ADVERTISEMENT

ಮೋಜೊ ಹಾಡಿನಲ್ಲಿ ಮಾಂಡೂಕ್ಯೋಪನಿಷತ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಅನೂಷಾ
ಅನೂಷಾ   

ಹಾಡಿನಲ್ಲಿ ಮಾಂಡೂಕ್ಯೋಪನಿಷತ್‌ನ ಹೈಲೈಟ್‌ಗಳನ್ನೆಲ್ಲ ಸೇರಿಸಿ ‘ಮನಸಾ ಬಿಚ್ಚಿ...’ ಎಂಬ ಹಾಡು ಬರೆದಿದ್ದೇನೆ’ ವೇದಿಕೆಯ ಮೇಲೆ ಕೂತಿದ್ದ ಗೌತಮ್‌, ಗಂಭೀರವಾಗಿ ಹೀಗೆ ಹೇಳಿದಾಗ ತೂಕಡಿಕೆಯಲ್ಲಿದ್ದವರೆಲ್ಲ ಬೆಚ್ಚಿ ಎಚ್ಚರಾದರು.

ಎಷ್ಟೋ ಸಾವಿರ ವರ್ಷಗಳ ಹಿಂದೆ ರಚಿತವಾದ ಗ್ರಂಥವನ್ನು ಇಂದಿಗೂ ದೊಡ್ಡ ವಿದ್ವಾಂಸರೇ ಪೂರ್ತಿ ಅರ್ಥಮಾಡಿಕೊಳ್ಳಲು ಹರಸಾಹಸಪಡುತ್ತಿರುವಾಗ ನಾಲ್ಕು ನಿಮಿಷದ ಒಂದು ಹಾಡಿನಲ್ಲಿ ಮಾಂಡೂಕ್ಯೋಪನಿಷತ್‌ ಮುಖ್ಯಾಂಶವನ್ನು ಹೇಳಿಬಿಡುತ್ತಾರೆಂದರೆ ಸಾಮಾನ್ಯ ಸಂಗತಿಯೇ? ಹೀಗೆಲ್ಲ ಯೋಚನೆಯಲ್ಲಿ ಮುಳುಗಿರುವಾಗಲೇ ಗೌತಮ್‌ ಕೈಯಿಂದ ಮೈಕ್‌ ತೆಗೆದುಕೊಂಡ ನಿರ್ದೇಶಕ ಶ್ರೀಶ ಬೆಳಕವಾಡಿ ‘ಪ್ರದೀಪ್‌ ಅವರು ಎಷ್ಟು ಅಧ್ಯಯನ ಮಾಡಿ ಈ ಹಾಡು ಬರೆದಿದ್ದಾರೆಂದರೆ ವರ್ಷಾನುಗಟ್ಟಲೆ ಅದರ ಬಗ್ಗೆಯೇ ಮಾತನಾಡಬಲ್ಲರು!’ ಎಂದು ಇನ್ನೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದರು. ‌

ಈಗ ಗೌತಮ್‌ ಅವರ ತಲೆಕೂದಲು ಅಲ್ಲಿಲ್ಲಿ ಬೆಳ್ಳಗಾಗುತ್ತಿರುವುದೂ ಅವರ ಅಧ್ಯಯನ ಮತ್ತು ಪಾಂಡಿತ್ಯದ ಕುರುಹಿನಂತೆ ಕಾಣತೊಡಗಿತು.
ವೇದಿಕೆಯಲ್ಲಿ ಕೂತಿದ್ದವರೆಲ್ಲ ಗೌತಮ್‌ ಜ್ಞಾನದ ಕುರಿತಾದ ಬೆರಗು ಮತ್ತು ಮಾಂಡೂಕ್ಯೋಪನಿಷತ್‌ನಂಥ ಕೃತಿಯನ್ನು ನಾಲ್ಕು ನಿಮಿಷದ ಹಾಡಿನಲ್ಲಿ ಸಂಗ್ರಹಿಸಿ ಕೊಟ್ಟಿರುವ ಕುರಿತು ಅಪಾರ ಕೃತಜ್ಞತೆಯಿಂದ ನೋಡುತ್ತಿರುವಾಗಲೇ ತೆರೆಯ ಮೇಲೆ ಹಾಡು ಬರತೊಡಗಿತು. ಹಾಡು ಮುಗಿಯುವಷ್ಟರಲ್ಲಿ ಎದುರು ಕೂತಿದ್ದವರ ಮುಖದಲ್ಲಿದ್ದ ಬೆರಗು–ಕೃತಜ್ಞತೆ ಎರಡೂ ಕರಗಿ ಪೆಚ್ಚು ನಿರಾಸೆಯಷ್ಟೇ ಉಳಿದಿದ್ದು. ಅದೊಂದು ಸಾಮಾನ್ಯ ಪ್ರೇಮಗೀತೆಯಷ್ಟೆ.

ADVERTISEMENT

ಇಷ್ಟೆಲ್ಲ ಮೋಜಿನ ಸಂಗತಿಗಳಿಗೆ ಸಾಕ್ಷಿಯಾಗಿದ್ದು ‘ಮೋಜೊ’ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. ಆಫ್ರಿಕನ್‌ ಭಾಷೆಯಲ್ಲಿ ಮೋಜೊ ಎಂದರೆ 'ನಿಗೂಢ' ಎಂಬ ಅರ್ಥ ಇದೆಯಂತೆ. ಸಿನಿಮಾದ ಕಥೆ ಕೂಡ ನಿಗೂಢತೆಯ ಹಳಿಯ ಮೇಲೆಯೇ ಹೆಣೆಯಲಾಗಿದೆ. ಸಿಕ್ಸ್ತ್‌ ಸೆನ್ಸ್‌ನ ಮೂಲಕ ಒಂದು ಕೊಲೆಯ ರಹಸ್ಯವನ್ನು ಭೇದಿಸುವ ಕಥೆ ಇದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರದ ನಾಲ್ಕು ಹಾಡುಗಳಿಗೆ ‘ಲಾಸ್ಟ್‌ ಬಸ್‌’ ನಿರ್ದೇಶಕ ಎಸ್‌.ಡಿ. ಅರವಿಂದ್‌ ಸಂಗೀತ ಸಂಯೋಜಿಸಿದ್ದಾರೆ. ಎಲ್ಲ ಹಾಡುಗಳನ್ನೂ ಗೌತಮ್‌ ಅವರೇ ಬರೆದಿದ್ದಾರೆ.

‘ಯಾವುದೇ ಚಿತ್ರಕ್ಕಾದರೂ ಸಂಗೀತ ಆತ್ಮಶಕ್ತಿ ಕೊಡುತ್ತದೆ. ಮನರಂಜನೆಗೆ ಮೀರಿದ ಆಹ್ಲಾದ ಕೊಡುವ ಸತ್ವ ಸಂಗೀತದಲ್ಲಿದೆ. ಈ ಚಿತ್ರದ ಕಥೆಗನುಗುಣವಾಗಿ ಸಂಗೀತದ ಮೂಲಕ ಭಾವ ತುಂಬುವ ಕೆಲಸವನ್ನು ಅರವಿಂದ್‌ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು ಶ್ರೀಶ ಬೆಳಕವಾಡಿ. ಹಿರಿಯ ನಿರ್ದೇಶಕ ಸುನೀಲ್‌ ಕುಮಾರ್ ದೇಸಾಯಿ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮಾಡಿದರು.

ರಂಗಭೂಮಿ ಕಲಾವಿದರಾದ ಮನು ಮತ್ತು ಅನೂಷಾ ಈ ಚಿತ್ರದ ನಾಯಕ–ನಾಯಕಿ. ‘ಇದು ನಾನು ಪೂರ್ಣಪ್ರಮಾಣದ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ. ಸಿಕ್ಸ್ತ್‌ ಸೆನ್ಸ್‌ ಮೂಲಕ ಒಂದು ಕೊಲೆಯ ರಹಸ್ಯವನ್ನು ಭೇದಿಸುವ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು ಮನು. ಅನೂಷಾ ಈ ಚಿತ್ರದಲ್ಲಿ ಮನೋವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡಕ್ಕೆ ಕೃತಜ್ಞತೆ ಹೇಳುವುದರಲ್ಲಿಯೇ ಮಾತು ಮುಗಿಸಿದರು.

ಅಮೆರಿಕ ಮೂಲದ ಉದ್ಯಮಿ ಗಜಾನನ ಭಟ್‌ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅನಂತ್‌ ಅರಸ್‌ ಛಾಯಾಗ್ರಹಣ ಇರುವ ‘ಮೋಜೊ’ ಇನ್ನೆರಡು ತಿಂಗಳಲ್ಲಿ ತೆರೆಗೆ ಬರಲು ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.