ADVERTISEMENT

‘ಮೈ ಸ್ಟೋರಿ’: ಪೃಥ್ವಿರಾಜ್‌–ಪಾರ್ವತಿ ರೊಮ್ಯಾನ್ಸ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 11:13 IST
Last Updated 10 ಸೆಪ್ಟೆಂಬರ್ 2017, 11:13 IST
ಪೃಥ್ವಿರಾಜ್‌ ಮತ್ತು ಪಾರ್ವತಿ ಮೆನನ್‌
ಪೃಥ್ವಿರಾಜ್‌ ಮತ್ತು ಪಾರ್ವತಿ ಮೆನನ್‌   

ಮಲಯಾಳಿಗಳ ನೆಚ್ಚಿನ ಜೋಡಿ ಪೃಥ್ವಿರಾಜ್‌ ಮತ್ತು ಪಾರ್ವತಿ ಮೆನನ್‌ ಮತ್ತೆ ರೊಮ್ಯಾನ್ಸ್‌ ಮಾಡಲು ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ‘ಮೈ ಸ್ಟೋರಿ’ ಚಿತ್ರದ ಮೋಷನ್‌ ಪೋಸ್ಟರ್‌ನಲ್ಲಿ ಮಾಲಿವುಡ್‌ನ ಈ ಹಾಟ್‌ ಜೋಡಿ ಒಬ್ಬರನ್ನೊಬ್ಬರು ತಬ್ಬಿಕೊಂಡಿರುವ ದೃಶ್ಯವಿದೆ.

ತಮ್ಮ ಬಾಡಿ ಕೆಮಿಸ್ಟ್ರಿಯಿಂದ ಮಲಯಾಳಂ ಚಿತ್ರರಂಗದ ಮುದ್ದಿನ ಕಣ್ಮಣಿಗಳೆಂದೇ ಗುರುತಿಸಿಕೊಂಡಿರುವ ಪೃಥ್ವಿ ಮತ್ತು ಪಾರ್ವತಿ, ಈ ಹಿಂದೆ ‘ಎನ್ನು ನಿಂಟೆ ಮೊಯ್ದೀನ್‌’ನಲ್ಲಿ ಹೊಸ ಹವಾ ಎಬ್ಬಿಸಿದ್ದರು. ಆದರೆ ಅದು ದುಃಖಾಂತ್ಯ ಚಿತ್ರವಾಗಿದ್ದುದು ಇಬ್ಬರ ಅಭಿಮಾನಿಗಳಿಗೂ ಬೇಸರ ಉಂಟು ಮಾಡಿತ್ತು. ಅದೇ ಕಾರಣಕ್ಕಾಗಿ, ‘ಮೈ ಸ್ಟೋರಿ’ ಸುಖಾಂತ್ಯದ ಕತೆ ಹೊಂದಿರಲಿ ಎಂದು ಚಿತ್ರಪ್ರೇಮಿಗಳು ಹಾರೈಸುತ್ತಿದ್ದಾರೆ. ‘ಎನ್ನು ನಿಂಟೆ...’ ಗೆಲುವಿಗೆ ಪೃಥ್ವಿ–ಪಾರ್ವತಿ ಜೋಡಿ ಪ್ರಮುಖ ಕಾರಣವಾಗಿತ್ತು.

‘ಮೈ ಸ್ಟೋರಿ’ ನಿರ್ಮಾಣ ಮತ್ತು ನಿರ್ದೇಶನ ರೋಶಿನಿ ದಿನಕರ್‌ ಅವರದು. ಶಂಕರ್‌ ರಾಮಕೃಷ್ಣನ್‌ ಸಂಗೀತ ನೀಡಿದ್ದಾರೆ. ‘ಆ್ಯಡಂ ಜೋನ್‌’ ಚಿತ್ರದ ಮೂಲಕ ಸುದ್ದಿಯಲ್ಲಿದ್ದ ಪೃಥ್ವಿ, ‘ಮೈ ಸ್ಟೋರಿ’ಯಲ್ಲಿ ಜೈ ಹಾಗೂ ಪಾರ್ವತಿ ತಾರಾ ಆಗಿ ಕಾಣಿಸಿಕೊಂಡಿದ್ದಾರೆ.ಚಿತ್ರ ತಂಡ ಲಿಸ್ಬನ್‌ನಲ್ಲಿ ಒಂದೂವರೆ ತಿಂಗಳು ಚಿತ್ರೀಕರಣವೂ ಮುಗಿಸಿ ಬಂದಿದೆ. ಬಾಲಿವುಡ್‌ ಕೊರಿಯೊಗ್ರಾಫರ್‌ಗಳಾದ ಬಾಸ್ಕೊ ಮತ್ತು ಸೀಸರ್‌ ಅವರೇ ಪೃಥ್ವಿ ಮತ್ತು ಪಾರ್ವತಿ ಅವರನ್ನು ತಮ್ಮ ಲಯಕ್ಕೆ ಪಳಗಿಸಿದ್ದಾರೆ.

ADVERTISEMENT

ಭರ್ಜರಿ ಸೆಟ್‌ನಲ್ಲಿ ಕರ್ಣಾನಂದಕರ ಹಾಡು ಮತ್ತು ಮುದ ನೀಡುವ ನೃತ್ಯಗಳಿರುತ್ತವೆ ಎನ್ನಲಾಗಿದೆ. ‘ಚೆನ್ನೈ ಎಕ್ಸ್‌ಪ್ರೆಸ್‌’ ಖ್ಯಾತಿಯ ಡೂಡ್ಲೆ (ಚಿತ್ರಕತೆ) ಹಾಗೂ ‘ಬಾಜಿರಾವ್‌ ಮಸ್ತಾನಿ’ ಖ್ಯಾತಿಯ ಸೌಂಡ್ ಡಿಸೈನರ್‌ ಬಿಶ್ವದೀಪ್‌ ಚಟರ್ಜಿ ಕೂಡಾ ಹಿಮ್ಮೇಳದಲ್ಲಿದ್ದಾರೆ.

ಈ ಎಲ್ಲಾ ವಿವರಗಳನ್ನು ನೋಡಿದರೆ ‘ಮೈ ಸ್ಟೋರಿ’ ಭರಪೂರ ಮನರಂಜನೆ ನೀಡುವುದು ಖಾತರಿಯಾಗಿದೆ. 52 ನಿಮಿಷಗಳ ಮೋಷನ್‌ ಪೋಸ್ಟರ್‌ ಇದನ್ನು ಪುಷ್ಟೀಕರಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.