ADVERTISEMENT

ಶಕ್ತಿ ಯುಕ್ತಿ ಭಕ್ತಿಗಳ ಸಂಗಮ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:30 IST
Last Updated 16 ಮಾರ್ಚ್ 2017, 19:30 IST
ಶಕ್ತಿ ಯುಕ್ತಿ ಭಕ್ತಿಗಳ ಸಂಗಮ
ಶಕ್ತಿ ಯುಕ್ತಿ ಭಕ್ತಿಗಳ ಸಂಗಮ   
‘‘ವೇಶ್ಯಾವಾಟಿಕೆ ನನ್ನನ್ನು ಯಾವತ್ತೂ ಕಾಡುವ ಸಂಗತಿಯಾಗಿತ್ತು. ಅಲ್ಲಿನ ಜನರ ಬದುಕು, ಅವರನ್ನು ನೋಡುವ ಸಮಾಜದ ದೃಷ್ಟಿಕೋನ ಎಲ್ಲವನ್ನೂ ಇಟ್ಟುಕೊಂಡು ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾದಲ್ಲಿ ಅನಾವರಣಗೊಳಿಸಿದ್ದೇವೆ. ನಮ್ಮ ಶ್ರಮ ಮತ್ತು ಕಾಳಜಿಗೆ ಪ್ರತಿಫಲವಾಗಿ ಸೆನ್ಸಾರ್‌ ಮಂಡಳಿಯಿಂದ ‘ಎ’ ಪ್ರಮಾಣಪತ್ರ ದೊರಕಿದೆ. ಇದರಿಂದ ನಮಗೇನೂ ಬೇಸರವಿಲ್ಲ’’.
 
ಮಾತಿನಲ್ಲಿ ಬೇಸರವಿಲ್ಲ ಎಂದು ಹೇಳಿದರೂ ‘ಉರ್ವಿ’ ಸಿನಿಮಾದ ನಿರ್ದೇಶಕ ಪ್ರದೀಪ್‌ ವರ್ಮ ಅವರ ಧ್ವನಿಯಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತಿತ್ತು. ‘ವೇಶ್ಯೆಯರ ಬದುಕನ್ನು ಮುಖ್ಯವಾಹಿನಿಯಲ್ಲಿ ತೋರಿಸುವುದೇ ತಪ್ಪೇ’ ಎಂಬ ಪ್ರಶ್ನೆಯೂ ಅವರನ್ನು ಕಾಡಿದೆ.
 
ಕಳೆದ ಒಂದು ವರ್ಷದ ಅವರ ಕನಸು ‘ಉರ್ವಿ’ ಇಂದು (ಮಾರ್ಚ್‌ 17) ಬಿಡುಗಡೆಯಾಗುತ್ತಿದೆ. ‘ಸಮಾಜದಲ್ಲಿ ತಮ್ಮ ಬದುಕಿನಲ್ಲಿ ಎದುರಾದ ಪರಿಸ್ಥಿತಿಗಳನ್ನು ದಿಟ್ಟವಾಗಿ ಎದುರಿಸಿ ಬದುಕುವ ಮೂವರು ಹೆಣ್ಣುಮಕ್ಕಳ ಕಥೆ ಇದು’ ಎಂದು ನಿರ್ದೇಶಕರು ‘ಉರ್ವಿ’ಯನ್ನು ವ್ಯಾಖ್ಯಾನಿಸುತ್ತಾರೆ.
 
ಈ ಸಿನಿಮಾದ ಮೂವರು ಹೆಣ್ಣುಮಕ್ಕಳು ದೇವಿ ದುರ್ಗಿಯ ಕೈಯ ತ್ರಿಶೂಲದ ಮೂರು ಮೊನೆಗಳನ್ನು ಸಂಕೇತಿಸುತ್ತಾರಂತೆ. ‘ಯುಕ್ತಿ ಭಕ್ತಿ ಶಕ್ತಿ–ಈ ಮೂರನ್ನು ಹತೋಟಿಯಲ್ಲಿಟ್ಟುಕೊಂಡಾಗ ನಾವು ಪರಿಪೂರ್ಣ ವ್ಯಕ್ತಿಯಾಗುತ್ತೇವೆ. ಇದನ್ನೇ ಸಿನಿಮಾದಲ್ಲಿ ಹೇಳಹೊರಟಿದ್ದೇವೆ’ ಎಂದು ಪ್ರದೀಪ್‌ ವಿವರಿಸಿದರು.
 
ವೇಶ್ಯಾವಾಟಿಕೆಯ ಕಗ್ಗತ್ತಲ ಲೋಕವನ್ನು ಚಿತ್ರದಲ್ಲವರು ಅನಾವರಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್‌ ನಟಿಸಿರುವ ಪಾತ್ರಕ್ಕೆ ‘ಚಂದ್ರಿಕಾ’ ಎಂಬ ಕಾಮಾಟಿಪುರದ ಹೆಣ್ಣುಮಗಳೇ ಸ್ಫೂರ್ತಿಯಂತೆ.
 
ಶ್ರುತಿ ಹರಿಹರನ್‌, ಶ್ರದ್ಧಾ ಶ್ರೀನಾಥ್‌ ಹಾಗೂ ಶ್ವೇತಾ ಪಂಡಿತ್‌ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಚ್ಯುತ್‌ಕುಮಾರ್‌ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಭವಾನಿ ಪ್ರಕಾಶ್‌ ವಿಶೇಷ ಪಾತ್ರಕ್ಕೆ ಜೀವತುಂಬಿದ್ದಾರೆ.
 
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಶ್ವೇತಾ ಪಂಡಿತ್‌ ‘ನಾವು ಹೆಣ್ಣು ಎಂಬ ಕಾರಣಕ್ಕೆ ಕೆಲವು ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಅಂಥ ಪರಿಸ್ಥಿತಿಗಳ ಕುರಿತಾದ ಸಿನಿಮಾ ಇದು. ನನ್ನ ಬದುಕಿಗೆ–ಮನಸ್ಸಿಗೆ ಹತ್ತಿರವಾದ ಪಾತ್ರ’ ಎಂದು ಹೇಳಿದರು.
 
ಇನ್ನೋರ್ವ ನಟ ಮಧುಕರ್‌ ಅವರೂ ಇದೊಂದು ವಿಭಿನ್ನವಾದ ಸಿನಿಮಾ ಎಂದು ಹೇಳಿ ಮಾತು ಮುಗಿಸಿದರು. ‘ರಾಮಾ ರಾಮಾ ರೇ...’ ಸಿನಿಮಾ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ‘ಉರ್ವಿ’ಯಲ್ಲಿ ನಟಿಸಿದ್ದಾರೆ. ಮನೋಜ್‌ ಜಾರ್ಜ್‌ ಸಂಗೀತ, ಆನಂದ್‌ ಸುಂದರೇಶ್‌ ಛಾಯಾಗ್ರಹಣ ಇರುವ ಈ ಸಿನಿಮಾವನ್ನು ಆರ್‌.ಪಿ. ಭಟ್‌ ನಿರ್ಮಿಸಿದ್ದಾರೆ.                                                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.