ADVERTISEMENT

ಮೌಲ್ಯ-ಭಾವನೆಗಳ `ಕಳವು'

​ಪ್ರಜಾವಾಣಿ ವಾರ್ತೆ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST

`ನಾವು ಕಳೆದುಕೊಂಡ ವಸ್ತುಗಳ ಮೌಲ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ ಕಳೆದು ಹೋದುದರ ಮೌಲ್ಯದ ಚರ್ಚೆಯ ನಡುವೆ ಭಾವನೆಗಳ ಕಳವು ಗೌಣವಾಗುತ್ತದೆ. ಆ ವಿಷಾದವನ್ನೇ ಸಿನಿಮಾ ಮೂಲಕ ಹೇಳಹೊರಟಿರುವುದು' ಎಂದರು ನಿರ್ದೇಶಕ ಎಂ.ರವಿ.

ರಂಗಭೂಮಿ, ಕಿರುತೆರೆ, ಜಾಹೀರಾತು ಲೋಕಗಳಲ್ಲಿ ವಿಹರಿಸಿದ್ದ ಅವರಿಗೀಗ ಸಿನಿಮಾ ರಂಗದಲ್ಲಿ ಹೆಜ್ಜೆಗುರುತು ಮೂಡಿಸುವ ಉತ್ಸಾಹ. ಅದಕ್ಕಾಗಿ ಅವರು ಆಯ್ದುಕೊಂಡಿರುವುದು ಸರಳವೆನಿಸಿದರೂ ಅನೇಕ ಸೂಕ್ಷ್ಮ ಸಂಗತಿಗಳನ್ನು ಒಳಗೊಂಡ ಕಳ್ಳತನದ ಕಥೆಯನ್ನು. ಸಿನಿಮಾ ಹೆಸರು `ಕಳವು'. ಕೆ.ವೈ. ನಾರಾಯಣ ಸ್ವಾಮಿ ರಚಿಸಿದ ಕಥೆಯಿದು. ಸಂಭಾಷಣೆ, ಸಾಹಿತ್ಯ ಮತ್ತು ಚಿತ್ರಕಥೆಯ ಹೊಣೆಯನ್ನೂ ಅವರು ನಿರ್ವಹಿಸಿದ್ದಾರೆ. ನಾಟಕ ರೂಪ ಪಡೆದು ಅನೇಕ ಪ್ರದರ್ಶನಗಳನ್ನು ಕಂಡಿದ್ದ ಈ ಕಥೆಗೆ ಸಿನಿಮಾ ಸ್ಪರ್ಶ ನೀಡಲಾಗಿದೆ..

ಚಿತ್ರದ ಪ್ರೀಮಿಯರ್ ಪ್ರದರ್ಶನ ಮತ್ತು ಹಾಡುಗಳ ದನಿಮುದ್ರಿಕೆ ಸಮಾರಂಭವನ್ನು ಒಟ್ಟಿಗೆ ಆಯೋಜಿಸಿತ್ತು ಚಿತ್ರತಂಡ. ಸಂಕಲನಕಾರ ಮುರಳಿ ಗುರಪ್ಪ ಮತ್ತು ಮಂಜುಳಾ ಸೋಮಶೇಖರ್ ಚಿತ್ರದ ನಿರ್ಮಾಪಕರು. ಸಂಗೀತ ನಿರ್ದೇಶಕರಾದ ಹಂಸಲೇಖ ಮತ್ತು ಶಿವಮಣಿ ಜಂಟಿಯಾಗಿ ಹಾಡುಗಳ ಸಿ,ಡಿ. ಬಿಡುಗಡೆ ಮಾಡಿದರು.

`ಕಳವು' ರಂಗರೂಪಾಂತರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಉಮಾಶ್ರೀ ಸಿನಿಮಾದಲ್ಲೂ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವಿನಾಶ್ (ಜುಗಾರಿ), ಕರಿಸುಬ್ಬು,  ಭವಾನಿ ಪ್ರಕಾಶ್, ರಂಗಭೂಮಿ ನಟ ಹುಲಗೆಪ್ಪ ಕಟ್ಟಿಮನಿ, ಶಿವಾಜಿ ರಾವ್‌ಜಾದವ್ ಮುಂತಾದ ಕಲಾವಿದರ ಬಳಗ ಚಿತ್ರದಲ್ಲಿದೆ.

ಕೋಲಾರದ ಮಾಲೂರಿನ ಸುತ್ತಮುತ್ತಲ ಐದು ಹಳ್ಳಿಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದ್ದು, ಮಾಜಿ ಮುಖ್ಯಮಂತ್ರಿ ದಿ. ಕೆ.ಸಿ.ರೆಡ್ಡಿ ಅವರು ವಾಸಿಸಿದ್ದ ಮನೆಯನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗಿದೆ. ತಮಿಳು ಮತ್ತು ತೆಲುಗು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಎಸ್.ಚಿನ್ನ `ಕಳವು' ಹಾಡುಗಳಿಗೆ ಸಂಗೀತ ಹೊಸೆದಿದ್ದಾರೆ.

ಬಿ. ಸುರೇಶ್, ವಿಶ್ವಪ್ರಸಾದ್, ಲಿಂಗರಾಜು ಮುಂತಾದ ನಿರ್ದೇಶಕರ ಬಳಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳ ರವಿ ಅನೇಕ ಜಾಹೀರಾತುಗಳಿಗೆ ಕಲಾ ನಿರ್ದೇಶಕರಾಗಿ ದುಡಿದವರು. ಸಿನಿಮಾ ನಿರ್ದೇಶನದ ಬಹುದಿನಗಳ ಬಯಕೆಗೆ ನೀರೆರೆದು ಪೋಷಿಸಿದವರು ಸಂಕಲನಕಾರ ಮುರಳಿ ಗುರಪ್ಪ. ಜೊತೆಗೂಡಿ ಹುಟ್ಟುಹಾಕಿರುವ ಸಂಸ್ಥೆ ಮೂಲಕ ಮೊದಲ ಸಿನಿಮಾ ಸಿದ್ಧಪಡಿಸಿರುವ ಅವರು ಶೀಘ್ರದಲ್ಲೇ ಚಿತ್ರವನ್ನು ತರೆಗಾಣಿಸುವ ಉದ್ದೇಶ ಹೊಂದಿದ್ದಾರೆ.

ಗಂಭೀರ ಕಥನದ ಚಿತ್ರದ ಬಳಿಕ ಪರಿಪೂರ್ಣ ವ್ಯಾಪಾರೀ ಚಿತ್ರವನ್ನು ಮಾಡುವುದು ರವಿ ಅವರ ಹಂಬಲ. ಬಹುತಾರಾಗಣದ ಈ ಸಿನಿಮಾವನ್ನು ಮುರಳಿ ಗುರಪ್ಪ ನಿರ್ದೇಶಿಸಲಿದ್ದಾರೆ, ನಾನು ಅವರೊಂದಿಗೆ ಕೈ ಜೋಡಿಸುತ್ತೇನೆ ಎನ್ನುವುದು ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.