ADVERTISEMENT

ಸಂಪಿಗೆ ಮರದಡಿ ಸೂರಿ

ಅಮಿತ್ ಎಂ.ಎಸ್.
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST
ಸಂಪಿಗೆ ಮರದಡಿ ಸೂರಿ
ಸಂಪಿಗೆ ಮರದಡಿ ಸೂರಿ   

‘ಕೆಂಡಸಂಪಿಗೆ’ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಸ್ವತಃ ಅವರ ವ್ಯಕ್ತಿತ್ವಕ್ಕೂ ಸಂಪಿಗೆಯ ವಿಶೇಷಣ ಒಪ್ಪುತ್ತದೆ. ಹೊಸ ಸಿನಿಮಾ ಕಥೆಗಳ ಪರಿಮಳ, ಹರಟೆಯ ಘಾಟಿನ ಮಾತುಗಳು ತನ್ನ ಅರಿವು ಮೀರಿ ಪತ್ರಿಕೆಯಲ್ಲಿ ವರದಿಯಾಗುವ ವಿಷಾದ– ಇವೆಲ್ಲವನ್ನೂ ಮೀರಿ ಹೊಸ ಪ್ರಯೋಗಗಳಲ್ಲಿ ತಲ್ಲೀನರಾಗುವ ಬಗೆ... ಕೆಂಡಸಂಪಿಗೆಗೆ ಹಲವು ಆಯಾಮ.

‘ದೊಡ್ಡಮನೆ ಹುಡುಗ’, ‘ಕೆಂಡಸಂಪಿಗೆ’, ‘ಕಂಟ್ರಿ ಪಿಸ್ತೂಲು’ – ಮಗುವೊಂದು ಹಲವು  ಆಟಿಕೆಗಳನ್ನು ಗುಡ್ಡೆ ಹಾಕಿಕೊಂಡು ಕೂತಂತೆ ನಿರ್ದೇಶಕ ಸೂರಿ ಸಿನಿಮಾ ಕಥೆಗಳನ್ನು ಎದುರಿಗೆ ಇಟ್ಟುಕೊಂಡಿದ್ದಾರೆ. ಇವುಗಳಲ್ಲಿ ಯಾವುದು ಮೊದಲು?

ಮೊದಲು ಪಸರಿಸುವುದು ‘ಕೆಂಡಸಂಪಿಗೆ’ಯ ಪರಿಮಳ ಎನ್ನುವುದು ಸೂರಿ ನೀಡುವ ಸೂಚನೆ. ಪುನೀತ್‌ ರಾಜ್‌ಕುಮಾರ್‌ ನಟಿಸಲಿರುವ ‘ದೊಡ್ಡಮನೆ ಹುಡುಗ’ ಚಿತ್ರದ ಮೇಲೆ ಎಲ್ಲರ ಕುತೂಹಲ ಕೇಂದ್ರಿತವಾಗಿದೆ. ಆದರೆ, ಪುನೀತ್ ಈಗ ‘ಧೀರ ರಣವಿಕ್ರಮ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ ‘ದೊಡ್ಡಮನೆ ಹುಡುಗ’ ಸೆಟ್ಟೇರುವುದು ಜೂನ್‌ ನಂತರ. ಆ ವೇಳೆಗೆ ‘ಕೆಂಡಸಂಪಿಗೆ’ಯನ್ನು ಪೂರ್ಣಗೊಳಿಸುವ ಆಲೋಚನೆ ಸೂರಿ ಅವರದು.

‘ದೊಡ್ಡಮನೆ ಹುಡುಗ’ ಪುನೀತ್‌ ರಾಜ್‌ಕುಮಾರ್‌ ಅವರ   ಅಭಿಮಾನಿಗಳಿಗೋಸ್ಕರವೇ ಸಿದ್ಧವಾಗಲಿರುವ ಸಿನಿಮಾ. ಶೀರ್ಷಿಕೆ ಕೌಟುಂಬಿಕ ಕಥನದ ಪರಿಕಲ್ಪನೆ ಮೂಡಿಸಿದರೂ ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಎನ್ನುವ ವಿವರಣೆ ಸೂರಿ ಅವರದು. ಶೀರ್ಷಿಕೆಗೆ ಸೂಕ್ತವೆನಿಸುವ ಕಥೆ ಸಿನಿಮಾದಲ್ಲಿದೆ. ಹಳ್ಳಿ ಮತ್ತು ನಗರದ ಕಥನಗಳು ಬೆರೆಯಲಿವೆ. ಮನರಂಜನೆ ಬಯಸುವವರಿಗೆ ಭರ್ಜರಿ ಊಟ ಗ್ಯಾರಂಟಿ ಎಂಬ ಭರವಸೆ ನೀಡುತ್ತಾರೆ.

ಪ್ರಯೋಗಶೀಲ ಸೂರಿ
‘ಕಂಟ್ರಿ ಪಿಸ್ತೂಲು’ ಮತ್ತು ‘ಕೆಂಡಸಂಪಿಗೆ’ – ಎರಡೂ ಸಿನಿಮಾಗಳಲ್ಲಿ ಹೊಸಮುಖಗಳು ಕಾಣಿಸಿಕೊಳ್ಳಲಿವೆ. ‘ಕೆಂಡಸಂಪಿಗೆ’ಯಲ್ಲಿ ಸಂಪಿಗೆಯ ಘಮಲು ಇದೆಯೇ ಎಂದರೆ, ‘ಇಲ್ಲ’ ಎಂದು ನಗುತ್ತಾರೆ ಸೂರಿ. ಶೀರ್ಷಿಕೆಗೆ ಕಥೆಗೂ ಅಷ್ಟಾಗಿ ತಾಳೆಯಾಗುವುದಿಲ್ಲ. ಇದೂ ಕೂಡ ಆ್ಯಕ್ಷನ್‌ ಸಿನಿಮಾ. ಒಳಗೊಂದು ಪ್ರೇಮಕಥೆಯೂ ಇದೆ ಎನ್ನುತ್ತಾರೆ. ಸೂರಿ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಸಹಜ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲಗಳನ್ನು ಉಳಿಸಿಕೊಳ್ಳುವುದು ಸೂರಿಗೂ ಖುಷಿಯಂತೆ.

ಕಥೆ ವಿಶೇಷ ಎನಿಸಿದರೆ ಮಾತ್ರ ಸಿನಿಮಾ ಮಾಡಲು ಮುಂದಾಗುವುದು. ಮೂರರಲ್ಲಿ ಒಂದಾಗುವ ಸಿನಿಮಾ ಮಾಡಲು ಇಷ್ಟವಿಲ್ಲ. ಕಥೆ ಮನಸಿಗೆ ಒಪ್ಪಿತವಾದರೆ ಮಾತ್ರ ಅದು ಸಿನಿಮಾ ರೂಪ ತಾಳುತ್ತದೆ. ಅಂಥ ಕಥೆಗಳು ಸಿಕ್ಕಿವೆ. ಅದನ್ನು ಚಿತ್ರಕಥೆಗೆ ವಿಸ್ತರಿಸುವ ಕೆಲಸ ಸಾಗುತ್ತಿದೆ ಎಂದು ಅವರು ಹೇಳುತ್ತಾರೆ.

‘ಈ ಎಲ್ಲಾ ಸಿನಿಮಾಗಳು ಪಕ್ಕಾ ನನ್ನ ಶೈಲಿಯದ್ದೇ ಆಗಿರುತ್ತವೆ. ನನ್ನದಲ್ಲದ ರೀತಿಯ ಸಂಗತಿಗಳನ್ನು ತೆರೆ ಮೇಲೆ ತರುವುದು ನನಗೆ ಇಷ್ಟವಿಲ್ಲ. ಮೊದಲು ನನಗೆ ತೃಪ್ತಿ ನೀಡಬೇಕು. ಆಮೇಲೆ ಉಳಿದದ್ದು’ ಎನ್ನುವ ಅವರು, ‘ಇಂತಿ ನಿನ್ನ ಪ್ರೀತಿಯ’ ಶೈಲಿಯ ಸಿನಿಮಾಗಳೂ ಮುಂದೆ ಬರುತ್ತವೆ ಎನ್ನುತ್ತಾರೆ. ಈ ಮೂರು ಸಿನಿಮಾಗಳು ಒಂದಕ್ಕಿಂತ ಇನ್ನೊಂದು ವಿಭಿನ್ನ ಅನುಭವ ನೀಡುವುದು ಖಚಿತ. ಪ್ರಯೋಗಕ್ಕೆ ಒಡ್ಡಿಕೊಳ್ಳಲು ಸೂಕ್ತವಾದ ಕಥೆಗಳಿವು ಎನ್ನುವುದು ಅವರ ವಿವರಣೆ.

‘ಕಡ್ಡಿಪುಡಿ’ ಬಳಿಕ ದೀರ್ಘ ವಿರಾಮ ತೆಗೆದುಕೊಂಡ ಸೂರಿ, ಈ ಅವಧಿಯನ್ನು ಸಾಹಿತಿಗಳ ಭೇಟಿ, ಚರ್ಚೆ, ಓದು, ಸುತ್ತಾಟ ಮತ್ತು ಸಿನಿಮಾಗಳ ವೀಕ್ಷಣೆಗೆ ಮೀಸಲಿಟ್ಟಿದ್ದರಂತೆ. ಈ ಚಟುವಟಿಕೆಗಳ ಅಗತ್ಯವಿತ್ತು. ಅದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ ಎನ್ನುತ್ತಾರೆ. ಹಳೆಯ ಕಥೆಗಳ ರಾಶಿಯನ್ನು ತಡಕಾಡಿದ ಅವರಿಗೆ ಅದರ ವಸ್ತುಗಳು ರುಚಿಸಿಲ್ಲ. ಹೀಗಾಗಿ ಮತ್ತಷ್ಟು ಹೊಸ ಕಥನಗಳನ್ನು ಹೊಸೆಯುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಸುತ್ತಾಟದ ಜೊತೆಯಲ್ಲಿ ತಮ್ಮ ಸಿನಿಮಾಗಳ ಚಿತ್ರೀಕರಣ ತಾಣಗಳನ್ನೂ ಅವರು ಆಯ್ಕೆ ಮಾಡಿದ್ದಾರೆ. 

ಜಗಳ ಸಹಜ
ಗೆಳೆಯ ಯೋಗರಾಜ್‌್ ಭಟ್ ಜೊತೆಗಿನ ವಿರಸ ಅಲ್ಪಕಾಲದ್ದು ಎನ್ನುವುದು ಸೂರಿ ಮಾತು. ಪತ್ರಿಕೆಯೊಂದರ ವರದಿಯಲ್ಲಿ ಭಟ್ಟರ ಮೇಲಿನ ಕಹಿಯನ್ನೆಲ್ಲಾ ಸೂರಿ ಹೊರಹಾಕಿದ್ದರು. ‘ಅದೆಲ್ಲ ಮನಸ್ಸಿನಿಂದ ಬಂದ ಮಾತಲ್ಲ. ನಮ್ಮಿಬ್ಬರದೂ 12 ವರ್ಷಕ್ಕೂ ಮೀರಿದ ಗೆಳೆತನ. ಆಗಿನಿಂದಲೂ ಸಣ್ಣಪುಟ್ಟ ಮನಸ್ತಾಪ, ಜಗಳಗಳು ನಡೆಯುತ್ತಲೇ ಇವೆ. ಜಗಳವಾಡುತ್ತೇವೆ, ಸಂಜೆ ವೇಳೆಗೆ ಸರಿ ಹೋಗುತ್ತೇವೆ. ಏನೇ ಆದರೂ ಅಲ್ಲಿಗೇ ಮರೆತುಬಿಡುವ ಜಾಯಮಾನ ಇಬ್ಬರದೂ. ಬಾಯಿ ತಪ್ಪಿ ಆಡಿದ ಮಾತುಗಳಿಗೆ ಕ್ಷಮೆ ಕೋರಿದ್ದೇನೆ. ಆತ್ಮೀಯ ವಲಯದವರೊಂದಿಗೆ ಹರಟುವಾಗ ಮಾತು ಎಲ್ಲಿಗೋ ತಿರುಗುತ್ತದೆ. ಅದು ಪತ್ರಿಕೆಯಲ್ಲಿ ಬರುತ್ತದೆ ಎನ್ನುವುದೇ ಗೊತ್ತಿರುವುದಿಲ್ಲ’ ಎಂದು ಸೂರಿ ಹೇಳುತ್ತಾರೆ.

‘ತಾಯಿ ಬಳಿ, ಮೇಷ್ಟ್ರು ಬಳಿ ಜಗಳವಾಡುವುದಿಲ್ಲವೇ? ಅದು ಮನಸ್ಸಿನಿಂದ ಬರಲು ಹೇಗೆ ಸಾಧ್ಯ? ಅದೇ ಪ್ರೀತಿ, ಅದೇ ಹುಚ್ಚಾಟ, ಅದೇ ಕಿರಿಕ್ಕುಗಳು ಯಾವಾಗಲೂ ನಮ್ಮ  ನಡುವೆ ಇದ್ದೇ ಇರುತ್ತವೆ. ಈಗ ಅದೆಲ್ಲಾ ಹಳೆಯದಾಯಿತು. ಕಥೆ, ಹಾಡು ಇತ್ಯಾದಿಗಳ ಬಗ್ಗೆ ಹಿಂದಿನಂತೆಯೇ ಕುಳಿತು ಚರ್ಚಿಸುತ್ತೇವೆ. ಮತ್ತೆ ಜಗಳವಾಡುತ್ತೇವೆ’ ಎಂದೂ ಸೂರಿ ಹೇಳುತ್ತಾರೆ.

ಸದ್ಯಕ್ಕೆ ಸಿನಿಮಾ ನಿರ್ಮಾಣದ ಬಗ್ಗೆ ಸೂರಿ ಅವರಿಗೆ ಆಸಕ್ತಿಯಿಲ್ಲ. ನಿರ್ದೇಶನದತ್ತ ಗಮನ ಹರಿಸಿರುವ ಅವರು, ನಿರ್ಮಾಣದ ಬಗ್ಗೆ ಯೋಚಿಸಲು ಇನ್ನೂ ಸಮಯವಿದೆ ಎನ್ನುತ್ತಾರೆ. ‘ಕಂಟ್ರಿ ಪಿಸ್ತೂಲು’ ಯೋಗರಾಜ್‌ ಭಟ್ಟರ ಬ್ಯಾನರ್‌ನಿಂದಲೇ ಹೊರಬರುವ ಸಾಧ್ಯತೆ ಇದೆ ಎನ್ನುವ ಸೂಚನೆಯನ್ನೂ ಸೂರಿ ನೀಡುತ್ತಾರೆ.

ಅಂದಹಾಗೆ, ಸೂರಿ ಈಗ ಮಾತು ಕಡಿಮೆ ಮಾಡಿದ್ದಾರಂತೆ. ಮಾತುಗಳು ದಿಕ್ಕುತಪ್ಪಿದರೆ ಆಗುವ ಅನಾಹುತ ಅವರಿಗೆ ಅರಿವಾಗಿದ್ದರೂ, ಇದು ಸ್ವಯಂ ನಿಯಂತ್ರಣವಲ್ಲ ಎನ್ನುತ್ತಾರೆ. ಈಗ ಒಂದರ ಹಿಂದೊಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಮಾತಿಗೆ ಅಲ್ಪ ವಿರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT