ADVERTISEMENT

ಶೇಷಾದ್ರಿ–ಬೊಳುವಾರರ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2016, 19:30 IST
Last Updated 1 ಡಿಸೆಂಬರ್ 2016, 19:30 IST
ಶೇಷಾದ್ರಿ–ಬೊಳುವಾರರ  ಭೇಟಿ
ಶೇಷಾದ್ರಿ–ಬೊಳುವಾರರ ಭೇಟಿ   

ನಿರ್ದೇಶಕ ಪಿ. ಶೇಷಾದ್ರಿ ಪ್ರೇಕ್ಷಕರನ್ನು ಮತ್ತೆ ‘ಭೇಟಿ’ಯಾಗುವ ತವಕದಲ್ಲಿದ್ದಾರೆ. ನಿರ್ದೇಶಕರೊಬ್ಬ ಚಿತ್ರರಸಿಕರನ್ನು ಭೇಟಿ ಆಗುವುದೆಂದರೆ ಅದು ಹೊಸ ಸಿನಿಮಾದ ಸುದ್ದಿ ಎಂದೇ ಅರ್ಥ. ಹೌದು, ಶೇಷಾದ್ರಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿಸಿದ್ದಾರೆ. ಉಳಿದಿರುವುದು ಚಿತ್ರವನ್ನು ನೇರ್ಪುಗೊಳಿಸುವ ಅಂತಿಮಹಂತದ ಕೆಲಸ.

‘ಭೇಟಿ’ ಎನ್ನುವುದು ಶೇಷಾದ್ರಿ ಅವರ ಹೊಸ ಸಿನಿಮಾದ ಶೀರ್ಷಿಕೆ ಕೂಡ ಹೌದು. ಈ ಶೀರ್ಷಿಕೆ ಮುಖಾಮುಖಿಯನ್ನಷ್ಟೇ ಸೂಚಿಸುತ್ತಿಲ್ಲ. ಕೊಂಚ ದನಿ ತಗ್ಗಿಸಿದರೆ, ‘ಮಗಳು’ ಎನ್ನುವ ಅರ್ಥವನ್ನೂ ಈ ‘ಭೇಟಿ’ (‘ಬೇಟಿ’) ಹೊಂದಿದೆ. ಕಥೆ ಕೂಡ ಈ ಎರಡೂ ಆಯಾಮಗಳನ್ನು ಸೂಚಿಸಲಿದೆ.

ಶೇಷಾದ್ರಿ ಅವರ ಹೊಸ ಸಿನಿಮಾ ಬೊಳುವಾರು ಮಹಮದ್ ಕುಂಞಿ ಅವರ ‘ದೃಷ್ಟಿ’ ಕಥೆಯನ್ನು ಆಧರಿಸಿದೆ. ಹದಿನಾರು ವರ್ಷಗಳ ಹಿಂದೆ ‘ಮುನ್ನುಡಿ’ (2000) ಚಿತ್ರದ ಮೂಲಕ ತಮ್ಮ ಚಿತ್ರಯಾನ ಪ್ರಾರಂಭಿಸಲೂ ಬೊಳುವಾರರ ಕಥನವನ್ನೇ ಶೇಷಾದ್ರಿ ಆಯ್ದುಕೊಂಡಿದ್ದರು. ಈಗ, ವೃತ್ತಿಜೀವನದಲ್ಲೊಂದು ಜಿಗಿತದ ನಿರೀಕ್ಷೆಯಲ್ಲಿರುವ ಅವರು ಮತ್ತೊಮ್ಮೆ ಬೊಳುವಾರರ ಕಥೆಯನ್ನು ಆತುಕೊಂಡಿದ್ದಾರೆ. ಇದು ಶೇಷಾದ್ರಿ ನಿರ್ದೇಶನದ ಹತ್ತನೇ ಸಿನಿಮಾ.

ಇಪ್ಪತ್ತೈದು ವರ್ಷಗಳ ಹಿಂದೆ ಬೊಳುವಾರರ ಬರೆದ ‘ದೃಷ್ಟಿ’ ಕಥೆ ಲಿಂಗ ತಾರತಮ್ಯದ ವಸ್ತುವನ್ನೊಳಗೊಂಡ ಸಿನಿಮಾ. ಈಗಲೂ ಪ್ರಸ್ತುತವೆನ್ನಿಸಿದ ವಸ್ತುವನ್ನು ಶೇಷಾದ್ರಿ ದೃಶ್ಯಮಾಧ್ಯಮಕ್ಕೆ ಅಳವಡಿಸಿದ್ದಾರೆ. ತಲಾಖ್‌ನ ಕುರಿತ ಸೂಕ್ಷ್ಮ ಚರ್ಚೆಯೂ ಸಿನಿಮಾದಲ್ಲಿ ಇದೆಯಂತೆ. ಮುತ್ತುಪ್ಪಾಡಿ ಕರಾವಳಿಯ ಪುಟ್ಟ ಗ್ರಾಮ. ಅಲ್ಲಿನ ದರ್ಜಿ ಮೋನಾಕನ ಮಗಳು ಜುಲೇಖಾ ಹುಟ್ಟಿನಿಂದಲೇ ಮೂಕಿ.

ದುಬೈ ವೀಸಾಕ್ಕೆ ಹಣ ಹೊಂದಾಣಿಕೆಯ ಹುಡುಕಾಟದಲ್ಲಿದ್ದ ಸುಲೈಮಾನ್‌ ಎನ್ನುವ ತರುಣ, ಆ ಹಣವನ್ನು ಪಡೆಯಲಿಕ್ಕಾಗಿ ಜುಲೇಖಾಳನ್ನು ನಿಖಾ ಆಗುತ್ತಾನೆ. ಕೆಲವು ತಿಂಗಳುಗಳ ಸಂಸಾರದ ನಂತರ ಸುಲೈಮಾನ್‌ ದುಬೈಗೆ ಹಾರುತ್ತಾನೆ. ಇತ್ತ ಜುಲೇಖಾ ತಾಯಿಯಾಗುತ್ತಾಳೆ.

ಅಮ್ಮನಾದರೂ ಜುಲೇಖಾಳಿಗೆ ತಾಯ್ತನದ ಆನಂದವನ್ನು ಮುಕ್ತವಾಗಿ ಆನಂದಿಸುವಂತಿಲ್ಲ. ‘ಗಂಡುಮಗುವನ್ನೇ ಹೆರಬೇಕು’ ಎಂದು ಗಂಡ ಹೇಳಿದ್ದ ಮಾತು ಅವಳ ಆನಂದವನ್ನು ಕಸಿದುಕೊಳ್ಳುತ್ತದೆ. ಫೋನ್‌ನಲ್ಲಿ ಮಾತುಕತೆಯ ಸಂದರ್ಭದಲ್ಲಿ ಕೂಡ ‘ಗಂಡುಮಗು’ ಎನ್ನುವ ಸಂದೇಶವೇ ಸುಲೈಮಾನ್‌ಗೆ ಹೋಗುತ್ತದೆ. ಮಗು ಜನಿಸಿದ ಐದು ವರ್ಷಗಳ ನಂಥರ ಸುಲೈಮಾನ್‌ ಊರಿಗೆ ಬರುತ್ತಾನೆ. 

ಅವನನ್ನು ಸಮಾಧಾನಗೊಳಿಸಲಿಕ್ಕಾಗಿ ಹೆಣ್ಣುಮಗುವಿಗೆ ಹುಡುಗನ ವೇಷ ತೊಡಿಸಲಾಗುತ್ತದೆ. ಜುಲೇಖಾಳ ಕುಟುಂಬದೊಂದಿಗೆ ಊರು ಕೂಡ ಈ ಸಂಕಟದ ಸಂದರ್ಭಕ್ಕೆ ಸ್ಪಂದಿಸುತ್ತದೆ. ಆದರೆ, ಸತ್ಯವನ್ನು ಎಷ್ಟು ಸಮಯ ಬಚ್ಚಿಡಲು ಸಾಧ್ಯ? ವಿಷಯ ಸುಲೇಮಾನ್‌ಗೆ ತಿಳಿಯುತ್ತದೆ. ಆ ಸನ್ನಿವೇಶವನ್ನು ಜುಲೇಖಾ ಹೇಗೆ ಎದುರಿಸುತ್ತಾಳೆ? ‘ಭೇಟಿ’ಗೆ ಊರು ಹೇಗೆ ಸ್ಪಂದಿಸುತ್ತದೆ? ಸಲ್ಮಾ–ಸಲ್ಮಾನ್‌ ನಡುವೆ ತೂಗುವ ಬಾಲಕಿಯ ಭವಿಷ್ಯ ಏನು? ಇದೆಲ್ಲವನ್ನೂ ‘ಭೇಟಿ’ ಸಿನಿಮಾ ಚರ್ಚಿಸುತ್ತದೆ.

‘ಡ್ರಾಮಾ ಜೂನಿಯರ್ಸ್‌’ ರಿಯಾಲಿಟಿ ಷೋ ಪರಿಚಯಿಸಿದ ಪ್ರಚಂಡ ಪುಟಾಣಿ ರೇವತಿ ‘ಭೇಟಿ’ಯ ಮುಖ್ಯಪಾತ್ರವಾದ ಸಲ್ಮಾ ಎನ್ನುವ ಬಾಲಕಿಯ ಪಾತ್ರದಲ್ಲಿ. ಅವಳ ತಾಯಿ ಜುಲೇಖಾಳ ಪಾತ್ರದಲ್ಲಿ ‘ರೇಡಿಯೊ ಮಿರ್ಚಿ’ಯ ಸಿರಿ ನಟಿಸಿದ್ದಾರಂತೆ. ಮತ್ತೊಂದು ಮುಖ್ಯಪಾತ್ರದಲ್ಲಿ ಎಂ.ಕೆ. ಮಠ ಕಾಣಿಸಿಕೊಂಡಿದ್ದಾರೆ. ಬೊಳುವಾರರು ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವುದು ‘ಭೇಟಿ’ ಚಿತ್ರದ ಮತ್ತೊಂದು ವಿಶೇಷ. ಬಸಂತಕುಮಾರ್‌ ಪಾಟೀಲ್‌ ನಿರ್ಮಾಣದ ಈ ಚಿತ್ರಕ್ಕೆ ಅಶೋಕ್‌ ಕಶ್ಯಪ್‌ ಛಾಯಾಗ್ರಹಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT