ADVERTISEMENT

ಶಿವಣ್ಣನ ಕೇಕು!

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಹ್ಯಾಟ್ರಿಕ್‌ ಹೀರೋ ಶಿವಣ್ಣ ಮೊನ್ನೆ ಕೈಗವಸು, ಏಪ್ರನ್‌ ಮತ್ತು ಬಾಣಸಿಗನ ಟೊಪ್ಪಿ ಹಾಕಿಕೊಂಡು ಹೋಟೆಲ್‌ ಒಂದರಲ್ಲಿ ಡ್ರೈಫ್ರೂಟ್ಸ್‌ನೊಳಕ್ಕೆ ಬ್ರ್ಯಾಂಡಿ, ವೈನ್‌ ಸುರಿಯುತ್ತಾ ಪೋಸು ಕೊಡುತ್ತಿದ್ದರು.

ಅರೆ! ಇದೇನು, ಬೆಳ್ಳಿತೆರೆಯ ಮೇಲೆ ಲಾಂಗ್ ಝಳಪಿಸುವ ಶಿವಣ್ಣ ಈಗ ಬಾಣಸಿಗನ ವೇಷ ತೊಟ್ಟು ಬರುತ್ತಿದ್ದಾರಾ ಎಂದು ಕನ್‌ಫ್ಯೂಸ್‌ ಆಗಬೇಡಿ. ಇದು ಅವರ ಹೊಸ ಸಿನಿಮಾದ ಗೆಟಪ್‌ ಅಲ್ಲ. ಬದಲಿಗೆ, ಕ್ರಿಸ್‌ಮಸ್‌ ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಕೇಕ್‌ ಮಿಕ್ಸಿಂಗ್‌ ಕಾರ್ಯಕ್ರಮಕ್ಕಾಗಿ ಅವರು ಈ ದಿರಿಸು ತೊಟ್ಟಿದ್ದರು. 

ಅಂದಹಾಗೆ, ಕ್ರಿಸ್‌ಮಸ್‌ ಹಬ್ಬಕ್ಕೆ ಈಗ ದಿನಗಣನೆ ಶುರುವಾಗಿದೆ. ಈ ಹಬ್ಬದ ಪ್ರಮುಖ ತಿನಿಸು ವೈವಿಧ್ಯಮಯ ಕೇಕ್‌ಗಳು. ಬಗೆಬಗೆ ವಿನ್ಯಾಸ ಮತ್ತು ಸ್ವಾದದಲ್ಲಿ ಮೈದಳೆಯುವ ಕೇಕ್‌ ಮಿಕ್ಸಿಂಗ್‌ ಚಟುವಟಿಕೆಗಳು ಈಗ ಎಲ್ಲೆಡೆ ಗರಿಬಿಚ್ಚಿಕೊಳ್ಳುತ್ತಿವೆ. ಅಂತಹ ಒಂದು ಕಾರ್ಯಕ್ರಮ ಯಶವಂತಪುರ ಬಳಿ ಇರುವ ಮೂವೆನ್‌ಪಿಕ್‌ ಹೋಟೆಲ್‌ನಲ್ಲಿ ಈಚೆಗೆ ನಡೆಯಿತು.

ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜ್‌ ಕುಮಾರ್‌ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಕೇಕ್‌ ಮಿಕ್ಸಿಂಗ್‌ನಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ತಾರಾ ಮೆರುಗು ತುಂಬಿದರು. ಶಿವಣ್ಣ ದಂಪತಿ ಕೇಕ್‌ ಮಿಶ್ರಣದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಅತಿಥಿಗಳೊಂದಿಗೆ ಸಂವಾದವನ್ನೂ ನಡೆಸಿದರು.

ಅದಕ್ಕೂ ಮುನ್ನ ಶಿವಣ್ಣ ಮತ್ತು ಗೀತಾ ಶಿವರಾಜ್‌ ಕುಮಾರ್‌ ಅವರು ಬಾಣಸಿಗರ ದಿರಿಸು ತೊಟ್ಟು ಕೇಕ್‌ ಮಿಕ್ಸಿಂಗ್‌ ಮಾಡಿ ಖುಷಿಪಟ್ಟರು. ಇಟ್ಟಿಗೆ ತಯಾರಿಸುವ ಬಾಕ್ಸ್ ಮಾದರಿಯಲ್ಲಿದ್ದ ಉದ್ದದ  ಟೇಬಲ್‌ನೊಳಕ್ಕೆ ಡ್ರೈಫ್ರೂಟ್ಸ್‌, ನಟ್ಸ್‌ ಹಾಗೂ ಮಸಾಲ ಪದಾರ್ಥಗಳು ಹಾಗೂ ವಿವಿಧ ಬಗೆಯ ಬ್ರ್ಯಾಂಡಿ ಮತ್ತು ವೈನ್‌ಗಳನ್ನು ಸುರಿದು ಮಿಶ್ರಣ ಮಾಡಿದರು. ಆನಂತರ ಅದಕ್ಕೆ ಹಣ್ಣುಗಳನ್ನು ಹಾಕಿ ಕೇಕ್‌ ಮಿಕ್ಸಿಂಗ್‌ ಕಾರ್ಯಕ್ರಮ ಮುಗಿಸಿದರು.

ಹೋಟೆಲ್‌ನ ಬಾಣಸಿಗರ ಮಾರ್ಗದರ್ಶನದಲ್ಲಿ ಈ ಕೇಕ್‌ ಮಿಕ್ಸಿಂಗ್‌ ನಡೆಯಿತು. ಎಲ್ಲ ಮುಗಿದ ನಂತರ ಆ ಕೇಕ್‌ ಮೇಲೆ ಮೂವೆನ್‌ಪಿಕ್‌ ಹೆಸರು ಬರೆದು ಅದರ ರುಚಿ ನೂರ್ಮಡಿಗೊಳಿಸುವ ಉದ್ದೇಶದಿಂದ ಅದನ್ನು 80ದಿನ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇರಿಸಲಾಯಿತು. ಶಿವಣ್ಣ ದಂಪತಿಯೊಂದಿಗೆ ಕೇಕ್‌ ಮಿಶ್ರಣ ಮಾಡಿದ ಸಂಭ್ರಮ ಅಲ್ಲಿ ಭಾಗವಹಿಸಿದ್ದ ಇತರೆ ಅತಿಥಿಗಳಿಗೆ ಲಭಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT