ADVERTISEMENT

ರಿಂಗ್ ರೋಡ್‌ನಲ್ಲಿನ್ನು ರಗಳೆಯಿಲ್ಲ!

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಮೊದಲು ‘ಶುಭ’, ಆಮೇಲೆ ‘ಸುಮ’. ಅದಕ್ಕೂ ಒಪ್ಪಿಗೆ ಸಿಗದೇ ಹೋದಾಗ ‘ಗೀತಾ’... ಹೀಗೆ ಹಲವು ಹೆಸರುಗಳು ಪ್ರಸ್ತಾಪವಾದವು. ಸೆನ್ಸಾರ್ ಮಂಡಳಿ ಖಡಕ್ಕಾಗಿ ಅವನ್ನೆಲ್ಲ ಒಪ್ಪುವುದಿಲ್ಲ ಎಂಬುದು ಗೊತ್ತಾದಾಗ, ‘ನಮ್ಮದು ಬರೀ ರಿಂಗ್ ರೋಡ್’ ಎಂದು ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಪ್ರಕಟಿಸಿದ್ದಾರೆ.

ಬರೀ ಮಹಿಳೆಯರೇ ಸೇರಿ ಮಾಡಿರುವ ‘ರಿಂಗ್ ರೋಡ್’ ಸಿನಿಮಾದ ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿದ್ದು ಹಳೆಯ ಸಂಗತಿ. ಅವನ್ನೆಲ್ಲ ಪರಿಹರಿಸಿಕೊಂಡು, ಶೂಟಿಂಗ್ ಮುಗಿಸಿ ಸೆನ್ಸಾರ್ ಎದುರು ಸಿನಿಮಾದ ಪ್ರತಿ ಇಟ್ಟರೆ, ಶೀರ್ಷಿಕೆಯೇ ಇನ್ನೊಂದು ದೊಡ್ಡ ಅಡ್ಡಿಯಾಗಬೇಕೇ? ಬಿಡುಗಡೆಗೆ ಸಿದ್ಧತೆ ನಡೆಸಿರುವ ಚಿತ್ರತಂಡ, ಇನ್ನಾವ ರಗಳೆಯೂ ಬೇಡವೆಂದು ‘ರಿಂಗ್ ರೋಡ್’ ಎಂದಷ್ಟೇ ಶೀರ್ಷಿಕೆಯೊಂದಿಗೆ ಸಿನಿಮಾವನ್ನು ತೆರೆ ಕಾಣಿಸಲಿದೆ.

ಜುಲೈ 10ಕ್ಕೆ ಚಿತ್ರ ತೆರೆ ಕಾಣಲಿದೆ ಎಂಬುದಾಗಿ ಭರ್ಜರಿ ಪ್ರಚಾರ ಮಾಡಿದ್ದ ಪ್ರಿಯಾ ಹಾಗೂ ಅವರ ತಂಡ, ‘ಈಗ ಅದು ಸಾಧ್ಯವಾಗುತ್ತಿಲ್ಲ’ ಎಂಬುದನ್ನು ಹೇಳಲು ಸುದ್ದಿಮಿತ್ರರನ್ನು ಆಹ್ವಾನಿಸಿದ್ದರು. ‘ಮಹಿಳಾ ತಂಡದ ಈ ವಿನೂತನ ಪ್ರಯತ್ನಕ್ಕೆ ನಮಗೆ ಪ್ರೋತ್ಸಾಹ ಸಿಕ್ಕಿತ್ತು. ಅನೇಕ ಸ್ಟಾರ್‌ ನಟರು ಬಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಗೆ ಎಲ್ಲ ತರಹದ ಸಿದ್ಧತೆ ನಡೆಸಿದ್ದೆವು. ಆದರೆ ಇಂಥದೊಂದು ಒಳ್ಳೆಯ ಸಿನಿಮಾಕ್ಕೆ ಇಷ್ಟೊಂದು ಅಡೆತಡೆ ಯಾಕೋ?’ ಎಂದು ನಿರ್ಮಾಪಕಿ ರಂಜನಿ ರವೀಂದ್ರ ಬೇಸರ ವ್ಯಕ್ತಪಡಿಸುತ್ತಾರೆ.

‘ಶುಭ’ ಎಂಬ ಹೆಸರನ್ನು ಸುಮಾ ಎಂದು ಬದಲಾಯಿಸಿದಾಗ, ಅದಕ್ಕೆಂದೇ ಒಂದಷ್ಟು ಭಾಗ ಮರುಚಿತ್ರೀಕರಣ ಮಾಡಲಾಗಿದೆ. ಬಳಿಕ ‘ರಿಂಗ್‌ ರೋಡ್ ಸುಮ’ ಎಂಬ ಶೀರ್ಷಿಕೆಯೊಂದಿಗೆ ಟ್ರೇಲರ್, ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈಗ ಅದಕ್ಕೂ ತಡೆಬಿಡ್ಡಿದೆ. ಇದರಿಂದ ಆ ಪೋಸ್ಟರ್‌ಗಳೆಲ್ಲ ವ್ಯರ್ಥವಾಗಿ, ಸುಮಾರು ಮೂವತ್ತು ಲಕ್ಷ ರೂಪಾಯಿ ಕೈಬಿಟ್ಟಂತೆ!

ಅಷ್ಟಕ್ಕೂ ‘ಸುಮಾ’ ಎಂಬ ಹೆಸರನ್ನು ಉಳಿಸಿಕೊಳ್ಳಲು ಹೋರಾಟ ಮಾಡಬಹುದಿತ್ತಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಹೋರಾಟ ಮಾಡಿದರೆ ನಾವು ಗೆಲ್ಲಬಹುದಾಗಿತ್ತು. ಆದರೆ ಅಷ್ಟು ಸಮಯ ನಮ್ಮಲ್ಲಿಲ್ಲ. ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿ ಎಂಬ ಉದ್ದೇಶದಿಂದ ಶೀರ್ಷಿಕೆಯನ್ನು ಬದಲಾಯಿಸಿಕೊಂಡೆವು’ ಎಂದು ಕಥೆ, ಸಂಭಾಷಣೆ ಬರೆದಿರುವ ರೇಖಾ ರಾಣಿ ಹೇಳುತ್ತಾರೆ.

ಆರು ಘಟನೆಗಳನ್ನು ಆಯ್ದುಕೊಂಡು, ಕಥೆ ಹೆಣೆದು ಸಿದ್ಧಪಡಿಸಿದ ‘ರಿಂಗ್‌ ರೋಡ್‌’ಗೆ ಸೆನ್ಸಾರ್‌ ಮಂಡಳಿಯು ಯು/ಎ ಪ್ರಮಾಣಪತ್ರ ನೀಡಿದೆ. ಇದೇ ತಿಂಗಳ ಕೊನೆಯ ವಾರ ಚಿತ್ರ ತೆರೆ ಕಾಣಲಿದೆ ಎಂದು ಪ್ರಿಯಾ ಬೆಳ್ಳಿಯಪ್ಪ ಮಾಹಿತಿ ನೀಡಿದರು. ಕಲಾ ನಿರ್ದೇಶಕಿ ಚಂದ್ರಕಲಾ, ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಇತರರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT