುದಾಯಗಳತ್ತ ಹೊರಳಿತು. ನೆಲೆ ಉಳಿಸಿಕೊಳ್ಳಲು ಆ ಸಮುದಾಯ ಪ್ರತಿದಿನ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತೆರೆದಿಟ್ಟರು. ‘ಅಂತಹವರ ಬದುಕಿನ ಬಗ್ಗೆ ಚಿತ್ರಗಳು ಬಂದರೂ ಚಿತ್ರಮಂದಿರಗಳಲ್ಲಿ ಉಳಿಯುವುದು ಕಷ್ಟ. ‘ಮೂಕಹಕ್ಕಿ’ ಸಿನಿಮಾ ಕೋಲೆತ್ತಿನ ಜನಾಂಗದವರ ಬದುಕಿನ ಚಿತ್ರಣವನ್ನು ತೆರೆದಿಡುತ್ತದೆ. ಕಥೆಯೇ ಈ ಚಿತ್ರದ ನಾಯಕ’ ಎಂದರು.

ರಾಮಯ್ಯ ಅವರು ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಾಹಿತ್ಯದ ಹೊಣೆ ಹೊತ್ತಿದ್ದಾರೆ. ‘ಭಾರತೀಯ ಬದುಕನ್ನು ಕೃತಕಗೊಳಿಸುವ ಪ್ರಯತ್ನ ನಡೆದಿದೆ. ಹೊಸ ಬದುಕನ್ನು ಜನರ ಮುಂದಿಡುವ ಪ್ರಯತ್ನ ನಡೆದಿಲ್ಲ. ‘ಸಂಸ್ಕಾರ’ ಚಿತ್ರ ಹೊಸ ಚಳವಳಿಗೆ ನಾಂದಿ ಹಾಡಿತ್ತು. ಆ ಚಳವಳಿ ಮರೆಯಾಗಿದೆ. ಮತ್ತೆ ಅಂತಹ ವಾತಾವರಣ ಸೃಷ್ಟಿಸುವ ಸಿನಿಮಾಗಳು ಮೂಡಿಬರಬೇಕಿದೆ’ ಎಂದರು.

ADVERTISEMENT

ನೀನಾಸಂ ಮಂಜು ರಂಗಭೂಮಿಯ ಹಿನ್ನೆಲೆಯವರು. ಹಲವು ನಾಟಕ ನಿರ್ದೇಶಿಸಿರುವ ಹಿರಿಮೆ ಅವರದ್ದು. ‘ಮೂಕಹಕ್ಕಿ’ಯ ಮೂಲಕ ಹಿರಿತೆರೆಗೆ ಕಾಲಿಟ್ಟಿರುವ ಅವರಿಗೆ ಈ ಚಿತ್ರ ಹೊಸ ಅನುಭವ ನೀಡಿದೆಯಂತೆ. ‘ಸದಭಿರುಚಿಯ ಚಿತ್ರಗಳು ಗೆಲ್ಲಬೇಕು. ಮೂಕ ಜನಾಂಗದ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರ ಜನರಿಗೆ ಇಷ್ಟವಾಗಲಿದೆ’ ಎಂದರು.

‘ತಿಥಿ’ ಚಿತ್ರದ ಖ್ಯಾತಿಯ ಪೂಜಾ ಈ ಸಿನಿಮಾದ ನಾಯಕಿ. ಚಿತ್ರೀಕರಣದ ಕ್ಲೈಮ್ಯಾಕ್ಸ್‌ನಲ್ಲಿ ಕೋಲೆ ಬಸವ ಅವರಿಗೆ ಗುದ್ದಿದ್ದ ಬಗ್ಗೆ ಹೇಳಿಕೊಂಡರು. ‘ನನ್ನದು ಗೌರಿ ಹೆಸರಿನ ಪಾತ್ರ. ಚಿತ್ರದುದ್ದಕ್ಕೂ ಮೂಕಿಯಾಗಿ ನಟಿಸಿದ್ದೇನೆ’ ಎಂದು ಖುಷಿ ಹಂಚಿಕೊಂಡರು.

ಟಿ.ಆರ್‌. ಚಂದ್ರಕಲಾ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಚಿದಾನಂದ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.