ADVERTISEMENT

ಶಿವನಿಗೆ ಮೊರೆಹೋದ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST
ವೇದಿಕಾ, ಶಿವರಾಜ್‌ಕುಮಾರ್
ವೇದಿಕಾ, ಶಿವರಾಜ್‌ಕುಮಾರ್   

‘ಸಿಐಡಿ ರಾಜಣ್ಣ’ ಹಾಗೂ ‘ಆಪರೇಶನ್ ಡೈಮೆಂಡ್ ರಾಕೆಟ್’ ವರನಟ ರಾಜ್‌ಕುಮಾರ್ ಅವರು ಬಾಂಡ್‌ ಪಾತ್ರದಲ್ಲಿ ಕಾಣಿಸಿಕೊಂಡು ರಸಿಕರ ಮನಸೂರೆಗೊಂಡ ಚಿತ್ರಗಳು. ಈಗ ಅವರ ಪುತ್ರ ಶಿವರಾಜ್‌ಕುಮಾರ್ ಮೊದಲ ಬಾರಿಗೆ ಸಿಐಡಿ ಅಧಿಕಾರಿ ಪೋಷಾಕು ತೊಟ್ಟಿದ್ದಾರೆ! ಅಂದಹಾಗೆ ಈ ಸಿಐಡಿ ವೇಷ ತೊಡಿಸುತ್ತಿರುವುದು ‘ಶಿವಲಿಂಗ’ ಚಿತ್ರ. ಶಿವಲಿಂಗನಿಗೆ ಚಾಲನೆ ಸಿಕ್ಕಿದ ಸಂದರ್ಭದಲ್ಲಿ ಶಿವಣ್ಣ ನೆನಪು ಮಾಡಿಕೊಂಡಿದ್ದು ರಾಜ್ ಅವರ ಸಿಐಡಿ ಗೆಟಪ್ಪುಗಳನ್ನು.

‘ನಾನು ಮತ್ತು ವಾಸು 20 ವರುಷದ ಗೆಳೆಯರು. ರಥಸಪ್ತಮಿ ಚಿತ್ರಕ್ಕೆ ಅವರು ಚಿತ್ರಕಥೆ ಬರೆದಿದ್ದರು. ಪ್ರತಿ ಜನರೇಷನ್‌ಗೂ ಯಾವ ರೀತಿ ಕಥೆ ಹೊಂದಿಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಇಷ್ಟು ದಿನಗಳಲ್ಲಿ ನಾನು ಕಾಣಿಸಿಕೊಳ್ಳದೇ ಇದ್ದ ಸಿಐಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿನ ಒಂದೊಂದು ಪಾತ್ರಕ್ಕೂ ಪರಸ್ಪರ ಸಂಬಂಧ ಇದೆ. ನನ್ನ ‘ಕಡ್ಡಿಪುಡಿ’ ಚಿತ್ರದ ನಂತರ ಹರಿಕೃಷ್ಣ ಶಿವಲಿಂಗುವಿಗೆ ಸಂಗೀತ ಕೊಡುತ್ತಿದ್ದಾರೆ’ ಎಂದರು ಶಿವರಾಜ್‌ಕುಮಾರ್.

‘ಶಿವಲಿಂಗ’ ಚಿತ್ರದ ನಿರ್ದೇಶನ ಪಿ. ವಾಸು ಅವರದು. ಈ ಮೊದಲು ‘ದೃಶ್ಯ’ ಚಿತ್ರವನ್ನು ಶಿವಣ್ಣನಿಗೆ ನಿರ್ದೇಶಿಸಲು ವಾಸು ಉದ್ದೇಶಿಸಿದ್ದರಂತೆ. ಆದರೆ ನಿರ್ಮಾಪಕರ ಬದಲಾವಣೆಯಿಂದ ನಟರೂ ಬದಲಾದರಂತೆ. ‘ನಾನು ಶಿವಣ್ಣಗೆ ಚಿತ್ರವನ್ನು ನಿರ್ದೇಶಿಸಲು ಈಗ ಕಾಲ ಕೂಡಿ ಬಂದಿದೆ’ ಎಂದರು ವಾಸು. ‘ನನ್ನ ನಿರ್ಮಾಣದ ಮತ್ತು ಶಿವರಾಜ್ ನಟನೆಯ ‘ಖದರ್’ ಚಿತ್ರವೇ ಮೊದಲು ಸೆಟ್ಟೇರಬೇಕಿತ್ತು. ‘ಖದರ್’ ಕಥೆ ಕೇವಲ ಸಿನಿಮಾ ಆಸಕ್ತರಿಗೆ ಇಷ್ಟವಾದರೆ, ಶಿವಲಿಂಗ ಎಲ್ಲರೂ ಮೆಚ್ಚುವ ಸಿನಿಮಾ’ ಎಂದರು ನಿರ್ಮಾಪಕ ಕೆ.ಎ. ಸುರೇಶ್.

‘ಸಂಘಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಗಿಟ್ಟಿಸಿಕೊಂಡ ವೇದಿಕಾ ‘ಶಿವಲಿಂಗ’ ಚಿತ್ರದ ನಾಯಕಿ. ‘ಸ್ಟಾರ್ ನಟರು ಮತ್ತು ತಂತ್ರಜ್ಞರ ಜತೆ ಕೆಲಸ ಮಾಡಲು ಸಿಕ್ಕ ಅವಕಾಶದಿಂದ ಖುಷಿಯಲ್ಲಿರುವೆ’ ಎಂದು ಸಂತಸ ಹಂಚಿಕೊಂಡರು ವೇದಿಕಾ.
ವಿ. ನಾಗೇಂದ್ರ ಪ್ರಸಾದ್‌ ‘ಶಿವಲಿಂಗ’ನಿಗೆ ಹಾಡು ಮತ್ತು ಸಂಭಾಷಣೆ ಬರೆದಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ನಟ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎಚ್‌.ಡಿ. ಗಂಗರಾಜು, ಗೀತಾ ಶಿವರಾಜ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT