ADVERTISEMENT

ಶ್ರದ್ಧಾ ಗೆಲುವಿನ ಓಟ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2015, 19:30 IST
Last Updated 23 ಫೆಬ್ರುವರಿ 2015, 19:30 IST
ಶ್ರದ್ಧಾ ಗೆಲುವಿನ ಓಟ
ಶ್ರದ್ಧಾ ಗೆಲುವಿನ ಓಟ   

ಶ್ರದ್ಧಾ ಕಪೂರ್ ಅವರಿಗೀಗ ಶುಕ್ರದೆಸೆ. ಅವರು ನಟಿಸಿದ ಚಿತ್ರಗಳೆಲ್ಲವೂ ಗೆಲುವಿನ ನಗು ಬೀರುತ್ತಿರುವುದಷ್ಟೇ ಅಲ್ಲದೇ ಅವರ ಅಭಿನಯದ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ತಮ್ಮ ಮುಂದಿನ ಚಿತ್ರಗಳಾದ ‘ಎಬಿಸಿಡಿ 2’, ‘ರಾಕ್‌ ಆನ್‌ 2’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ವಿಶ್ವಾಸ ಅವರದು. ಈ ಮೂಲಕ ಶ್ರದ್ಧಾ ಕಪೂರ್‌ ವೃತ್ತಿಜೀವನದ ಔನತ್ಯಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ.

ಸಿನಿಮಾಗಳ ಆಯ್ಕೆಯಲ್ಲಿಯೇ ಜಾಣತನ ತೋರುತ್ತಿರುವ ಶ್ರದ್ಧಾ ನಡೆ ಅವರನ್ನು ಗೆಲ್ಲುವ ಕುದುರೆಯಾಗಿಸುವುದರಲ್ಲಿ ಸಂಶಯವಿಲ್ಲ ಎನ್ನುವುದು ಬಾಲಿವುಡ್‌ ಚಿತ್ರವಿಮರ್ಶಕರ ಅಭಿಪ್ರಾಯ. ಈ ಕೆನೆಬಣ್ಣದ ಚೆಲುವೆ ಚಿತ್ರಗಳನ್ನು ಒಪ್ಪಿಕೊಳ್ಳುವಾಗ ಯಾವ ಮಾನದಂಡ ಅನುಸರಿಸುತ್ತಾರೆ ಎಂಬ ಕುರಿತೇ ಚರ್ಚೆಗಳು ಆರಂಭವಾಗಿವೆ.

ಆದರೆ ‘ಈ ಬಗ್ಗೆ ನಿರ್ದಿಷ್ಟ ನಿಯಮಗಳನ್ನೇನೂ ಹಾಕಿಕೊಂಡಿಲ್ಲ. ಉತ್ತಮ ಸ್ಕ್ರಿಪ್ಟ್‌ ಆಯ್ಕೆಯಷ್ಟೇ ನನ್ನ ಆದ್ಯತೆ’ ಎಂಬುದು ಶ್ರದ್ಧಾ ಉತ್ತರ.
‘ಸಿನಿಮಾ ಆಯ್ಕೆಯ ನಿರ್ದಿಷ್ಟ ಮಾನದಂಡದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಇದುವರೆಗೆ ನನಗೆ ಪ್ರತಿಭಾವಂತರ ಜತೆ ಮತ್ತು ಉತ್ತಮ ಸ್ಕ್ರಿಪ್ಟ್‌ ಇರುವ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದು ನನ್ನ ಅದೃಷ್ಟ’ ಎಂದು ಅವರು ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಾವು ನಟಿಸಿದ ‘ತೀನ್‌ ಪಟ್ಟಿ’ ಮತ್ತು ‘ಲವ್‌ ಕಾ ದಿ ಎಂಡ್‌’ ಚಿತ್ರಗಳಲ್ಲಿ ಸೋಲಿನ ರುಚಿ ಕಂಡಿದ್ದ ಶ್ರದ್ಧಾ 2013ರಲ್ಲಿ ತೆರೆಕಂಡ ರೊಮ್ಯಾಂಟಿಕ್‌ ಸಿನಿಮಾ ‘ಆಶಿಕಿ 2’ನ ಭರ್ಜರಿ ಯಶಸ್ಸಿನ ಮೂಲಕ ಜನಪ್ರಿಯರಾದರು.

1990ರಲ್ಲಿ ಬಂದ ‘ಆಶಿಕಿ’ ಚಿತ್ರದ ಎರಡನೇ ಭಾಗವಾದ ‘ಆಶಿಕಿ 2’ ಚಿತ್ರದಲ್ಲಿ ಶ್ರದ್ಧಾ ನಟನೆಗೆ ಬಿ–ಟೌನ್‌ನಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ‘ಏಕ್‌ ವಿಲನ್‌’ ಮತ್ತು ‘ಹೈದರ್‌’ ಚಿತ್ರಗಳಲ್ಲಿನ ನಟನೆಯ ಮೂಲಕ  ಶ್ರದ್ಧಾ ಬಾಲಿವುಡ್‌ ಅಂಗಳದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆ ಹುಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.