ADVERTISEMENT

‘ರಾಜರಥ’ದ ಸವಾರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
ರಾಜರಥ ಸಿನಿಮಾದ ದೃಶ್ಯ
ರಾಜರಥ ಸಿನಿಮಾದ ದೃಶ್ಯ   

‘ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ. ಟ್ರೇಲರ್‌ ನೋಡಿದವರಿಗೆ ಚಿತ್ರದಲ್ಲಿ ಇನ್ನೊಂದು ಮುಖ ಇರುವುದು ಅರಿವಾಗುತ್ತದೆ’ ಎಂದು ಮಾತಿಗಿಳಿದರು ನಿರ್ದೇಶಕ ಅನೂಪ್‌ ಭಂಡಾರಿ.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಚಿತ್ರ ತೆರೆಕಾಣುತ್ತಿದೆ. ‘ರಂಗಿತರಂಗ’ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ಚಿತ್ರತಂಡಕ್ಕೆ ಎರಡೂ ರಾಜ್ಯಗಳಲ್ಲಿ ರಾಜರಥ ಯಾವುದೇ ಅಡೆತಡೆ ಇಲ್ಲದೆ ಚಲಿಸಲಿದೆ ಎನ್ನುವ ವಿಶ್ವಾಸವಿದೆ. ಎರಡು ವಾರದ ಬಳಿಕ ವಿದೇಶಗಳಲ್ಲೂ ರಥ ಎಳೆಯಲು ತಂಡ ಸಿದ್ಧತೆಯಲ್ಲಿ ಮುಳುಗಿದೆ.

ತೆಲುಗು, ತಮಿಳು ಚಿತ್ರಗಳಂತೆ ಕನ್ನಡ ಚಿತ್ರಗಳಿಗೂ ಹೊರದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸುವ ಗುರಿ ಇದೆ. ಈ ವಾರ ರಾಜ್ಯದಾದ್ಯಂತ ಚಿತ್ರ ತೆರೆಕಾಣುತ್ತಿದ್ದು, ಇದರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿಗೆ ಸಜ್ಜಾಗಿ ಬಂದಿತ್ತು.

ADVERTISEMENT

‘ರಾಜರಥ’ ಬಸ್‌ನ ಕಥೆ. ಕನ್ನಡದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಬಸ್‌ಗೆ ಧ್ವನಿಯಾಗಿದ್ದಾರೆ. ತೆಲುಗಿನಲ್ಲಿ ರಾ.ನಾ. ದಗ್ಗುಬಾಟಿ ಧ್ವನಿ ನೀಡಿದ್ದಾರೆ. ಇದು ಕೌಟುಂಬಿಕ ಚಿತ್ರ. ಕಾಲೇಜು ಹುಡುಗ ಮತ್ತು ಹುಡುಗಿಯ ನಡುವೆ ನಡೆಯುವ ಕಥನ’ ಎಂದು ವಿವರಿಸಿದರು ಅನೂಪ್.

ಚಿತ್ರದಲ್ಲಿ ರವಿಶಂಕರ್‌ ಅವರದ್ದು ಭಿನ್ನವಾದ ಪಾತ್ರವಂತೆ. ಯುರೋಪಿಯನ್‌ ಶೈಲಿಯಲ್ಲಿ ಒಂದು ಹಾಡಿಗೆ ಅನೂಪ್‌ ಅವರೇ ಕಂಠದಾನ ಮಾಡಿದ್ದಾರೆ. ಆ ಹಾಡಿನ ಮಹತ್ವವೇನೆಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕಂತೆ.

ನಾಯಕ ನಿರೂಪ್‌ ಭಂಡಾರಿ, ‘ಚಿತ್ರದಲ್ಲಿ ನನ್ನದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಪಾತ್ರ. ಆತನಿಗೆ ಸಿನಿಮಾವೆಂದರೆ ಹುಚ್ಚು. ಅವನ ಮಾತುಗಳಲ್ಲೂ ಸಿನಿಮಾವೇ ಮೇಳೈಸಿರುತ್ತದೆ. ಮೇಘಾ ಎಂಬಾಕೆ ಮೇಲೆ ನನಗೆ ಪ್ರೀತಿ ಮೂಡುತ್ತದೆ. ಆದರೆ, ಆಕೆಗೆ ಬೇರೊಬ್ಬ ಹುಡುಗನ ಮೇಲೆ ಮನಸ್ಸಿರುತ್ತದೆ’ ಎಂದು ಪಾತ್ರದ ಗುಟ್ಟು ಬಿಚ್ಚಿಟ್ಟರು.

ನಾಯಕಿ ಆವಂತಿಕಾ ಶೆಟ್ಟಿ ಈ ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದಾರಂತೆ. ‘ರಂಗಿತರಂಗ ಚಿತ್ರ ತಂಡದೊಂದಿಗೆ ಮತ್ತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದು ಹೇಳಿಕೊಂಡರು. ನಟ ಆರ್ಯ ಚಿತ್ರದಲ್ಲಿ ನಟಿಸಿದ್ದಾರೆ. ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಶು ಡಾಕಪ್ಪಗಾರಿ, ಸತೀಶ್ ಶಾಸ್ತ್ರಿ ಬಂಡವಾಳ ಹೂಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ


ಅನೂಪ್‌ ಭಂಡಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.